ಕರಾಚಿ: ಇತ್ತೀಚಿನ ದಿನಗಳಲ್ಲಿ ವಿಚ್ಛೇದನ ಕೇಸ್ ಹೆಚ್ಚಳವಾಗಲು(Rising divorce rate) ಪ್ರಮುಖ ಕಾರಣ ಏನೆಂಬುದನ್ನು ಪಾಕಿಸ್ತಾನ ಮಾಜಿ ಆಟಗಾರ ಮತ್ತು ನಾಯಕ ಸಯೀದ್ ಅನ್ವರ್(Saeed Anwar) ವಿವರಿಸಿದ್ದಾರೆ. ಮಹಿಳೆಯರು ಕೆಲಸ ಮಾಡಲು ಆರಂಭಿಸಿದ್ದೇ ವಿಚ್ಛೇದನ ಹೆಚ್ಚಳಕ್ಕೆ ಕಾರಣ ಎಂದು ಹೇಳಿದ್ದಾರೆ. ಅವರು ನೀಡಿರುವ ಈ ಹೇಳಿಕೆ ಇದೀಗ ಭಾರೀ ವಿವಾದ ಮತ್ತು ವೈರಲ್(Viral Video) ಆಗಿದೆ.
ಕಳೆದ ಮೂರು ವರ್ಷಗಳಲ್ಲಿ ಪಾಕಿಸ್ತಾನದಲ್ಲಿ ವಿಚ್ಛೇದನ ಪ್ರಮಾಣ ಸುಮಾರು 30 ಪ್ರತಿಶತದಷ್ಟು ಹೆಚ್ಚಳವಾಗಿದೆ. ಮಹಿಳೆಯರ ದುಡಿಯಲು ಆರಂಭಿಸಿದ ಕಾರಣ ಅವರು ಕೂಡ ಆರ್ಥಿಕವಾಗಿ ಸಧೃಡವಾಗಿದ್ದಾರೆ. ಹೀಗಾಗಿ ಅವರು ಮನೆಯ ಮೇಲೆ ನಿಯಂತ್ರಣವನ್ನು ಸಾಧಿಸುತ್ತಾರೆ. ಬೈಗುಳ ಕೇಳಿ ನರಕದಲ್ಲಿ ಜೀವನ ಮಾಡುವುದಕ್ಕಿಂತ, ನಾನೇ ಸಂಪಾದಿಸಬಲ್ಲೆ. ನಾನು ಸ್ವಂತವಾಗಿ ಸಂಸಾರ ನಡೆಸಬಲ್ಲೆ ಎಂಬ ಬಲವಾದ ನಂಬಿಕೆ ಬರುತ್ತದೆ. ಇದೇ ಕಾರಣದಿಂದ ವಿಚ್ಛೇದನ ಪ್ರಮಾಣ ಹೆಚ್ಚಾಗಿದೆ ಎಂದು ಅನ್ವರ್ ಹೇಳಿದರು.
“1.05 ನಿಮಿಷಗಳ ವಿಡಿಯೊದಲ್ಲಿ ಮಾತನಾಡಿದ ಅನ್ವರ್, ನಾನು ಜಗತ್ತಿನ ಹಲವು ರಾಷ್ಟ್ರಗಳಿಗೆ ಪ್ರಯಾಣಿಸಿದ್ದೇನೆ. ನಾನು ಈಗಷ್ಟೇ ಆಸ್ಟ್ರೇಲಿಯಾ, ಯುರೋಪ್‍ನಿಂದ ಹಿಂತಿರುಗುತ್ತಿದ್ದೇನೆ. ಅಲ್ಲಿ ಯುವಕರು ನರಳುತ್ತಿದ್ದಾರೆ. ಕುಟುಂಬಗಳು ಕೆಟ್ಟ ಸ್ಥಿತಿಯಲ್ಲಿವೆ. ದಂಪತಿಗಳು ಜಗಳವಾಡುತ್ತಿದ್ದಾರೆ. ವ್ಯವಹಾರದ ಸ್ಥಿತಿ ತುಂಬಾ ಕೆಟ್ಟದಾಗಿದೆ. ನ್ಯೂಜಿಲ್ಯಾಂಡ್ ನಾಯಕ ಕೇನ್ ವಿಲಿಯಮ್ಸನ್ ಹಾಗೂ ಆಸ್ಟ್ರೇಲಿಯಾದ ಮಾಜಿ ಆಟಗಾರ ಕೂಡ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದು ಅನ್ವರ್ ಹೇಳಿದ್ದಾರೆ. ಈ ವಿಡಿಯೊ ವೈರಲ್ ಆಗಿದೆ.
ಅನ್ವರ್ ಹೇಳಿಕೆಗೆ ಅನೇಕರು ಭಾರೀ ವಿರೋಧ ವ್ಯಕ್ತಪಡಿಸಿದ್ದಾರೆ. ಮೂಲಭೂತವಾಗಿ ನೀವು ಮಹಿಳೆಯರನ್ನು ಗುಲಾಮರನ್ನಾಗಿ ಮಾಡಬೇಕೆಂದು ಹೇಳುತ್ತಿದ್ದೀರಿ. ಮಹಿಳೆಯರಿಗೂ ರೆಕ್ಕೆಗಳನ್ನು ಬಿಚ್ಚಿ ಹಾರಾಡುವ ಅಕಾಶ ನೀಡಬೇಕು. ಆದರೆ ನೀವು ಅವರನ್ನು ಸಾಕುಪ್ರಾಣಿಗಳಂತೆ ಪುರುಷರಿಗೆ ಸೇವೆ ಸಲ್ಲಿಸಬೇಕೆಂಬ ಮನಸ್ಥಿತಿ ಹೊಂದಿದ್ದೀರಿ ಎಂದು ತಿರುಗೇಟು ನೀಡಿದ್ದಾರೆ.
ಇದನ್ನೂ ಓದಿ Viral Video: ಪನೀರ್ ಬಿರಿಯಾನಿಯಲ್ಲಿ ಚಿಕನ್ ಪೀಸ್.. ಜೊಮ್ಯಾಟೊದಿಂದ ಮತ್ತೊಂದು ಎಡವಟ್ಟು
“ಮಹಿಳೆಯರು ಕೆಲಸ ಮಾಡಲು ಮತ್ತು ಅವರ ಸಾಮರ್ಥ್ಯವನ್ನು ಅರಿತುಕೊಳ್ಳಲು ಸುರಕ್ಷಿತ ವಾತಾವರಣವನ್ನು ಕೇಳುವ ಬದಲು, ಅವರು ಮಹಿಳೆಯರನ್ನು ಮನೆಯಲ್ಲಿಯೇ ಇರಲು ಕೇಳುತ್ತಿದ್ದಾರೆ. ಸಿದ್ಧಾಂತದಲ್ಲಿ ಏನೋ ತಪ್ಪಾಗಿದೆ” ಎಂದು ಮತ್ತೊಬ್ಬ ಮಹಿಳೆ ಕಮೆಂಟ್ ಮಾಡಿದ್ದಾರೆ. “ ಜಗತ್ತು ಮತಾಂತರಗೊಳ್ಳಬೇಕೆಂದು ಬಯಸುವ ನಿಮ್ಮಿಂದ ಇನ್ನೇನು ನಿರೀಕ್ಷಿಸಬಹುದು. “ಇದು ಮಹಿಳೆಯರಿಗೆ ತುಂಬಾ ಅವಮಾನಕರವಾಗಿದೆ” ಹೀಗೆ ಹಲವು ಮಹಿಳೇಯರು ಅನ್ವರ್ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.