Site icon Vistara News

T20 World Cup 2024 : ಅಫಘಾನಿಸ್ತಾನವನ್ನು 9 ವಿಕೆಟ್​ಗಳಿಂದ ಸೋಲಿಸಿ ಫೈನಲ್​ಗೇರಿದ ದಕ್ಷಿಣ ಆಫ್ರಿಕಾ ತಂಡ

T20 World Cup

ಟ್ರಿನಿಡಾಡ್​​: ಮಾರಕ ಬೌಲಿಂಗ್​ ಸಂಘಟಿಸಿದ ದಕ್ಷಿಣ ಆಫ್ರಿಕಾ ತಂಡದ ಇದೇ ಮೊದಲ ಬಾರಿಗೆ ಟಿ20 ವಿಶ್ವ ಕಪ್​​ನಲ್ಲಿ (T20 World Cup 2024: ) ಸೆಮಿಫೈನಲ್​ಗೇರಿದ್ದ ಅಫಘಾನಿಸ್ತಾನ ತಂಡವನ್ನು ಸುಲಭವಾಗಿ 9 ವಿಕೆಟ್​ಗಳಿಂದ ಸೋಲಿಸಿದ ಫೈನಲ್​ಗೇರಿದೆ. ಈ ಮೂಲಕ 2024ರ ಟಿ20 ವಿಶ್ವ ಕಪ್​ನ ಫೈನಲ್​ ಹಣಾಹಣಿಗೆ ಸ್ಥಾನ ಭದ್ರ ಮಾಡಿಕೊಂಡಿದೆ. ಸೆಮಿಫೈನಲ್​ ಪಂದ್ಯದಲ್ಲಿ ಎಲ್ಲ ವಿಭಾಗಗಳಲ್ಲಿ ಮಿಂಚಿದ ದಕ್ಷಿಣ ಆಫ್ರಿಕಾ ತಂಡ ಅರ್ಹವಾಗಿ ಪ್ರಶಸ್ತಿ ಸುತ್ತಿಗೆ ಪ್ರವೇಶ ಪಡೆದುಕೊಂಡಿದೆ. ಇದೇ ವೇಳೆ ಮೊದಲ ಬಾರಿಗೆ ಫೈನಲ್​ಗೆ ಪ್ರವೇಶ ಮಾಡಲು ತಮಗಿದ್ದ ಅವಕಾಶವನ್ನು ಅಫಘಾನಿಸ್ತಾನ ತಂಡ ಕಳೆದುಕೊಂಡಿದೆ. ಟೂರ್ನಿಯಲ್ಲಿ ಇದುವರೆಗೆ ಅತ್ಯುತ್ತಮ ಪ್ರದರ್ಶನ ನೀಡಿಕೊಂಡು ಬಂದಿದ್ದ ರಶೀದ್​ ಖಾನ್​ ಬಳಗ ಪ್ರಮುಖ ವೇದಿಕೆಯಲ್ಲಿ ಬ್ಯಾಟಿಂಗ್​ನಲ್ಲಿ ಕಳಾಹೀನ ಪ್ರದರ್ಶನ ನೀಡಿತು.

ಇಲ್ಲಿನ ಬ್ರಿಯಾನ್ ಲಾರಾ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ಆಯೋಜನೆಗೊಂಡಿದ್ದ ಹಣಾಹಣಿಯಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್​ ಮಾಡಿದ ಅಫಘಾನಿಸ್ತಾನ ತಂಡ 11.5 ಓವರ್​ಗಳಲ್ಲಿ ಕೇವಲ 56 ರನ್​ಗಳಿಗೆ ಆಲ್​ಔಟ್ ಆಯಿತು. ಪ್ರತಿಯಾಗಿ ಬ್ಯಾಟ್ ಮಾಡಿದ ಹರಿಣಗಳ ಪಡೆ 8.5 ಓವರ್​ಗಳಲ್ಲಿ 1 ವಿಕೆಟ್​ ನಷ್ಟ ಮಾಡಿಕೊಂಡು 60 ರನ್ ಬಾರಿಸಿ ವಿಜಯೋತ್ಸವ ಆಚರಿಸಿತು. ಇಂದು ಸಂಜೆ ನಡೆಯಲಿರುವ ಭಾರತ ಹಾಗೂ ಇಂಗ್ಲೆಂಡ್​ ತಂಡದ ಪಂದ್ಯದ ಬಳಿಕ ಜೂನ್​ 29ರಂದು ನಡೆಯುವ ಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾಕ್ಕೆ ಎದುರಾಳಿ ಯಾರು ಎಂಬುದು ನಿರ್ಧಾರವಾಗಲಿದೆ.

ಇದನ್ನೂ ಓದಿ: ICC T20 Ranking : ಸೂರ್ಯಕುಮಾರ್​ ಯಾದವ್​ ಹಿಂದಿಕ್ಕಿ ರ್ಯಾಂಕಿಂಗ್​​ನಲ್ಲಿ ನಂಬರ್ 1 ಸ್ಥಾನ ಪಡೆದ ಹೆಡ್​​​

ಅಲ್ಪ ಮೊತ್ತದ ಗುರಿಯನ್ನು ಬೆನ್ನಟ್ಟಲು ಹೊರಟ ದಕ್ಷಿಣ ಆಫ್ರಿಕಾ ತಂಡಕ್ಕೆ ಅದು ಸವಾಲಾಗಲೇ ಇಲ್ಲ. ಆದಾಗ್ಯೂ ಕ್ವಿಂಟನ್​ ಡಿ ಕಾಕ್​ 5 ರನ್ ಬಾರಿಸಿ ಫಜಲಕ್ ಫಾರೂಕಿಗೆ ವಿಕೆಟ್ ಒಪ್ಪಿಸುವ ಮೂಲಕ ಆತಂಕ ಮೂಡಿಸಿದರು. ಅದರೆ, ರೀಜಾ ಹೆಂಡ್ರಿಕ್ಸ್​ (29 ರನ್​) ಹಾಗೂ ನಾಯಕ ಏಡೆನ್​ ಮಾರ್ಕರಮ್​ 23 ರನ್ ಬಾರಿಸಿ ನಿರಾಯಾಸ ಗೆಲುವ ತಂದುಕೊಟ್ಟರು. ದಕ್ಷಿಣ ಆಫ್ರಿಕಾ ತಂಡ ಹಾಲಿ ಟೂರ್ನಿಯಲ್ಲಿ ಅತ್ಯಂತ ಬಲಿಷ್ಠ ಹಾಗೂ ಸಮರ್ಥ ಪ್ರದರ್ಶನ ನೀಡಿದ್ದು ಸೆಮಿಫೈನಲ್ ಸೇರಿದಂತೆ ಒಟ್ಟು 8ಪಂದ್ಯಗಳಲ್ಲಿ ಅಜೇಯ ಓಟ ಮುಂದುವರಿಸಿದೆ. ಟಿ20 ವಿಶ್ವ ಕಪ್​ನ ಹಾಲಿ ಆವೃತ್ತಿಯಲ್ಲಿ ಸೋಲು ಕಾಣದೇ ಫೈನಲ್​ಗೆ ಪ್ರವೇಶ ಪಡೆದುಕೊಂಡಿದೆ.

ಅಫಘಾನಿಸ್ತಾನ ದುರ್ಬಲ ಬ್ಯಾಟಿಂಗ್​

ಅಫಘಾನಿಸ್ತಾನ ತಂಡ ಪ್ರಸ್ತುತ ವಿಶ್ವ ಕಪ್​ನಲ್ಲಿ (T20 World Cup 2024) ಅಚ್ಚರಿ ಪ್ರದರ್ಶನ ನೀಡಿತ್ತು. ಲೀಗ್ ಹಂತದ ಪಂದ್ಯದಲ್ಲಿ ನ್ಯೂಜಿಲ್ಯಾಂಡ್ ತಂಡದ ವಿರುದ್ಧ 125 ರನ್​ಗಳ ಬೃಹತ್ ಗೆಲುವು ದಾಖಲಿಸಿದ್ದ ರಶೀದ್ ಖಾನ್ ಬಳಗ ಸೂಪರ್​ 8 ಹಂತದಲ್ಲಿ ಆಸ್ಟ್ರೇಲಿಯಾ ವಿರುದ್ಧ 21 ರನ್ ಹಾಗೂ ಬಾಂಗ್ಲಾದೇಶ ವಿರುದ್ದ 8 ರನ್​ (ಡಕ್ವರ್ತ್​ ಲೂಯಿಸ್​ ನಿಯಮ ಪ್ರಕಾರ) ಗೆಲುವು ದಾಖಲಿಸಿತ್ತು. ಈ ಮೂಲಕ ಇದೇ ಮೊದಲ ಬಾರಿಗೆ ಟಿ20 ವಿಶ್ವ ಕಪ್​ ಇತಿಹಾಸದಲ್ಲಿ ಸೆಮೀಸ್ ಹಂತಕ್ಕೇರಿತ್ತು. ಆದರೆ, ಪ್ರಮುಖ ಘಟ್ಟದಲ್ಲಿ ಈ ತಂಡವನ್ನು ಅತ್ಯಂತ ಪೇಲವ ಪ್ರದರ್ಶನ ನೀಡಿ ಸೋತಿತ್ತು. ಬಾಂಗ್ಲಾ ವಿರುದ್ಧ ಅಫಘಾನಿಸ್ತಾನ ಗೆದ್ದಾಗ ಕ್ರಿಕೆಟ್​ ಕ್ಷೇತ್ರವೇ (ಪಾಕಿಸ್ತಾನ ಹೊರತುಪಡಿಸಿ) ಅವರನ್ನು ಬೆಂಬಲಿಸಲು ಮುಂದೆ ನಿಂತಿತ್ತು. ಆ ದೇಶದ ರಾಜಧಾನಿ ಕಾಬೂಲ್​ನಲ್ಲಿಯೂ ವಿಜಯೋತ್ಸವಕ್ಕಾಗಿ ಜನಸ್ತೋಮವೇ ನೆರೆದಿತ್ತು. ಅವರೆಲ್ಲರಿಗೂ ರಶೀದ್ ಬಳಗ ನಿರಾಸೆ ಮೂಡಿಸಿದೆ.

ಟಾಸ್ ಗೆದ್ದ ಮೊದಲು ಬ್ಯಾಟ್ ಮಾಡಿದ ಆಫ್ಘನ್ನರು ನಿರಂತರವಾಗಿ ವಿಕೆಟ್​ ಕಳೆದುಕೊಂಡರು. ಮಾರ್ಕೊ ಜೆನ್ಸನ್​ (3 ಓವರ್​, 16 ರನ್​ 3 ವಿಕೆಟ್​), ಕಗಿಸೋ ರಬಾಡ (3 ಓವರ್​, 14 ರನ್​, 2 ವಿಕೆಟ್​), ಆ್ಯನ್ರಿಚ್​ ನೋರ್ಜೆ (3 ಓವರ್​, 7 ರನ್​, 2 ವಿಕೆಟ್​), ತಬ್ರೇಜ್​ ಶಮ್ಸಿ (1.5 ಓವರ್​​, 6 ರನ್​, 3 ವಿಕೆಟ್​) ಮಾರಕ ದಾಳಿಗೆ ಪತರಗುಟ್ಟಿದರು. ದ. ಆಫ್ರಿಕಾದ ಬೌಲರ್​ಗಳ ದಾಳಿಗೆ ತಲೆ ಎತ್ತುವ ಯಾವುದೇ ಪ್ರಯತ್ನ ಮಾಡದೇ ಕೇವಲ 56 ರನ್​ಗೆ ಸೀಮಿತಗೊಂಡಿತು. ಅಫಘಾನಿಸ್ತಾನ ಪರ ಎರಡಂಕಿ ಮೊತ್ತ ದಾಟಿದ್ದು ಅಜ್ಮತುಲ್ಲಾ ಒಮರ್ಜೈ (10 ರನ್​) ಮಾತ್ರ. ಇನ್ನು ಇತರ ರನ್​ಗಳು (13 ರನ್​) ಉಳಿದೆಲ್ಲರೂ ಒಂದಂಕಿ ಮೊತ್ತಕ್ಕೆ ಗಂಟು ಮೂಟೆ ಕಟ್ಟಿದರು.

Exit mobile version