ಬೆಂಗಳೂರು: ಬಾರ್ಬಡೋಸ್ನ ಕೆನ್ಸಿಂಗ್ಟನ್ ಓವಲ್ನಲ್ಲಿ ಜೂನ್ 29ರಂದು ನಡೆದ ಟಿ20 ವಿಶ್ವಕಪ್ 2024 (T20 World Cup 2024) ಫೈನಲ್ನಲ್ಲಿ ಟೀಮ್ ಇಂಡಿಯಾ ದಕ್ಷಿಣ ಆಫ್ರಿಕಾವನ್ನು ಏಳು ರನ್ಗಳ ಅಂತರದಿಂದ ಸೋಲಿಸುವ ಮೂಲಕ ಚಾಂಪಿಯನ್ ಆಗಿ ಹೊರ ಹೊಮ್ಮಿದೆ. ಈ ಹಿನ್ನೆಲೆಯಲ್ಲಿ ದೇಶಾದ್ಯಂತ ಸಂಭ್ರಮಾಚರಣೆ ಮುಗಿಲು ಮುಟ್ಟಿದೆ. ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಭಾಗಗಳಲ್ಲಿ ಕ್ರಿಕೆಟ್ ಅಭಿಮಾನಿಗಳು ಟೀಮ್ ಇಂಡಿಯಾ ಗೆಲುವುವನ್ನು ಕೊಂಡಾಡಿದರು.
ಬೆಂಗಳೂರು: ಬೆಂಗಳೂರಿನ ಹಲವು ಭಾಗಗಳಲ್ಲಿ ಕ್ರಿಕೆಟ್ ಅಭಿಮಾನಿಗಳ ಸಡಗರ ಮುಗಿಲು ಮುಟ್ಟಿತ್ತು. ಎಂ.ಜಿ. ರಸ್ತೆ, ಬ್ರಿಗೇಡ್ ರೋಡ್, ಕೋರಮಂಗಲ ಸೇರಿದಂತೆ ಬೆಂಗಳೂರಿನ ಹಲವು ಭಾಗಗಳಲ್ಲಿ ಕ್ರಿಕೆಟ್ ಅಭಿಮಾನಿಗಳು ಪಟಾಕಿ ಸಿಡಿಸಿ, ಘೋಷಣೆ ಕೂಗಿ ಮತ್ತು ತ್ರಿವರ್ಣ ಧ್ವಜ ಹಾರಿಸಿ, ಹಾಡುಗಳಿಗೆ ಕುಣಿದು ಸಂಭ್ರಮ ಆಚರಿಸಿ ಭಾರತ ತಂಡಕ್ಕೆ ಅಭಿನಂದನೆ ಸಲ್ಲಿಸಿದರು.
ಬೆಳಗಾವಿ: ಭಾರತ ತಂಡ ಎರಡನೇ ಬಾರಿಗೆ ಟಿ-20 ವಿಶ್ವಕಪ್ ಗೆದ್ದ ಹಿನ್ನೆಲೆಯಲ್ಲಿ ಬೆಳಗಾವಿಯ ಸಮಾದೇವಿ ಗಲ್ಲಿಯಲ್ಲಿ ಕ್ರಿಕೆಟ್ ಪ್ರೇಮಿಗಳು ಭಾರತ ಧ್ವಜ, ಭಗವಾಧ್ವಜ ಪ್ರದರ್ಶಿಸಿ ಖುಷಿಪಟ್ಟರು. ಜತೆಗೆ ಡಿಜೆಗೆ ಸಖತ್ ಸ್ಟೆಪ್ ಹಾಕಿ ಕ್ರೀಡಾ ಪ್ರೇಮಿಗಳು ಸಂಭ್ರಮಿಸಿದರು. ಕನ್ನಡ, ಹಿಂದಿ ಹಾಡುಗಳ ನಡುವೆ ಯುವ ಜನತೆಯ ಡ್ಯಾನ್ಸ್ ಗಮನ ಸೆಳೆಯಿತು.
ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ ಭಾರತದ ಗೆಲುವನ್ನು ಕ್ರಿಕೆಟ್ ಪ್ರೇಮಿಗಳು ಸಂಭ್ರಮಿಸಿದರು. ಭಟ್ಕಳದ ಸಂಶುದ್ದೀನ್ ವೃತ್ತದಲ್ಲಿ ತಡರಾತ್ರಿ ಸಂಭ್ರಮಾಚರಣೆ ನಡೆಯಿತು. ನೂರಾರು ಸಂಖ್ಯೆಯಲ್ಲಿ ಹೆದ್ದಾರಿಯಲ್ಲಿ ಜಮಾಯಿಸಿದ ಕ್ರಿಕೆಟ್ ಪ್ರೇಮಿಗಳು ಸಂಚರಿಸುತ್ತಿದ್ದ ವಾಹನಗಳ ಎದುರು ಕುಣಿದು ಕುಪ್ಪಳಿಸಿದರು. ಭಾರತದ ಬಾವುಟ ಹಿಡಿದ ಯುವಕರು, ಮಕ್ಕಳು, ಕ್ರಿಕೆಟ್ ಪ್ರೇಮಿಗಳ ಸಂಭ್ರಮ ಮುಗಿಲು ಮುಟ್ಟಿತು. ಸಂಭ್ರಮಾಚರಣೆ ಹಿನ್ನೆಲೆಯಲ್ಲಿ ಕೆಲಕಾಲ ಹೆದ್ದಾರಿ ಸಂಚಾರ ಅಸ್ತವ್ಯಸ್ತಗೊಂಡ ಪ್ರಸಂಗವೂ ನಡೆಯಿತು. ಕ್ರಿಕೆಟ್ ಪ್ರೇಮಿಗಳನ್ನು ನಿಯಂತ್ರಿಸಲು ಪೊಲೀಸರ ಹರಸಾಹಸ ಪಡಬೇಕಾಯಿತು. ಕೊನೆಗೆ ವಾಹನ ಸಂಚಾರಕ್ಕೆ ಅಡ್ಡಿಯಾಗದಂತೆ ಕ್ರಿಕೆಟ್ ಪ್ರೇಮಿಗಳನ್ನು ಪೊಲೀಸರು ಚದುರಿಸಿದರು.
ವಿಜಯನಗರ: ವಿಜಯನಗರ ಜಿಲ್ಲೆಯ ಹೊಸಪೇಟೆ ನಗರದಲ್ಲಿಯೂ ಸಂಭ್ರಮ ಮನೆ ಮಾಡಿತು. ಹೊಸಪೇಟೆ ನಗರದ ಡಾ. ಪುನೀತ್ ರಾಜ್‌ಕುಮಾರ್ ಸರ್ಕಲ್‌ನಲ್ಲಿ ಅಭಿಮಾನಿಗಳು ʼಇಂಡಿಯಾ ಇಂಡಿಯಾʼ ಎಂದು ಘೋಷಣೆ ಕೂಗಿ ಸಂಭ್ರಮಾಚರಣೆ ನಡೆಸಿದರು.
ಧಾರವಾಡ: ಧಾರವಾಡದ ಶ್ರೀನಗರ ವೃತ್ತದಲ್ಲಿ ಗುಂಪುಗೂಡಿದ ಯುವಕರ ತಂಡ ಭಾರತ ಗೆದ್ದ ತಕ್ಷಣವೇ ಟೀಮ್ ಇಂಡಿಯಾಕ್ಕೆ ಜಯಘೋಷ ಮೊಳಗಿಸಿತು. ʼಭಾರತ ಮಾತಾ ಕೀ ಜೈʼ ಎಂದು ಘೋಷಣೆಯೂ ಕೇಳಿ ಬಂತು.
ಮೈಸೂರು: ಮೈಸೂರಿನಲ್ಲಿ ಕ್ರಿಕೆಟ್ ಪ್ರೇಮಿಗಳು ಪಟಾಕಿ ಸಿಡಿಸಿ, ಸಿಹಿ ಹಂಚಿಕೆ ಮಾಡುವ ಮೂಲಕ ಭಾರತದ ಗೆಲುವನ್ನು ಇನ್ನಷ್ಟು ಸಿಹಿಯಾಗಿಸಿದರು. ಭಾರತ ದ್ವಜವನ್ನು ಹಿಡಿದು ದ್ವಿಚಕ್ರ ವಾಹನದ ಮೂಲಕ ಮುಖ್ಯ ರಸ್ತೆಗಳಲ್ಲಿ ಸಾಗಿ ʼಜಿತಾಗಾ ಭೈ ಜಿತೇಗಾ ಭಾರತ್ ಟೀಂ ಜೀತೇಗಾʼ ಎಂಬ ಘೋಷಣೆ ಕೂಗಿದರು. ಈ ಸಂದರ್ಭದಲ್ಲಿ ವಿಕ್ರಂ ಅಯ್ಯಂಗಾರ್, ಕಿರಣ್, ಸುದೀಂದ್ರ, ಬೆಲ್ಲ ರಾಜಣ್ಣ ಮಂಜುನಾಥ್, ಸಚಿನ್ ನಾಯಕ್ ಮತ್ತಿತರರು ಪಾಲ್ಗೊಂಡಿದ್ದರು.
ಶಿವಮೊಗ್ಗ: ಶಿವಮೊಗ್ಗದಲ್ಲಿ ಪಟಾಕಿ ಸಿಡಿಸಿ ಸಂಭ್ರಮಾಚರಣೆ ನಡೆಸಲಾಯಿತು. ಶಿವಮೊಗ್ಗ ನಗರದ ಗೋಪಿ ವೃತ್ತದಲ್ಲಿ ಭಾರತದ ಧ್ವಜ ಹಿಡಿದು ಕ್ರೀಡಾಭಿಮಾನಿಗಳು ಸಂಭ್ರಮಿಸಿದರು. ಹೀಗೆ ರಾಜುದ ವಿವಿಧ ಕಡೆ ಅಭಿಮಾನಿಗಳು ಸಂಭ್ರಮಾಚರಿಸಿದರು.
ಕಲಬುರಗಿ: ಕಲಬುರಗಿಯಲ್ಲಿ ಯುವಕರು ಸಂಭ್ರಮಾಚರಿಸಿದರು. ಕಲಬುರಗಿಯ ಸರ್ದಾರ್ ವಲ್ಲಾಭಾಯಿ ಪಟೇಲ್ ವೃತ್ತದಲ್ಲಿ ರಾತ್ರೋರಾತ್ರಿ ರಸ್ತೆಗಿಳಿದು ಕಾರು– ಬೈಕ್‌ಗಳಲ್ಲಿ ಪ್ರಮುಖ ರಸ್ತೆಗಳಲ್ಲಿ ಸುತ್ತುತ್ತ ‘ಇಂಡಿಯಾ–ಇಂಡಿಯಾ’, ‘ಕೊಹ್ಲಿ–ಕೊಹ್ಲಿ’ ಎಂದು ಘೋಷಣೆ ಕೂಗಿದರು. ನೂರಾರು ಕ್ರಿಕೆಟ್ ಅಭಿಮಾನಿಗಳು ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಿದರು. ತ್ರಿವರ್ಣ ಧ್ವಜ ಹಿಡಿದು ಜೈಕಾರ ಹಾಕಿದರು.
ಇದನ್ನೂ ಓದಿ: T20 World Cup 2024 : ಒಂದೇ ಒಂದು ಸೋಲು ಕಾಣದೆ ವಿಶ್ವ ಕಪ್ ಗೆದ್ದು ಇತಿಹಾಸ ಸೃಷ್ಟಿಸಿದ ಭಾರತ ತಂಡ