ನ್ಯೂಯಾರ್ಕ್: ಬಹುನಿರೀಕ್ಷಿತ ಪುರುಷರ ಐಸಿಸಿ ಟಿ20 ವಿಶ್ವಕಪ್ ಟೂರ್ನಿ(T20 World Cup 2024) ನಾಳೆಯಿಂದ ಆರಂಭಗೊಳ್ಳಲಿದೆ. ಭರ್ತಿ ಒಂದು ತಿಂಗಳ ಕಾಲ ಟೂರ್ನಿ ನಡೆಯಲಿದ್ದು ಕ್ರಿಕೆಟ್ ಅಭಿಮಾನಿಗಳಿಗೆ ಈ ಒಂದು ತಿಂಗಳು ರಸದೌತಣ ಸಿಗಲಿದೆ. ಟೂರ್ನಿಯಲ್ಲಿ ಇದೇ ಮೊದಲ ಬಾರಿಗೆ ಗರಿಷ್ಠ 20 ತಂಡಗಳು ಭಾಗವಹಿಸುತ್ತಿವೆ. ಭಾರತ ಮತ್ತು, ಇನ್ನುಳಿದ ಬಲಿಷ್ಠ ತಂಡಗಳ ಪಂದ್ಯದ(T20 World Cup Schedule) ವೇಳಾಪಟ್ಟಿ ಇಂತಿದೆ.
ಭಾರತದ ಪಂದ್ಯಗಳು
ದಿನಾಂಕ | ಎದುರಾಳಿ | ಸ್ಥಳ |
ಜೂನ್ 5 | ಐರ್ಲೆಂಡ್ | ನ್ಯೂಯಾರ್ಕ್ |
ಜೂನ್ 9 | ಪಾಕಿಸ್ತಾನ | ನ್ಯೂಯಾರ್ಕ್ |
ಜೂನ್ 12 | ಅಮೆರಿಕ | ನ್ಯೂಯಾರ್ಕ್ |
ಜೂನ್ 15 | ಕೆನಡಾ | ಫ್ಲೋರಿಡಾ |
ಮೊದಲ ಸುತ್ತಿನ ಇತರ ಪಂದ್ಯಗಳು
ದಿನಾಂಕ | ಪಂದ್ಯ | ಸ್ಥಳ |
ಜೂನ್ 3 | ಶ್ರೀಲಂಕಾ-ದಕ್ಷಿಣ ಆಫ್ರಿಕಾ | ನ್ಯೂಯಾರ್ಕ್ |
ಜೂನ್ 7 | ನ್ಯೂಜಿಲ್ಯಾಂಡ್-ಅಫಘಾನಿಸ್ತಾನ | ಗಯಾನ |
ಜೂನ್ 7 | ಶ್ರೀಲಂಕಾ-ಬಾಂಗ್ಲಾದೇಶ | ಡಲ್ಲಾಸ್ |
ಜೂನ್ 8 | ಆಸ್ಟ್ರೇಲಿಯಾ-ಇಂಗ್ಲೆಂಡ್ | ಬಾರ್ಬಡೋಸ್ |
ಜೂನ್ 10 | ದಕ್ಷಿಣ ಆಫ್ರಿಕಾ-ಬಾಂಗ್ಲಾದೇಶ | ನ್ಯೂಯಾರ್ಕ್ |
ಜೂನ್ 12 | ವೆಸ್ಟ್ ಇಂಡೀಸ್-ನ್ಯೂಜಿಲ್ಯಾಂಡ್ | ನ್ಯೂಯಾರ್ಕ್ |
ಜೂನ್ 15 | ಆಸ್ಟ್ರೇಲಿಯಾ-ಸ್ಕಾಟ್ಲೆಂಡ್ | ಸೇಂಟ್ ಲೂಸಿಯಾ |
ಜೂನ್ 17 | ವೆಸ್ಟ್ ಇಂಡೀಸ್-ಅಫಘಾನಿಸ್ತಾನ | ಸೇಂಟ್ ಲೂಸಿಯಾ |
ನಾಕೌಟ್ ಪಂದ್ಯಗಳ ವೇಳಾಪಟ್ಟಿ
ದಿನಾಂಕ | ಪಂದ್ಯ | ಸ್ಥಳ |
ಜೂನ್ 26 | ಮೊದಲ ಸೆಮಿಫೈನಲ್ | ಗಯಾನ |
ಜೂನ್ 27 | ದ್ವಿತೀಯ ಸೆಮಿಫೈನಲ್ | ಟ್ರಿನಿಡಾಡ್ |
ಜೂನ್ 29 | ಫೈನಲ್ | ಬಾರ್ಬಡೋಸ್ |
ಅಮೆರಿಕದಲ್ಲೇ ಭಾರತದ ಬಹುಪಾಲು ಪಂದ್ಯ
ಭಾರತವು ತನ್ನ ಗುಂಪು ಹಂತದ ಎಲ್ಲಾ ಪಂದ್ಯಗಳನ್ನು ಅಮೆರಿಕದಲ್ಲೇ ಆಡಲಿದೆ. ಲೀಗ್ ಮುಕ್ತಾಯದ ಬಳಿಕ ಮುಂದಿನ ಹಂತಕ್ಕೆ ಅರ್ಹತೆ ಪಡೆದರೆ, ಸೂಪರ್ 8 ಪಂದ್ಯಗಳನ್ನು ಸಹ ಇಲ್ಲೇ ಆಡಲಿದೆ. ಟೂರ್ನಿಯಲ್ಲಿ ಒಟ್ಟು 55 ಪಂದ್ಯಗಳು ನಡೆಯಲಿವೆ. ಜೂನ್ 1ರಿಂದ 18ರವರೆಗೆ ಗುಂಪು ಹಂತದಲ್ಲಿ 40 ಪಂದ್ಯಗಳು ನಡೆಯಲಿವೆ. ಜೂನ್ 19 ರಿಂದ 24 ರವರೆಗೆ ಸೂಪರ್ 8 ಪಂದ್ಯಗಳು ನಡೆಯಲಿವೆ.
ಇದನ್ನೂ ಓದಿ T20 World Cup 2024: ನಾಳೆಯಿಂದ ಟಿ20 ವಿಶ್ವಕಪ್ ಸಮರ ಆರಂಭ; 20 ತಂಡಗಳ ಮಾಹಿತಿ ಹೀಗಿದೆ
ಮೀಸಲು ದಿನ
ಟೂರ್ನಿಯ ಲೀಗ್ ಮತ್ತು ಸೂಪರ್ 8 ಪಂದ್ಯಗಳಿಗೆ ಯಾವುದೇ ಮೀಸಲು ದಿನ ಇಲ್ಲ. ಈ ಪಂದ್ಯಗಳಿಗೆ ಮಳೆ ಬಂದು ಪಂದ್ಯ ರದ್ದಾದರೆ ಸಮಾನ ಅಂಕ ನೀಡಲಾಗುತ್ತದೆ. ಆದರೆ, ಸೆಮಿಫೈನಲ್ ಮತ್ತು ಫೈನಲ್ ಪಂದ್ಯಗಳಿಗೆ ಮೀಸಲು ದಿನ ಇರಲಿದೆ. ಒಂದೊಮ್ಮೆ ಸೆಮಿ ಮತ್ತು ಫೈನಲ್ ಫೈನಲ್ ಪಂದ್ಯಗಳು ಕೂಡ ಮೀಸಲು ದಿನವೂ ನಡೆಯದಿದ್ದರೆ ಆಗ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆದ ತಂಡಕ್ಕೆ ಲಾಭ ಸಿಗಲಿದೆ.
4 ಗುಂಪುಗಳ ತಂಡಗಳ ಪಟ್ಟಿ
ಗುಂಪು ಎ- ಭಾರತ, ಪಾಕಿಸ್ತಾನ, ಐರ್ಲೆಂಡ್, ಕೆನಡಾ, ಯುಎಸ್ಎ.
ಗುಂಪು ಬಿ- ಇಂಗ್ಲೆಂಡ್, ಆಸ್ಟ್ರೇಲಿಯಾ, ನಮೀಬಿಯಾ, ಸ್ಕಾಟ್ಲೆಂಡ್, ಓಮನ್.
ಗುಂಪು ಸಿ- ನ್ಯೂಜಿಲ್ಯಾಂಡ್, ಅಫಘಾನಿಸ್ತಾನ, ವೆಸ್ಟ್ ಇಂಡೀಸ್, ಉಗಾಂಡಾ, ಪಿಎನ್ಜಿ.
ಗುಂಪು ಡಿ- ದಕ್ಷಿಣ ಆಫ್ರಿಕಾ, ಬಾಂಗ್ಲಾದೇಶ, ನೆದರ್ಲ್ಯಾಂಡ್ಸ್, ಶ್ರೀಲಂಕಾ, ನೇಪಾಳ.
ಸ್ವರೂಪ ಬದಲು
2022ರ ಆವೃತ್ತಿಯಲ್ಲಿ 12 ತಂಡಗಳು ಭಾಗಿಯಾಗಿದ್ದವು. ಆದರೆ 2024ರ ಟೂರ್ನಿಯಲ್ಲಿ 20 ತಂಡಗಳು ಕಣಕ್ಕಿಳಿಯಲಿವೆ. ಹಿಂದಿನ ಆವೃತ್ತಿಗಳಿಗಿಂತ ಈ ಬಾರಿ ಟೂರ್ನಿ ವಿಭಿನ್ನ ಸ್ವರೂಪವನ್ನು ಹೊಂದಿದೆ. ಒಟ್ಟು 20 ತಂಡಗಳನ್ನು ತಲಾ ಐದು ತಂಡಗಳಂತೆ ನಾಲ್ಕು ಗುಂಪುಗಳಲ್ಲಿ ವಿಂಗಡಿಸಲಾಗಿದೆ. ಗುಂಪು ವಿಭಾಗದಲ್ಲಿ ಪ್ರತಿ ತಂಡಗಳು ತಲಾ ನಾಲ್ಕು ಪಂದ್ಯಗಳನ್ನು ಆಡಲಿವೆ. ಪ್ರತಿ ಗುಂಪಿನಿಂದ ತಲಾ ಎರಡು ತಂಡಗಳು ಸೂಪರ್ ಎಂಟರ ಹಂತಕ್ಕೆ ತೇರ್ಗಡೆ ಪಡೆಯಲಿವೆ. ಅಲ್ಲೂ ತಲಾ ನಾಲ್ಕು ತಂಡಗಳ ಎರಡು ಗುಂಪುಗಳು ಇದ್ದು, ಪ್ರತಿ ಗುಂಪಿನ ಅಗ್ರ ಎರಡು ತಂಡಗಳು ಸೆಮಿಫೈನಲ್‌ಗೆ ಲಗ್ಗೆ ಇಡಲಿವೆ.