ಬೆಂಗಳೂರು: ಟಿ20 ಎಂಬ ಚುಟುಕು ಮಾದರಿಯ ಮೊದಲ ವಿಶ್ವಕಪ್(ICC World T20 2007) ಗೆದ್ದ ದಾಖಲೆ ಭಾರತ ತಂಡದ ಹೆಸರಿನಲ್ಲಿದೆ. 2007 ಸೆ. 24ರಂದು(T20 World Cup 2007) ಮಹೇಂದ್ರ ಸಿಂಗ್ ಧೋನಿ(ms dhoni) ನೇತೃತ್ವದ ಯುವ ಭಾರತ ತಂಡ ವಿಶ್ವಕಪ್ ಗೆದ್ದು ಬೀಗಿತ್ತು. ದುರಾದೃಷ್ಟವೆಂದರೆ ಆ ಬಳಿಕ ಭಾರತ ಇದುವರೆಗೂ ಒಂದೂ ಟ್ರೋಫಿ ಗೆದ್ದಿಲ್ಲ. ಇದೀಗ 17 ವರ್ಷಗಳ ಬಳಿಕ ಭಾರತ ಕಪ್ ಗೆದ್ದು ಬೀಗೀತೇ ಎಂದು ಕಾದು ನೋಡಬೇಕಿದೆ. ಚೊಚ್ಚಲ ಟಿ20 ವಿಶ್ವಕಪ್ ಫೈನಲ್ನ ಮೆಲುಕು ನೋಟ ಇಂತಿದೆ.
ಅದು, ವೆಸ್ಟ್ ಇಂಡೀಸ್‌ನಲ್ಲಿ ನಡೆದಿದ್ದ ಏಕದಿನ ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಭಾರತ ತಂಡವು ಹೀನಾಯವಾಗಿ ಸೋಲು ಕಂಡ ವರ್ಷವಾಗಿತ್ತು. ಈ ಸೋಲಿನಿಂದ ಕಂಗೆಟ್ಟಿದ್ದ ಸಚಿನ್ ತೆಂಡೂಲ್ಕರ್, ರಾಹುಲ್ ದ್ರಾವಿಡ್, ಸೌರವ್ ಗಂಗೂಲಿ ಸೇರಿ ಖ್ಯಾತನಾಮ ಆಟಗಾರರು ಈ ಟೂರ್ನಿಯಲ್ಲಿ ಆಡಲು ಹಿಂದೇಟು ಹಾಕಿದರು. ಎಲ್ಲರು ವಿಶ್ರಾಂತಿ ಬಯಸಿದರು. ದಿಕ್ಕು ತೋಚದೆ ಬಿಸಿಸಿಐ ಆಗಿದ್ದಾಗಲಿ ಎಂದು ವಿಕೆಟ್‌ಕೀಪರ್ ಧೋನಿಗೆ ನಾಯಕತ್ವ ನೀಡಿ ಯುವ ಪಡೆಯನ್ನು ಕಣಕ್ಕಿಳಿಸಿತು. ಧೋನಿ ನೇತೃತ್ವದ ಯುವಪಡೆ ತಮ್ಮ ಮೊದಲ ಪ್ರಯತ್ನದಲೇ ಕಪ್ ಗೆದ್ದು ಇತಿಹಾಸ ಸೃಷ್ಟಿಸಿತ್ತು.
ಹಲವು ಅಚ್ಚರಿ
ಕೂಟದಲ್ಲಿ ಹಲವು ಅಚ್ಚರಿಗಳಿಗೆ ಕಾರಣವಾಗಿ ಭಾರತ ತಂಡ ಫೈನಲ್ ಪ್ರವೇಶ ಪಡೆದಿತ್ತು. ಲೀಗ್ ಹಂತದಲ್ಲಿ ಪಾಕಿಸ್ತಾನ ವಿರುದ್ಧ ಬಾಲ್ ಔಟ್ ಮುಖಾಂತರ ಜಯ ಸಾಧಿಸಿದ್ದ ಭಾರತ ಮತ್ತೊಂದು ಹೈ ವೋಲ್ಟೇಜ್ ಪಂದ್ಯಕ್ಕೆ ಸಜ್ಜಾಗಿತ್ತು. ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಭಾರತ ತಂಡ 157 ರನ್ ಗಳಿಸಿತು. ಗೌತಮ್ ಗಂಭೀರ್ 75 ರನ್ ಗಳಿಸಿದ್ದರೆ, ರೋಹಿತ್ ಶರ್ಮಾ 30 ರನ್ ಕೊಡುಗೆ ನೀಡಿದ್ದರು. ಉಳಿದ ಯಾರಿಂದಲೂ ಹೇಳಿಕೊಳ್ಳುವ ಪ್ರದರ್ಶನ ತಂಡಕ್ಕೆ ಸಿಗಲಿಲ್ಲ. ಪಾಕ್ ಪರ ಉಮರ್ ಗುಲ್ ಮೂರು ವಿಕೆಟ್ ಕಿತ್ತಿದ್ದರು.
ಇದನ್ನೂ ಓದಿ T20 World Cup 2024: ಒಂದೇ ಆವೃತ್ತಿಯಲ್ಲಿ ಅತ್ಯಧಿಕ ರನ್ ಗಳಿಸಿದ ಬ್ಯಾಟರ್ಗಳು ಯಾರು?
ಸಾಧಾರಣ ಗುರಿ ಬೆನ್ನತ್ತಿದ್ದ ಪಾಕ್ ಓಂದೆಡೆ ವಿಕೆಟ್ ಬೀಳುತ್ತಿದ್ದರೂ ಮಿಸ್ಬಾ ಉಲ್ ಹಕ್ ನಿಂತು ಆಡುತ್ತಿದ್ದರು. ಕೊನೆಯ ಓವರ್ ನಲ್ಲಿ 13 ರನ್ ಬೇಕಾಗಿತ್ತು. ಕೈಯಲ್ಲಿ ಇದ್ದಿದ್ದು ಒಂದು ವಿಕೆಟ್. ಜೋಗಿಂದರ್ ಶರ್ಮಾರ ಎರಡನೇ ಎಸೆತವನ್ನು ಸಿಕ್ಸರ್ಗೆ ಅಟ್ಟಿದ ಮಿಸ್ಬಾ ಮೂರನೇ ಎಸೆತವನ್ನು ಫೈನ್ ಲೆಗ್ಗೆ ಸ್ಕೂಪ್ ಮಾಡಿದ್ದರು. ಆದರೆ ಚೆಂಡು ಶ್ರೀಶಾಂತ್ ಕೈ ಸೇರಿತ್ತು. ಪಾಕಿಸ್ತಾನ ಆಲ್ಔಟ್ ಆಯಿತು. ಭಾರತ ಕೇವಲ 5 ರನ್ ಅಂತರದಿಂದ ಗೆದ್ದು ಟ್ರೋಫಿ ಎತ್ತಿ ಹಿಡಿಯಿತು. ಇಲ್ಲಿಂದ ಧೋನಿ ಯುಗ ಕೂಡ ಆರಂಭವಾಯಿತು. ಭಾರತ ಪರ ಬೌಲಿಂಗ್ನಲ್ಲಿ ಇರ್ಫಾನ್ ಪಠಾಣ್ (16 ಕ್ಕೆ 3), ಆರ್.ಪಿ ಸಿಂಗ್(24ಕ್ಕೆ 3), ಜೋಗಿಂದರ್ ಶರ್ಮಾ(20ಕ್ಕೆ 2) ವಿಕೆಟ್ ಕಿತ್ತು ಮಿಂಚಿದ್ದರು.