Site icon Vistara News

Dubbing Premier League : ಶನಿವಾರದಿಂದ 3ನೇ ಆವೃತ್ತಿಯ ಡಬ್ಬಿಂಗ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿ

Dubbing Premier League

ಬೆಂಗಳೂರು: ಕನ್ನಡ ಸಿನಿಮಾ ಹಾಗೂ ಕಿರುತೆರೆ ಕ್ಷೇತ್ರದಲ್ಲಿ ದುಡಿಯುತ್ತಿರುವ ಅಸಂಖ್ಯಾತ ಡಬ್ಬಿಂಗ್ ಕಲಾವಿದರು ಹಾಗೂ ಕಲಾವಿದರ ಸಮಾಗಮದೊಂದಿಗೆ ಆಯೋಜಿಸಲಾಗುತ್ತಿರುವ ಡಬ್ಬಿಂಗ್​ ಪ್ರೀಮಿಯರ್ ಲೀಗ್ (Dubbing Premier League)​ ಕ್ರಿಕೆಟ್​ ಟೂರ್ನಿಯ ಮೂರನೇ ಆವೃತ್ತಿ ಶನಿವಾರ (ಮೇ 18) ಹಾಗೂ ಭಾನುವಾರ (ಮೇ 19)ರಂದು ನಡೆಯಲಿದೆ. ಬೆಂಗಳೂರಿನ ರಾಜರಾಜೇಶ್ವರಿ ನಗರದ ಗ್ಲೋಬಲ್​ ಅಕಾಡೆಮಿ ಆಫ್​ ಟೆಕ್ನಾಲಜಿಯ ಮೈದಾನದಲ್ಲಿ ಈ ಟೂರ್ನಿಯು ಪಂದ್ಯಗಳು ಅಯೋಜನೆಗೊಂಡಿದೆ. ಈ ಕ್ರಿಕೆಟ್​ ಪಂದ್ಯಾವಳಿಯಲ್ಲಿ ಸಿನಿ ಹಾಗೂ ಕಿರುತೆರೆ ಕ್ಷೇತ್ರದ ಹೆಸರಾಂತ ಕಲಾವಿದರು ಹಾಗೂ ಸೆಲೆಬ್ರಿಟಿಗಳು ಪಾಲ್ಗೊಳ್ಳಲಿದ್ದಾರೆ. ಅವರೆಲ್ಲರೂ ಒಂದೆಡೆ ಸೇರಿ “ಜಂಟಲ್​ಮ್ಯಾನ್ಸ್​ ಸ್ಪೋರ್ಟ್”​​ ಎಂದೇ ಕರೆಯವ ಕ್ರಿಕೆಟ್​ ಆಡಿ ಸಂಭ್ರಮಿಸಲಿದ್ದಾರೆ.

ಕಳೆದ ಎರಡು ಆವೃತ್ತಿಯ ಯಶಸ್ಸಿನ ಹಿನ್ನೆಲೆಯಲ್ಲಿ ಕಲಾವಿದರೇ ಜತೆಯಾಗಿ ಸೇರಿಕೊಂಡು ಈ ಟೂರ್ನಿಯನ್ನು ಅಯೋಜಿಸಿದ್ದಾರೆ. ಕರ್ನಾಟಕದ ಜನಪ್ರಿಯ ಸುದ್ದಿವಾಹಿನಿ ‘ವಿಸ್ತಾರ ನ್ಯೂಸ್​’ ಈ ಟೂರ್ನಿಗೆ ಮಾಧ್ಯಮ ಸಹಯೋಗ ನೀಡಿದೆ. ಅದೇ ರೀತಿ ಎಮ್​ ಸ್ಪೋರ್ಟ್​​ ಯೂಟ್ಯೂಬ್ ಚಾನೆಲ್​ನಲ್ಲಿ ಪಂದ್ಯದ ಕ್ಷಣಗಳು ನೇರ ಪ್ರಸಾರವಾಗಲಿದ್ದು https://cricheroes.com/ ನಲ್ಲಿ ಲೈವ್ ಸ್ಕೋರ್ ಅಪ್​ಡೇಟ್​ ಸಿಗಲಿದೆ.

ಶನಿವಾರ ಬೆಳಗ್ಗೆ 7.30ಕ್ಕೆ ಮೊದಲ ಪಂದ್ಯ ನಡೆಯಲಿದೆ. ಅದಕ್ಕಿಂತ ಮೊದಲು ಟೂರ್ನಿಯ ಉದ್ಘಾಟನಾ ಕಾರ್ಯಕ್ರಮ ಅಯೋಜನೆಗೊಂಡಿದೆ. ಟೂರ್ನಿಯಲ್ಲಿ 9 ತಂಡಗಳು ಪ್ರಶಸ್ತಿಗಾಗಿ ಹೋರಾಡಲಿವೆ. ನಿರಂಜನ್ ಸ್ಟುಡಿಯೋಸ್, ಧ್ವನಿ ಸಂಗಮ ಸ್ಟುಡಿಯೋಸ್, ಆರ್​ಸಿಬಿ, ಹರಿವು ಹುಡುಗರು, ಸೌಂಡ್ ಮ್ಯಾಪ್ ರಾಯಲ್ಸ್ ರಾಯಲ್ ಎಡಿಟರ್ಸ್, ಲಗಾನಾ ಬಾಯ್ಸ್, ಕನ್ನಡ ಕಂಠಗಳು, ಭಜರಂಗಿ ಬಾಯ್ಸ್ ಕ್ರಿಕೆಟರ್ಸ್ ಟೂರ್ನಿಯಲ್ಲಿ ಪಾಲ್ಗೊಳ್ಳಲಿರುವ ತಂಡಗಳಾಗಿವೆ. ಎರಡು ದಿನಗಳ ಅವಧಿಯಲ್ಲಿ 10 ಲೀಗ್ ಪಂದ್ಯಗಳು ಹಾಗೂ ಎರಡು ಸೆಮಿ ಫೈನಲ್ ಹಾಗೂ ಫೈನಲ್ ಸೇರಿ ಒಟ್ಟು 13 ಪಂದ್ಯಗಳು ನಡೆಯಲಿವೆ.

ವಸತಿ ಸಚಿವರ ಆಗಮನ ನಿರೀಕ್ಷೆ

ಕರ್ನಾಟಕ ಸರ್ಕಾರದ ವಸತಿ ಸಚಿವರಾದ ಬಿ. ಝಡ್​ ಜಮೀರ್​ ಅಹಮದ್ ಅವರು ಆಗಮಿಸಿ ಪಂದ್ಯವನ್ನು ವೀಕ್ಷಿಸುವುದಾಗಿ ಹೇಳಿದ್ದಾರೆ ಎಂಬುದಾಗಿ ಆಯೋಜಕರು ತಿಳಿಸಿದ್ದಾರೆ. ಅದೇ ರೀತಿ ಕಲಾವಿದರ ಈ ಸಂಗಮಕ್ಕೆ ಸಿನಿಮಾ ಹಾಗೂ ಕಿರುತೆರೆ ಕ್ಷೇತ್ರದ ಹಲವಾರು ಕಲಾವಿದರು ಆಗಮಿಸುವ ನಿರೀಕ್ಷೆಯಿದೆ. ಚಲನಚಿತ್ರ ಕಲಾವಿದ ಮತ್ತು ನಿರ್ದೇಶಕ, ನಾಗೇಂದ್ರ ಅರಸ್, ಸಿನಿಮಾ ಕಲಾವಿದ ರಮೇಶ್ ಪಂಡಿತ್, ಜೀ ಟಿವಿ ಮಹಾನಟಿ ಸೀರಿಯಲ್​ ನ ಆಶಿಕಾ ಶರ್ಮಾ, ಟಿವಿ ಕಲಾವಿದರಾದ ಪುನೀತ್ ಬಾಬು, ಧನಂಜಯ. ಸುಹಾಸ್ ಆತ್ರೇಯಸ್, ಕಾರ್ತಿಕ್ ವೈಭವ್,ಆಯುಷ್ ಜೆ ಶೆಟ್ಟಿ, ವಲ್ಲಭ ಸೂರಿ, ಮಧುಸೂದನ್, ಸಿನಿ ಕಲಾವಿದರಾದ ಹರ್ಷಿಲ್ ಕೌಶಿಕ್, ಶಕ್ತಿ ರಾಜ್, ವಿಕಾಸ್ ವಸಿಷ್ಠ, ರಿಚಾ ಶಾಸ್ತ್ರಿ, ಸಿಲ್ಲಿ ಲಲ್ಲಿ ಆನಂದ್, ಚೇತನ್ ಗಂಧರ್ವ, ಯಶವಂತ್ ಬಿಜೂರ್, ನರೇಶ್ ಗಾಂಧಿ, ಗೀತರಚನೆಕಾರ ಪ್ರಮೋದ್ ಮರವಂತೆ, ಟಿವಿ ಕಲಾವಿದೆ ಪುಷ್ಪಾ ಅನಿಲ್, ಗಾಯಕರಾದ ಕರಿಬಸವ ಅವರು ಟೂರ್ನಿಯಲ್ಲಿ ಪಾಲ್ಗಳ್ಳಲಿದ್ದಾರೆ.

ಇದನ್ನೂ ಓದಿ: IPL 2024 : ಆರ್​ಸಿಬಿ ವಿರುದ್ಧ ವೇಗದ ಬೌಲರ್​ ಕಣಕ್ಕೆ; ಚೆನ್ನೈ ತಂಡದಲ್ಲಿ ಸಂಭ್ರಮ

ಎರಡು ಆವೃತ್ತಿಗಳ ಯಶಸ್ಸು

ಸಿನಿಮಾ ಹಾಗೂ ಕಿರುತೆರೆಯಲ್ಲಿ ಹಲವಾರು ಡಬ್ಬಿಂಗ್ ಕಲಾವಿದರು ಶ್ರಮವಹಿಸಿ ಕಾರ್ಯನಿರ್ವಹಿಸುತ್ತಿದ್ದಾರೆ. ವೃತ್ತಿ ಬದುಕಿನ ಜಂಜಾಟ ಹಾಗೂ ಇನ್ನೂ ಅನೇಕ ಕಾರಣಗಳಿಂದಾಗಿ ಅವರೆಲ್ಲರೂ ಪರಸ್ಪರ ಭೇಟಿಯಾಗಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಎರಡು ವರ್ಷಗಳ ಹಿಂದೆ ಡಬ್ಬಿಂಗ್​ ಆರ್ಟಿಸ್ಟ್​​ಗಳು ಹಾಗೂ ಇನ್ನಿತರ ಕಲಾವಿರ ಸಮಾಗಮದಲ್ಲಿ ಕ್ರಿಕೆಟ್ ಟೂರ್ನಿಯನ್ನು ಆರಂಭಿಸಲಾಗಿತ್ತು. ಕಳೆದ ಎರಡು ವರ್ಷದ ಟೂರ್ನಿ ಅತ್ಯಂತ ಯಶಸ್ಸು ಕಂಡಿತ್ತು. ಕಲಾವಿದರು ಎರಡು ದಿನಗಳ ಕಾಲ ಜತೆಯಾಗಿ ಸೇರಿಕೊಂಡು ಕ್ರಿಕೆಟ್ ಆಡಿ ಸಂಭ್ರಮಿಸಿದ್ದರು. ಟ್ರೋಫಿ ಗೆದ್ದಿದ್ದರು. ಈ ಯಶಸ್ಸಿನ ಹಿನ್ನೆಲೆಯಲ್ಲಿ ಮೂರನೇ ಆವೃತ್ತಿಯನ್ನು ಆಯೋಜಿಸಲಾಗಿದೆ. ಶನಿವಾರ ಹಾಗೂ ಭಾನುವಾರ ಕ್ರಿಕೆಟ್​ ಪ್ರೇಮಿ ಕಲಾವಿದರು ಈ ಟೂರ್ನಿಯಲ್ಲಿ ಆಡಿ ಸಂಭ್ರಮಿಸಲಿದ್ದಾರೆ ಎಂಬುದಾಗಿ ಅಯೋಜಕರು ಮಾಹಿತಿ ನೀಡಿದ್ದಾರೆ.

Exit mobile version