ಮುಂಬಯಿ: ಟಿ20 ವಿಶ್ವಕಪ್(T20 World Cup) ಗೆದ್ದ ಭಾರತ ಕ್ರಿಕೆಟ್ ತಂಡದ ಆಟಗಾರರಿಗೆ ನಿನ್ನೆ(ಗುರುವಾರ) ಮುಂಬೈಯಲ್ಲಿ ಭರ್ಜರಿಯಾಗಿ ಅಭಿನಂದಿಸಲಾಗಿತ್ತು. ತಂಡದ ಈ ವಿಜಯೋತ್ಸವದ(Team India’s Victory Parade) ವೇಳೆ ಭಾರಿ ಸಂಖ್ಯೆಯಲ್ಲಿ ಸೇರಿದ್ದ ಅಭಿಮಾನಿಗಳ ಪೈಕಿ ಕೆಲವರಿಗೆ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಪ್ರಕರಣಗಳು ಇದೀಗ ವರದಿಯಾಗಿವೆ. ಸದ್ಯದ ಮಾಹಿತಿ ಪ್ರಕಾರ 11 ಮಂದಿ ಗಾಯಗೊಂಡಿದ್ದಾರೆ ಎನ್ನಲಾಗಿದೆ.
ಸಾಗರೋಪಾದಿಯಲ್ಲಿ ಸೇರಿದ್ದ ಅಭಿಮಾನಿಗಳ ಗುಂಪಿನಲ್ಲಿ ಮಹಿಳೆಯೊಬ್ಬರು ಉಸಿರಾಟ ಸಮಸ್ಯೆಗೆ ಸಿಲುಕಿ ಬಳಿಕ ಪೊಲೀಸ್ ಅಧಿಕಾರಿಯೊಬ್ಬರು ಮಹಿಳೆಯನ್ನು ತಮ್ಮ ಹೆಗಲ ಮೇಲೆ ಹೊತ್ತು ಸಾಗಿದ ದೃಶ್ಯ ಕೂಡ ವೈರಲ್ ಆಗಿದೆ. ಒಟ್ಟು 9 ಮಂದಿ ಉಸಿರಾಟದ ಸಮಸ್ಯೆಗೆ ಸಿಲುಕಿ ಇಲ್ಲಿನ ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಸದ್ಯ, ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ವರದಿ ತಿಳಿಸಿದೆ.
17 ವರ್ಷಗಳ ಬಳಿಕ 2ನೇ ಬಾರಿಗೆ ಟಿ-20 ವಿಶ್ವಕಪ್ ಗೆದ್ದ ಭಾರತ ತಂಡದ ವಿಜಯೋತ್ಸವವನ್ನು ಗುರುವಾರ ಮುಂಬೈನಲ್ಲಿ ಏರ್ಪಡಿಸಲಾಗಿತ್ತು. ದಕ್ಷಿಣ ಮುಂಬೈನ ಮರೀನ್ ಡ್ರೈವ್ ಪ್ರದೇಶ ಸಾವಿರಾರು ಸಂಖ್ಯೆಯಲ್ಲಿ ಕ್ರಿಕೆಟ್ ಅಭಿಮಾನಿಗಳಿಂದ ತುಂಬಿ ಹೋಗಿತ್ತು.
ಕಿಕ್ಕಿರಿದು ಸೇರಿದ್ದ ಅಭಿಮಾನಿಗಳ ನೂಕು ನುಗ್ಗಲಿನಲ್ಲಿ ಹಲವರ ಚಪ್ಪಲಿಗಳು ಕಿತ್ತು ಹೋಗಿದೆ. ಶುಕ್ರವಾರ ಬೆಳಗ್ಗೆ ಮರೀನ್ ಡ್ರೈವ್ ಪ್ರೇಶದಲ್ಲಿ ಚಪ್ಪಲಿಗಳ ರಾಶಿಯೇ ಕಂಡು ಬಂದಿದೆ. ಸಾವಿರಾರು ಚಪ್ಪಳಿಗಳು ಬೀದಿಯಲ್ಲೇ ಅನಾಥವಾಗಿ ಬಿದ್ದಿದೆ.
ಬಾರ್ಬಡೋಸ್‌ನಿಂದ ಬುಧವಾರ ಬೆಳಿಗ್ಗೆ ಪ್ರಯಾಣ ಆರಂಭಿಸಿದ್ದ ಭಾರತ ತಂಡವು ಗುರುವಾರ ಬೆಳಗ್ಗೆ ನವದೆಹಲಿಗೆ ಬಂದಿಳಿದಿತ್ತು. ಪ್ರಧಾನಿ ನರೇಂದ್ರ ಮೋದಿಯವರ ಆತಿಥ್ಯ ಸ್ವೀಕರಿಸಿದ ನಂತರ ಮಧ್ಯಾಹ್ನ 3.42ಕ್ಕೆ ಮುಂಬೈಗೆ ಪ್ರಯಾಣ ಬೆಳೆಸಿತ್ತು. ಸಂಜೆ ಐದು ಗಂಟೆಯ ನಂತರ ವಿಮಾನವು ಮುಂಬೈ ವಿಮಾನ ನಿಲ್ದಾಣಕ್ಕೆ ಬಂದಿಳಿದಿತ್ತು. ಆಟಗಾರರು ಬಂದೊಡನೆಯೇ ಕ್ರಿಕೆಟ್ ಪ್ರೇಮಿಗಳ ಜಯಘೋಷ ಮೊಳಗಿತು. ಅಭಿಮಾನಿಗಳ ಅಬ್ಬರಕ್ಕೆ ಅರಬ್ಬಿ ಸಮುದ್ರ ಕೂಡ ಒಂದು ಕ್ಷಣ ಸ್ಥಬ್ಧವಾಗಿತ್ತು. ವಿಶೇಷ ವಿನ್ಯಾಸದ ತೆರೆದ ವಾಹನದಲ್ಲಿ ವಿಶ್ವಕಪ್ ಟ್ರೋಫಿ ಹಿಡಿದು ನಾಯಕ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಬೂಮ್ರಾ, ಪಾಂಡ್ಯ, ಕೋಚ್ ರಾಹುಲ್ ದ್ರಾವಿಡ್ ಸೇರಿದಂತೆ ಎಲ್ಲ ಆಟಗಾರರು ವಿಜಯಯಾತ್ರೆಯ ಮೆರವಣಿಗೆಯಲ್ಲಿ ಭಾಗಿಯಾಗಿ ಸಂಭ್ರಮಿಸಿದರು. ಸಾವಿರಾರು ಅಭಿಮಾನಿಗಳು ಘೋಷಣೆ ಕೂಗಿ ಅಭಿನಂದನೆಗಳನ್ನು ಸಲ್ಲಿಸಿದರು.
ಜೂನ್ 29ರಂದು ಬಾರ್ಬಾಡೋಸ್‌ನಲ್ಲಿ ನಡೆದಿದ್ದ ಟೂರ್ನಿಯ ಫೈನಲ್‌ನಲ್ಲಿ ಭಾರತ ತಂಡವು ದಕ್ಷಿಣ ಆಫ್ರಿಕಾ ಎದುರು ಜಯಿಸಿತ್ತು. ಆದರೆ ಕೆರೀಬಿಯನ್ ದ್ವೀಪದಲ್ಲಿ ಚಂಡಮಾರುತ ಬೀಸಿದ್ದ ಕಾರಣ ವಿಮಾನಯಾನ ಸೌಲಭ್ಯ ರದ್ದಾಗಿತ್ತು. ಆದ್ದರಿಂದ ಬುಧವಾರದವರೆಗೂ ತಂಡವು ಬಾರ್ಬಾಡೋಸ್‌ನಲ್ಲಿಯೇ ಉಳಿದಿತ್ತು.
ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ವತಿಯಿಂದ ಚಾಂಪಿಯನ್ ಭಾರತ ತಂಡಕ್ಕೆ ಘೋಷಿಸಿದ್ದ 125 ಕೋಟಿ ರೂಪಾಯಿ ಮೊತ್ತದ ಚೆಕ್ ಅನ್ನು ಬಿಸಿಸಿಐ ಅಧ್ಯಕ್ಷ ರೋಜರ್ ಬಿನ್ನಿ, ಉಪಾಧ್ಯಕ್ಷ ರಾಜೀವ್ ಶುಕ್ಲಾ, ಕಾರ್ಯದರ್ಶಿ ಜಯ್ ಶಾ ಹಸ್ತಾಂತರಿಸಿದರು.