Site icon Vistara News

U19 World Cup Final: ಭಾರತ ಗೆಲುವಿಗೆ 254 ರನ್​ ಗುರಿ ನೀಡಿದ ಆಸ್ಟ್ರೇಲಿಯಾ

Oliver Peake held his end well even as Australia lost wickets regularly at the other

ಬೆನೋನಿ: ರಾಜ್ ಲಿಂಬಾನಿ(3) ಮತ್ತು ನಮನ್ ತಿವಾರಿ(2) ಸಂಘಟಿತ ಬೌಲಿಂಗ್​ ದಾಳಿಗೆ ಕುಸಿದ ಆಸ್ಟ್ರೇಲಿಯಾ ತಂಡ ಅಂಡರ್​ 19 ವಿಶ್ವಕಪ್​ ಫೈನಲ್​ ಪಂದ್ಯದಲ್ಲಿ(India U19 vs Australia U19 Final) ರನ್ 253​ ಗಳಿಸಿದೆ. ಭಾರತ ಗೆಲುವಿಗೆ ರನ್​ 254 ಬಾರಿಸಬೇಕಿದೆ. ಇತ್ತಂಡಗಳ ನಡುವಣ ಮೂರನೇ ವಿಶ್ವಕಪ್​ ಫೈನಲ್(U19 World Cup Final) ಪಂದ್ಯ ಇದಾಗಿದೆ.

ಇಲ್ಲಿನ ಬೆನೋನಿ ಕ್ರಿಕೆಟ್​ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಟಾಸ್​ ಗೆದ್ದು ಬ್ಯಾಟಿಂಗ್​ ಆಯ್ದುಕೊಂಡ ಆಸ್ಟ್ರೇಲಿಯಾ ಹರ್ಜಸ್ ಸಿಂಗ್(55) ಮತ್ತು ನಾಯಕ ಹಗ್ ವೈಬ್ಜೆನ್(48) ಬ್ಯಾಟಿಂಗ್​ ಹೋರಾಟದಿಂದ ನಿಗದಿತ 50 ಓವರ್​ಗಳಲ್ಲಿ 7 ವಿಕೆಟ್​ ನಷ್ಟಕ್ಕೆ 253 ರನ್​ ಬಾರಿಸಿದೆ.

ಇನಿಂಗ್ಸ್​ ಆರಂಭಿಸಿದ ಆಸ್ಟ್ರೇಲಿಯಾಕ್ಕೆ ರಾಜ್ ಲಿಂಬಾನಿ ಆರಂಭದಲ್ಲೇ ಆಘಾತವಿಕ್ಕಿದರು. ಸ್ಯಾಮ್ ಕಾನ್ಸ್ಟಾಸ್ ಅವರನ್ನು ಶೂನ್ಯಕ್ಕೆ ಔಟ್​ ಮಾಡಿದರು. 16 ರನ್​ಗೆ ಮೊದಲ ವಿಕೆಟ್​ ಕಳೆದುಕೊಂಡ ಆಸ್ಟ್ರೇಲಿಯಾ ಆಘಾತ ಎದುರಿಸಿತು. ಆದರೆ ಆ ಬಳಿಕ ಆಡಲಿಳಿದ ನಾಯಕ ಹಗ್ ವೈಬ್ಜೆನ್ ಆರಂಭಿಕ ಆಟಗಾರ ಹ್ಯಾರಿ ಡಿಕ್ಸನ್ ಜತೆಗೂಡಿ ತಾಳ್ಮೆಯುತ ಬ್ಯಾಟಿಂಗ್​ ಮೂಲಕ ತಂಡವನ್ನು ಆರಂಭಿಕ ಆಘಾತದಿಂದ ಪಾರು ಮಾಡಿದರು.

ಈ ಜೋಡಿ ದ್ವಿತೀಯ ವಿಕೆಟ್​ಗೆ 78 ರನ್​ ಒಟ್ಟುಗೂಡಿಸಿತು. ಹಗ್ ವೈಬ್ಜೆನ್ 48 ರನ್​ಗೆ ಔಟಾದರೆ, ಹ್ಯಾರಿ ಡಿಕ್ಸನ್ 42 ರನ್​ ಗಳಿಸಿ ವಿಕೆಟ್​ ಕೈಚೆಲ್ಲಿದರು. ಉಭಯ ಆಟಗಾರರು ಕೂಡ ಅರ್ಧಶತಕದಿಂದ ವಂಚಿತರಾದರು. ಭಾರತದ ಬೌಲಿಂಗ್​ ದಾಳಿಯನ್ನು ದಿಟ್ಟವಾಗಿ ಎದುರಿಸಿ ನಿಂತದ್ದು ಹರ್ಜಸ್ ಸಿಂಗ್. ಆಕರ್ಷಕ ಬೌಂಡರಿ ಮತ್ತು ಸಿಕ್ಸರ್​ ಬಾರಿಸಿ ಅರ್ಧಶತಕ ದಾಖಲಿಸಿದರು.

ಇದನ್ನೂ ಓದಿ U19 World Cup: ಅಂಡರ್‌ 19 ವಿಶ್ವಕಪ್​ನಲ್ಲಿ ಭಾರತದ್ದೇ ಪಾರುಪತ್ಯ; ಹೀಗಿದೆ ಸಾಧನೆ

64 ಎಸೆತ ಎದುರಿಸಿದ ಹರ್ಜಸ್ ಸಿಂಗ್ ತಲಾ ಮೂರು ಸಿಕ್ಸರ್​ ಮತ್ತು ಬೌಂಡರಿ ಬಾರಿಸಿ 55 ರನ್​ ಗಳಿಸಿದರು. ಈ ವಿಕೆಟ್​ ಪತನದ ಬಳಿಕ 7ನೇ ಕ್ರಮಾಂಕದಲ್ಲಿ ಆಡಲಿಳಿದ ಒಲಿವರ್​ ಪೀಕ್ ಬಿರುಸಿನ ಬ್ಯಾಟಿಂಗ್​ ನಡೆಸಿ ತಂಡದ ಮೊತ್ತವನ್ನು ಹಿಗ್ಗಿಸಿದರು. ಅಜೇಯ 46 ರನ್​ ಬಾರಿಸಿ ತಂಡದ ಮೊತ್ತವನ್ನು 250ರ ಗಡಿ ದಾಟಿಸಿದರು. ವಿಕೆಟ್​ ಕೀಪರ್​ ರಯಾನ್ ಹಿಕ್ಸ್ 26 ರನ್​ ಗಳಿಸಿದರು. ಭಾರತ ಪರ ಉತ್ತಮ ಬೌಲಿಂಗ್​ ದಾಳಿ ನಡೆಸಿದ ರಾಜ್ ಲಿಂಬಾನಿ 10 ಓವರ್​ ಬೌಲಿಂಗ್​ ನಡೆಸಿ 38 ರನ್ ವೆಚ್ಚದಲ್ಲಿ ಮೂರು ವಿಕೆಟ್​ ಉರುಳಿಸಿದರು.

2016ರಿಂದ ಭಾರತ ಸತತ 5 ಬಾರಿ ಫೈನಲ್‌ ಪ್ರವೇಶಿಸಿದೆ. 2018, 2022ರಲ್ಲಿ ಭಾರತ ಚಾಂಪಿಯನ್‌ ಆದರೆ, 2016 ಹಾಗೂ 2020ರಲ್ಲಿ ರನ್ನರ್‌-ಅಪ್‌ ಸ್ಥಾನಕ್ಕೆ ತೃಪ್ತಿಪಟ್ಟಿತ್ತು. 2012, 2018ರಲ್ಲಿ ಆಸ್ಟ್ರೇಲಿಯಾವನ್ನು ಮಣಿಸಿ ಭಾರತ ಚಾಂಪಿಯನ್‌ ಆಗಿತ್ತು. ಈ ಬಾರಿ ಮತ್ತೊಮ್ಮೆ ಪ್ರಶಸ್ತಿ ಮೇಲೆ ಕಣ್ಣಿಟ್ಟಿದೆ. ಇದಕ್ಕಾಗಿ ರನ್​ ಬಾರಿಸಬೇಕಿದೆ.

Exit mobile version