ಲಂಡನ್: ಟೀಮ್ ಇಂಡಿಯಾದಲ್ಲಿ ಅವಕಾಶ ವಂಚಿತರಾಗಿರುವ ಪೃಥ್ವಿ ಶಾ(Prithvi Shaw) ಮತ್ತು ಯಜುವೇಂದ್ರ ಚಹಲ್(Yuzvendra Chahal) ಲಂಡನ್ನಲ್ಲಿ ನಡೆಯುತ್ತಿರುವ ಏಕದಿನ ಕಪ್ ಕ್ರಿಕೆಟ್ ಟೂರ್ನಿಯಲ್ಲಿ ಆಡುತ್ತಿದ್ದಾರೆ. ಬಿಡುವಿನ ವೇಳೆ ಇವರಿಬ್ಬರು ಲಂಡನ್ ಪ್ರಾವಾಸಿ ತಾಣವೊಂದಕ್ಕೆ ಕಾರ್ನಲ್ಲಿ ಪ್ರಯಾಣಿಸಿದ್ದಾರೆ. ಈ ವೇಳೆ ಪೆಟ್ರೋಲ್ ಬಂಕ್ನಲ್ಲಿ ಕಾರಿಗೆ ಪೆಟ್ರೋಲ್ ಹಾಕುತ್ತಿರುವ ಮತ್ತು ಕಾರಿನಲ್ಲಿ ಹಾಯಾಗಿ ನಿದ್ರಿಸುತ್ತಿರುವ ಚಹಲ್ ಫೋಟೊವೊಂದು ಇದೀಗ ವೈರಲ್(Viral Photo) ಆಗಿದೆ.
ಪೃಥ್ವಿ ಶಾ ಕಾರಿಗೆ ಪೆಟ್ರೋಲ್ ಹಾಕುತ್ತಿರುವ ಫೋಟೊ ಕಂಡ ಅನೇಕ ನೆಟ್ಟಿಗರು ಕ್ರಿಕೆಟ್ ಬಿಟ್ಟು ಈ ಕೆಲಸ ಆರಂಭಿಸಿದರೇ? ಎಂದು ಹಾಸ್ಯಾಸ್ಪದವಾಗಿ ಕಮೆಂಟ್ ಮಾಡುವ ಮೂಲಕ ಕಾಲೆಳೆದಿದ್ದಾರೆ. ಈ ಫೋಟೊವನ್ನು ಚಹಲ್ ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಹಾಕಿದ್ದಾರೆ. ಅತ್ತ ಪೃಥ್ವಿ ಶಾ ಅವರು ಚಹಲ್ ನಿದ್ರಿಸುತ್ತಿರುವ ಫೋಟೊವನ್ನು ಹಾಕಿ, ನನ್ನ ಡ್ರೈವಿಂಗ್ ಮೇಲೆ ಚಹಲ್ಗೆ ಶೇ.100 ನಂಬಿಕೆ ಇದೆ. ಹೀಗಾಗಿ ಯಾವುದೇ ಚಿಂತೆ ಇಲ್ಲದೆ ನಿದ್ರಿಸುತ್ತಿದ್ದಾನೆ ಎಂದು ಬರೆದುಕೊಂಡಿದ್ದಾರೆ.
ಟೀಮ್ ಇಂಡಿಯಾದಿಂದ ದೂರ
2018ರಲ್ಲಿ ಟೀಮ್ ಇಂಡಿಯಾಕ್ಕೆ ಪದಾರ್ಪಣೆ ಮಾಡಿದ ಪೃಥ್ವಿ ಶಾ ಅವರು ಆರಂಭಿಕ ದಿನಗಳಲ್ಲಿ ಉತ್ತಮ ಪ್ರದರ್ಶನ ತೋರುವ ಮೂಲಕ ಭಾರತದ ಭವಿಷ್ಯದ ಸಚಿನ್ ತೆಂಡೂಲ್ಕರ್ ಎಂದು ಹೇಳಲಾಗಿತ್ತು. ಆದರೆ ಆ ಬಳಿಕ ಸತತ ಗಾಯದ ಸಮಸ್ಯೆಗೆ ಸಿಲುಕಿ ತಂಡದಲ್ಲಿ ಸರಿಯಾಗಿ ಅವಕಾಶ ಪಡೆಯಲೇ ಇಲ್ಲ. ಕಳೆದ ಎರಡು ವರ್ಷಗಳಿಂದ ಭಾರತ ತಂಡದಿಂದ ದೂರವುಳಿದಿರುವ ಅವರು 2021ರ ಜುಲೈನಲ್ಲಿ ಶ್ರೀಲಂಕಾ ಪರ ಕೊನೆಯ ಪಂದ್ಯ ಆಡಿದ್ದರು.
ಸಪ್ನಾ ಗಿಲ್ಗೆ ಕಿರುಕುಳ ಪ್ರಕರಣದಲ್ಲಿ ನಿರಾಳ
ಇದೇ ವರ್ಷಾರಂಭದಲ್ಲಿ ಮುಂಬಯಿಯ ಉಪನಗರ ಹೋಟೆಲ್ನಲ್ಲಿ ಸೆಲ್ಫಿ ಕ್ಲಿಕ್ಕಿಸುವ ವಿಚಾರವಾಗಿ ಸೋಶಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ ಸಪ್ನಾ ಗಿಲ್(Sapna Gill) ಮತ್ತು ಅವರ ಸ್ನೇಹಿತರು ಪೃಥ್ವಿ ಶಾ ಕಾರಿನ ಮೇಲೆ ಹಲ್ಲೆ ನಡೆಸಿದ್ದರು. ಪ್ರಕರಣಕ್ಕೆ ಸಂಬಂಧಿಸಿ ಸಪ್ನಾ ಗಿಲ್ ಅವರ ಬಂಧನವಾಗಿತ್ತು. ಜಾಮೀನು ಪಡೆದ ನಂತರ ಗಿಲ್ ವಿಮಾನ ನಿಲ್ದಾಣ ಪೊಲೀಸ್ ಠಾಣೆಯನ್ನು ಸಂಪರ್ಕಿಸಿ ಶಾ ವಿರುದ್ಧ ಲೈಂಗಿಕ ಕಿರುಕುಳ ದೂರು ನೀಡಿದ್ದರು. ಪೊಲೀಸರು ಕ್ರಿಕೆಟಿಗನ ವಿರುದ್ಧ ಪ್ರಕರಣ ದಾಖಲಿಸದ ಕಾರಣ ಅವಳು ನಂತರ ನ್ಯಾಯಾಲಯದ ಮೊರೆ ಹೋಗಿದ್ದರು. ಆದರೆ ದೂರು ಸುಳ್ಳು ಮತ್ತು ಆಧಾರರಹಿತ ಎಂದು ಮುಂಬಯಿ ಪೊಲೀಸರು (Mumbai Police) ನ್ಯಾಯಾಲಯಕ್ಕೆ ತಿಳಿಸಿದ ಕಾರಣ ಶಾ ನಿರಾಳರಾಗಿದ್ದರು.
ಇದನ್ನೂ ಓದಿ Sanju Samson: ಬಾಸ್ಕೆಟ್ ಬಾಲ್ ಕೋರ್ಟ್ನಲ್ಲಿ ಫುಟ್ಬಾಲ್ ಆಡಿದ ಸಂಜು ಸ್ಯಾಮ್ಸನ್; ವಿಡಿಯೊ ವೈರಲ್
ಸದ್ಯ ಪೃಥ್ವಿ ಶಾ ಒಡಿಐ ಕಪ್ನಲ್ಲಿ ಎಂಟು ಇನ್ನಿಂಗ್ಸ್ಗಳಲ್ಲಿ 42.87 ಸರಾಸರಿಯಲ್ಲಿ 343 ರನ್ ಗಳಿಸಿದ್ದಾರೆ. ಚಹಲ್ ಕೂಡ ತಮ್ಮ ಸ್ಪಿನ್ ಮೂಡಿಯ ಮೂಲಕ ವಿಕೆಟ್ ಕೀಳುತ್ತಿದ್ದಾರೆ. ಭಾರತ ತಂಡದ ಹಿರಿಯ ಆಟಗಾರ ಅಜಿಂಕ್ಯ ರಹಾನೆ ಕೂಡ ಇದೇ ಟೂರ್ನಿಯಲ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶನ ತೋರುತ್ತಿದ್ದಾರೆ. ಈಗಾಗಲೇ ಅವರು ಸತತ 4 ಅರ್ಧಶತಕಗಳನ್ನು ಬಾರಿಸಿ ಅಬ್ಬರಿಸಿದ್ದಾರೆ. ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಹ್ಯಾಂಪ್‌ಶೈರ್ ವಿರುದ್ಧ 70 ರನ್ ಸಿಡಿಸುವ ಮೂಲಕ ರಹಾನೆ ಲೀಸೆಸ್ಟರ್‌ಶೈರ್ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು.