ಹೈದರಾಬಾದ್: ಲಕ್ನೋ ಸೂಪರ್ ಜೈಂಟ್ಸ್(Lucknow Super Giants) ತಂಡ ಬುಧವಾರ ನಡೆದ ಐಪಿಎಲ್ ಪಂದ್ಯದಲ್ಲಿ ಅತ್ಯಂತ ಕಳಪೆ ಪ್ರದರ್ಶನ ತೋರುವ ಮೂಲಕ ಸನ್ರೈಸರ್ಸ್ ಹೈದರಾಬಾದ್(Sunrisers Hyderabad) ವಿರುದ್ಧ 10 ವಿಕೆಟ್ಗಳ ಹೀನಾಯ ಸೋಲು ಕಂಡಿತು. ಈ ಸೋಲಿನಿಂದಾಗಿ ತಂಡದ ಪ್ಲೇ ಆಫ್ ಹಾದಿ ದುರ್ಗಮಗೊಂಡಿದೆ. ತಂಡದ ಈ ಕಳಪೆ ಪ್ರದರ್ಶನ ಕಂಡು ಸಿಟ್ಟಿಗೆದ್ದ ಫ್ರಾಂಚೈಸಿ ಮಾಲಿಕ ಸಂಜೀವ್ ಗೋಯೆಂಕಾ(Sanjiv Goenka) ಮೈದಾನದಲ್ಲೇ ನಾಯಯ ರಾಹುಲ್(KL Rahul) ಜತೆ ಜಗಳವಾಡಿದ್ದಾರೆ. ಇದರ ವಿಡಿಯೊ ವೈರಲ್(Viral Video) ಆಗಿದೆ.
ಬ್ಯಾಟಿಂಗ್ ಮಾತ್ರವಲ್ಲದೆ, ಬೌಲಿಂಗ್ನಲ್ಲಿಯು ಕೂಡ ಲಕ್ನೋ ಅತ್ಯಂತ ಕಳಪೆ ಪ್ರದರ್ಶನ ತೋರಿತು. ಕನಿಷ್ಠ 1 ವಿಕೆಟ್ ಕೂಡ ಕೀಳಲಾಗದ ಘೋರ ವೈಫಲ್ಯ ಕಂಡಿತು. ಈ ಹೀನಾಯ ಸೋಲಿನಿಂದ ಸಿಟ್ಟಿಗೆದ್ದ ಸಂಜೀವ್ ಗೋಯೆಂಕಾ ನಾಯಕ ರಾಹುಲ್ ಅವರೊಂದಿಗೆ ಕೋಪದಲ್ಲಿ ಮಾತನಾಡುತ್ತಿರುವುದು ಕಂಡುಬಂದಿದೆ. ಇವರಿಬ್ಬರ ನಡುವಣ ಮಾತುಕತೆ ಏನು ಎಂಬುದು ಸ್ಪಷ್ಟವಾಗಿ ಕೇಳಿಸಿಲ್ಲವಾದರೂ, ಈ ದೃಶ್ಯ ನೋಡುವಾಗ ಇದು ಅಸಮಾಧಾನದ ನುಡಿ ಎಂದು ತಿಳಿಯುತ್ತದೆ. ಗೋಯೆಂಕಾ ಮಾತಿಗೆ ರಾಹುಲ್ ಪ್ರತಿಕ್ರಿಯೆ ನೀಡಲು ಮುಂದಾದರೂ ಕೂಡ ಇದನ್ನು ಗೋಯೆಂಕಾ ಒಪ್ಪಿಕೊಳ್ಳದೆ ಏನೋ ಬೈಯುತ್ತಿರುವಂತೆ ಈ ದೃಶ್ಯದಲ್ಲಿ ಕಾಣಬಹುದಾಗಿದೆ. ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿರುವ ವಿಡಿಯೋವನ್ನು ಗಮನಿಸಿರುವ ನೆಟ್ಟಿಗರು ಇವರಿಬ್ಬರು ಜಗಳವಾಡುತ್ತಿದ್ದಾರೆ ಎಂದು ಹೇಳುತ್ತಿದ್ದಾರೆ.
ಈ ಪಂದ್ಯದಲ್ಲಿ ಟಾಸ್ ಗೆದ್ದು ಆಮೆ ಗತಿಯ ಬ್ಯಾಟಿಂಗ್ ನಡೆಸಿದ ಲಕ್ನೋ ಸೂಪರ್ ಜೈಂಟ್ಸ್ ನಿಗದಿತ 20 ಓವರ್ಗಳಲ್ಲಿ 4 ವಿಕೆಟ್ಗೆ 165 ರನ್ ಬಾರಿಸಿತು. ಈ ಮೊತ್ತವನ್ನು ಬೆನ್ನಟ್ಟಿದ ಹೈದರಾಬಾದ್ ಯಾವುದೇ ವಿಕೆಟ್ ನಷ್ಟವಿಲ್ಲದೆ ಕೇವಲ 9.4 ಓವರ್ಗಳಲ್ಲಿ 167 ರನ್ ಬಾರಿಸಿ ಭರ್ಜರಿ 10 ವಿಕೆಟ್ ಅಂತರದ ಗೆಲುವು ಸಾಧಿಸಿತು. ಲಕ್ನೋ ಬೌಲರ್ಗಳನ್ನು ನಿರ್ದಾಕ್ಷಿಣ್ಯವಾಗಿ ಮನಬಂದಂತೆ ದಂಡಿಸಿದ ಹೆಡ್ ಮತ್ತು ಅಭಿಷೇಕ್ ಸ್ಟೇಡಿಯಂನ ಮೂಲೆ ಮೂಲೆಗೂ ಚೆಂಡನ್ನು ಬಾರಿಸಿ ಕೇವಲ 19 ಎಸೆತಗಳಿಂದ ಅರ್ಧಶತಕ ಪೂರ್ತಿಗೊಳಿಸಿದರು.
ಅಭಿಷೇಕ್ ಶರ್ಮ 19 ಎಸೆತಗಳಲ್ಲಿ ಅರ್ಧಶತಕ ಬಾರಿಸಿದರು. ಅದರಲ್ಲೂ ಹೆಡ್ ಕನ್ನಡಿಗ ಕೃಷ್ಣಪ್ಪ ಗೌತಮ್ ಅವರಿಗೆ ಸಿಕ್ಸರ್ ಮತ್ತು ಬೌಂಡರಿಗಳ ಮೂಲಕ ಚಳಿ ಬಿಡಿಸಿದರು. 30 ಎಸೆತ ಎದುರಿಸಿದ ಹೆಡ್ ತಲಾ 8 ಸಿಕ್ಸರ್ ಮತ್ತು ಬೌಂಡರಿ ಸಿಡಿಸಿ ಅಜೇಯ 89 ರನ್ ಬಾರಿಸಿದರು. ಅಭಿಷೇಕ್ ಶರ್ಮ 8 ಬೌಂಡರಿ ಮತ್ತು 6 ಸಿಕ್ಸರ್ ನೆರವಿನಿಂದ ಅಜೇಯ 75 ರನ್ ಬಾರಿಸಿ ತಂಡದ ಜಯ ಸಾರಿದರು.
ಇದನ್ನೂ ಓದಿ IPL 2024 Points Table: ಸನ್ರೈಸರ್ಸ್ಗೆ 10 ವಿಕೆಟ್ ಗೆಲುವು; ಅಂಕಪಟ್ಟಿಯಲ್ಲಿ ಕುಸಿದ ಚೆನ್ನೈ
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ಲಕ್ನೋ ತಂಡದ ಪವರ್ ಪ್ಲೇ ವೈಫಲ್ಯ ಈ ಪಂದ್ಯದಲ್ಲಿಯೂ ಮುಂದುವರಿಯಿತು. ರನ್ ಗಳಿಸಲು ಪರದಾಡಿದ ಕ್ವಿಂಟನ್ ಡಿ ಕಾಕ್(2) ರನ್ಗೆ ವಿಕೆಟ್ ಕಳೆದುಕೊಂಡರೆ, ಇದರ ಬೆನ್ನಲ್ಲೇ ಮಾರ್ಕಸ್ ಸ್ಟೋಯಿನಿಸ್ 3 ರನ್ ಗಳಿಸಿ ಪೆವಿಲಿಯನ್ ಕಡೆಗೆ ನಡೆದರು. 21 ರನ್ಗೆ 2 ವಿಕೆಟ್ ಕಳೆದುಕೊಂಡು ತಂಡ ಸಂಕಷ್ಟಕ್ಕೆ ಸಿಲುಕಿತು. ಪವರ್ ಪ್ಲೇಯಲ್ಲಿ ದಾಖಲಾದದ್ದು ಕೇವಲ 27 ರನ್ ಮಾತ್ರ. ಇದು ತಂಡದ ಬೃಹತ್ ಮೊತ್ತಕ್ಕೆ ಹಿನ್ನಡೆಯಾಯಿತು.
ನಾಯಕ ರಾಹುಲ್ ಕೂಡ ಅತ್ಯಂತ ರಕ್ಷಣಾತ್ಮಕ ಆಟಕ್ಕೆ ಒತ್ತು ಕೊಟ್ಟು 33 ಎಸೆತಗಳಿಂದ 29 ರನ್ ಬಾರಿಸಿದರು. ಬಾರಿಸಿದ್ದು ತಲಾ ಒಂದು ಸಿಕ್ಸರ್ ಮತ್ತು ಬೌಂಡರಿ ಮಾತ್ರ. 4ನೇ ವಿಕೆಟ್ಗೆ ಆಡಲು ಬಂದ ಕೃಣಾಲ್ ಪಾಂಡ್ಯ ಮಧ್ಯಮ ಕ್ರಮಾಂದಲ್ಲಿ ಸಣ್ಣ ಮಟ್ಟದ ಹೋರಾಟ ಸಂಘಟಿಸಿ 2 ಸಿಕ್ಸರ್ ಸಿಡಿಸಿ 24 ರನ್ ಗಳಿಸಿ ಪ್ಯಾಟ್ ಕಮಿನ್ಸ್ ಅವರ ನೇರ ಥ್ರೋಗೆ ರನೌಟ್ ಆದರು. ತೀವ್ರ ಸಂಕಷ್ಟಕ್ಕೆ ಸಿಲುಕಿದ್ದ ತಂಡಕ್ಕೆ ಆಸರೆಯಾದದ್ದು ಆಯುಷ್ ಬದೋನಿ ಮತ್ತು ನಿಕೋಲಸ್ ಪೂರನ್. ಉಭಯ ಆಟಗಾರರು ಹೈದರಾಬಾದ್ ಬೌಲಿಂಗ್ ದಾಳಿಯನ್ನು ಸಮರ್ಥವಾಗಿ ಎದುರಿಸಿ ನಿಂತು 5ನೇ ವಿಕೆಟ್ಗೆ ಮುರಿಯದ 99 ರನ್ಗಳ ಅತ್ಯಮೂಲ್ಯ ಜತೆಯಾಟ ನಡೆಸಿದರು. ಹೀಗಾಗಿ ತಂಡ 150ರ ಗಡಿ ದಾಡಿತು.