ಬಾರ್ಬಡೋಸ್: ಈ ಬಾರಿಯಾ ಟಿ20 ವಿಶ್ವಕಪ್ ಟೂರ್ನಿಯಲ್ಲಿ ವಿರಾಟ್ ಕೊಹ್ಲಿ(Virat Kohli) ತಾವು ಬ್ಯಾಟಿಂಗ್ ವೈಫಲ್ಯ ಕಾಣಲು ಕಾರಣ ಏನೆಂಬುದನ್ನು ತಿಳಿಸಿದ್ದಾರೆ. ಕೊಹ್ಲಿ ಈ ಮಾತು ಕೇಳಿ ಕೆಲವರಿಗೆ ಅಚ್ಚರಿಯಾಗಿದೆ. ಹೌದು, ಫೈನಲ್ ಪಂದ್ಯದ ಬಳಿಕ ಮಾತನಾಡಿದ ಕೊಹ್ಲಿ, ನನ್ನ ಅಹಂಕಾರವೇ ಈ ವೈಫಲ್ಯಕ್ಕೆ ಕಾರಣ ಎಂದಿದ್ದಾರೆ.
ದಕ್ಷಿಣ ಆಫ್ರಿಕಾ ವಿರುದ್ಧ ಕಳೆದ ಶನಿವಾರ ನಡೆದ ಫೈನಲ್ ಪಂದ್ಯದಲ್ಲಿ ಕೊಹ್ಲಿ ಅರ್ಧಶತಕ ಬಾರಿಸುವ ಮೂಲಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಫೈನಲ್ ಪಂದ್ಯಕ್ಕೂ ಮುನ್ನ ಆಡಿದ ಎಲ್ಲ ಪಂದ್ಯಗಳಲ್ಲಿಯೂ ಕೊಹ್ಲಿ ಸಂಪೂರ್ಣ ವೈಫಲ್ಯ ಕಂಡಿದ್ದರು. ಇದುವರೆಗೂ ವಿಶ್ವಕಪ್ ಟೂರ್ನಿಯಲ್ಲಿ ಶೂನ್ಯಕ್ಕೆ ಔಟಾಗದೆ ಇದ್ದ ಕೊಹ್ಲಿ ಈ ಬಾರಿ 2 ಸಲ ಶೂನ್ಯಕ್ಕೆ ಔಟಾಗುವ ಮೂಲಕ ಅವಮಾನ ಎದುರಿಸಿದ್ದರು.
ಫೈನಲ್ ಪಂದ್ಯ ಬಳಿಕ ಮಾತನಾಡಿದ ಕೊಹ್ಲಿ, ಪ್ರಾಮಾಣಿಕವಾಗಿ ಹೇಳಬೇಕೆಂದರೆ, ನಾನು ಈ ಟೂರ್ನಿಯಿಂದ ಜೀವನದಲ್ಲಿ ಹಲವು ಪಾಠ ಕಲಿತಿದ್ದೇನೆ. ನನ್ನ ಅಹಂ ಅನ್ನು ಬದಿಗೆ ಇಟ್ಟು ಹೇಳುವುದಾದರೆ, ನಾನೇ ಎಲ್ಲ, ನಾನೇ ಶ್ರೇಷ್ಠ ಎನ್ನುವ ಅಹಂ ಬಿಡಬೇಕು. ಅಹಂಕಾರದಿಂದ ಏನೂ ಸಾಧಿಸಲು ಸಾಧ್ಯವಿಲ್ಲ ಎನ್ನುವುದು ನನಗೆ ಈಗ ಅರ್ಥವಾಗಿದೆ. ಒಂದು ಕ್ಷಣದಲ್ಲಿ ಎದುರಾದ ಪರಿಸ್ಥಿತಿಗೆ ಗೌರವಿಸಿ, ತಲೆಬಾಗಲೇ ಬೇಕು. ಇದನ್ನು ಬಿಟ್ಟು ಅಹಂ ತೋರಿದರೆ ದೇವರು ಕೂಡ ಮೆಚ್ಚುವುದಿಲ್ಲ. ನನ್ನ ವಿಚಾರದಲ್ಲೂ ಕೂಡ ಅದೇ ಆಯಿತು” ಎಂದು ಕೊಹ್ಲಿ ಮುಕ್ತವಾಗಿ ಹೇಳಿಕೊಂಡರು.
ಇದನ್ನೂ ಓದಿ Virat Kohli : ಶುಭಾಶಯ ಕೋರಿದ ನರೇಂದ್ರ ಮೋದಿಗೆ ಪ್ರತಿಕ್ರಿಯೆ ಕೊಟ್ಟ ಕೊಹ್ಲಿ; ಇಲ್ಲಿದೆ ಅದರ ವಿವರ
ಕೊಹ್ಲಿ ಅಹಂ ಬಗ್ಗೆ ಟಿ20 ವಿಶ್ವಕಪ್ ಟೂರ್ನಿ ಆರಂಭಕ್ಕೂ ಮುನ್ನವೇ ಮಾಜಿ ಆಟಗಾರ ಅಂಬಾಟಿ ರಾಯುಡು ಹೇಳಿಕೆ ನೀಡಿದ್ದರು. ಕೊಹ್ಲಿ ತನ್ನ ತಂಡದಲ್ಲಿರುವ ಸಹ ಆಟಗಾರರಂತೆ ಪ್ರದರ್ಶನ ನೀಡಬೇಕು. ಕೊಂಚ ಸ್ಟಾಂಡರ್ಡ್ ಕಮ್ಮಿ ಮಾಡುಕೊಳ್ಳುವುದು ಸೂಕ್ತ ಎಂದಿದ್ದರು. ಆದರೆ ಈ ವೇಳೆ ಕೊಹ್ಲಿ ಅಭಿಮಾನಿಗಳು ರಾಯುಡು ವಿರುದ್ಧ ಕಿಡಿ ಕಾರಿದ್ದರು. ಇದೀಗ ಕೊಹ್ಲಿಯೇ ತಮ್ಮ ಅಹಂ ಬಗ್ಗೆ ಒಪ್ಪಿಕೊಂಡಿದ್ದಾರೆ.
ವಿರಾಟ್ ಕೊಹ್ಲಿ ಅವರು ಈ ಸ್ಮರಣೀಯ ಗೆಲುವಿನ ಬಳಿಕ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ಗೆ ವಿದಾಯ ಹೇಳಿದರು. 76 ರನ್ ಬಾರಿಸಿ ಪಂದ್ಯಶ್ರೇಷ್ಠ ಪ್ರಶಸ್ತಿ ಸ್ವೀಕರಿಸಿದ ವೇಳೆ ಕೊಹ್ಲಿ ತಮ್ಮ ನಿವೃತ್ತಿ ಘೋಷಿಸಿದರು. ‘ದೇವರು ದೊಡ್ಡವನು. ಭಾರತಕ್ಕಾಗಿ ಇದು ನನ್ನ ಕೊನೆಯ ಟಿ20 ಪಂದ್ಯವಾಗಿತ್ತು. ನಾವು ಆ ಕಪ್ ಎತ್ತಲು ಬಯಸಿದ್ದೆ. ಇದು ಸಾಕಾರಗೊಂಡಿದೆ. ಮುಂದಿನ ಪೀಳಿಗೆಗೆ ಟಿ20 ಆಟವನ್ನು ಮುಂದಕ್ಕೆ ಕೊಂಡೊಯ್ಯುವ ಸಮಯ ಇದು. ಅದ್ಭುತ ದಿನದಂದು ವಿದಾಯ ಹೇಳುವ ಸೌಭಾಗ್ಯ ನನಗೆ ಒದಗಿದ್ದು ನಿಜ್ಜಕ್ಕೂ ಸಂತಸ ತಂದಿದೆ” ಎಂದರು.
ಕೊಹ್ಲಿ ತಮ್ಮ 125 ಪಂದ್ಯಗಳ ಟಿ 20 ಅಂತಾರಾಷ್ಟ್ರೀಯ ವೃತ್ತಿಜೀವನವನ್ನು ಭಾರತದ ಎರಡನೇ ಅತಿ ಹೆಚ್ಚು ರನ್ ಗಳಿಸಿದ ಸ್ವರೂಪದಲ್ಲಿ ಕೊನೆಗೊಳಿಸಿದ್ದಾರೆ. 4188 ರನ್, 48.69 ಸರಾಸರಿ ಮತ್ತು ಸ್ಟ್ರೈಕ್ ರೇಟ್ 137.04 ಹೊಂದಿದ್ದಾರೆ. ಈ ಟಿ 20 ವಿಶ್ವಕಪ್ ನ ಫೈನಲ್ ಪಂದ್ಯದಲ್ಲಿ 59 ಎಸೆತಗಳಲ್ಲಿ 76 ರನ್ ಮಾಡುವ ಮೊದಲು ಏಳು ಇನ್ನಿಂಗ್ಸ್‌ಗಳಲ್ಲಿ ಕೇವಲ 75 ರನ್ ಮಾತ್ರ ಗಳಿಸಿದ್ದರು.