ಲಂಡನ್: ಟೀಮ್ ಇಂಡಿಯಾದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ(virat kohli) ಅಂತಾರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಹೇಳಿದ ಬಳಿಕ ಭಾರತ ತೊರೆದು ಕುಟುಂಬ ಸಮೇತರಾಗಿ ಲಂಡನ್ನಲ್ಲಿ ನೆಲೆಸಲಿದ್ದಾರೆ ಎಂಬ ಮಾತುಗಳು ಈಗಾಗಲೇ ಕೇಳಿ ಬಂದಿವೆ. ಟಿ20 ವಿಶ್ವಕಪ್ ಮುಗಿದ ಬಳಿಕ ಭಾರತಕ್ಕೆ ಬಂದಿದ್ದ ಕೊಹ್ಲಿ ಮುಂಬೈಯಲ್ಲಿ ನಡೆದಿದ್ದ ಅಭಿನಂದನಾ ಕಾರ್ಯಕ್ರಮ ಮುಗಿದ ದಿನದಂದೇ ಲಂಡನ್ಗೆ ತೆರಳಿದ್ದರು. ಬಳಿಕ ಮಕ್ಕಳು ಮತ್ತು ಪತ್ನಿಯ ಜತೆ ಲಂಡನ್ನ ಸ್ಟ್ರೀಟ್ ಒಂದರಲ್ಲಿ ತಿರುಗಾಡುತ್ತಿರುವ ವಿಡಿಯೊ ಕೂಡ ವೈರಲ್ ಆಗಿತ್ತು. ಇದೀಗ ಲಂಡನ್ನ ರಸ್ತೆಯೊಂದರ ಸಿಗ್ನಲ್ನಲ್ಲಿ ಕೊಹ್ಲಿ ಏಕಾಂಗಿಯಾಗಿ ನಿಂತಿರುವ ವಿಡಿಯೊ ವೈರಲ್ ಆಗಿದೆ(video goes viral). ಈ ವಿಡಿಯೊದಲ್ಲಿ ವಿರಾಟ್ ಕೊಹ್ಲಿ ಸಾಮಾನ್ಯರಲ್ಲಿ ಸಾಮಾನ್ಯರಂತೆ ನಿಂತಿರುವುದನ್ನು ಕಾಣಬಹುದಾಗಿದೆ.
ವಿರಾಟ್ ಕೊಹ್ಲಿ ಕಳೆದ ಇಂಗ್ಲೆಂಡ್ ವಿರುದ್ಧದ ತವರಿನ ಟೆಸ್ಟ್ ಸರಣಿ ವೇಳೆ ವೈಯಕ್ತಿಕ ಕಾರಣ ನೀಡಿ ಸರಣಿಯಿಂದ ಹಿಂದೆ ಸರಿದ್ದರು. ಇದಾದ ಬಳಿಕ ಕೊಹ್ಲಿ 2 ತಿಂಗಳ ಕಾಲ ಎಲ್ಲಿಯೂ ಯಾರ ಕಣ್ಣಿಗೂ ಕಾಣಿಸಿಕೊಂಡಿರಲಿಲ್ಲ. ಐಪಿಎಲ್ ವೇಳೆ ಕೊಹ್ಲಿ ತಾವು 2 ತಿಂಗಳು ಏನೆಲ್ಲ ಮಾಡಿದೆ ಎನ್ನುವ ವಿಚಾರವನ್ನು ಬಹಿರಂಗಪಡಿಸಿದ್ದರು. “ಎರಡು ತಿಂಗಳ ಬಿಡುವಿನ ವೇಳೆಯಲ್ಲಿ ಕುಟುಂಬದ ಜತೆ ಅಮೂಲ್ಯ ಸಮಯ ಕಳೆದೆ. ನಾವು ದೇಶದಲ್ಲಿ ಇರಲಿಲ್ಲ. ಜನರು ನಮ್ಮನ್ನು ಗುರುತಿಸಲು ಸಾಧ್ಯವಾಗದ ಪ್ರದೇಶದಲ್ಲಿ ನಾವಿದ್ದೆವು. ಈ ಎರಡು ತಿಂಗಳ ಕಾಲ ಕುಟುಂಬದೊಂದಿಗೆ ಅತ್ಯಮೂಲ್ಯ ಸಮಯವನ್ನು ಕಳೆದಿದ್ದೇನೆ. ರಸ್ತೆಯಲ್ಲಿ ಓಡಾಡುವಾಗ ಎಲ್ಲರಂತೆ ನಾನೂ ಕೂಡ ಸಾಮಾನ್ಯ ವ್ಯಕ್ತಿಯಾಗಿ ಓಡಾಡಿದ್ದು ನಿಜಕ್ಕೂ ಅದ್ಭುತ ಅನುಭವ. ಇದಕ್ಕಾಗಿ ದೇವರಿಗೆ ಧನ್ಯವಾದ ತಿಳಿಸುತ್ತೇನೆ” ಎಂದಿದ್ದರು.
ಅಭಿಮಾನಿಗಳ ಜಂಜಾಟದಿಂದ ತಪ್ಪಿಸಿಕೊಂಡು ಸಾಮಾನ್ಯರಂತೆ ಜೀವಿಸಲು ಇಷ್ಟ ಪಡುತ್ತಿರುವ ಕೊಹ್ಲಿ ಮುಂದಿನ ದಿನದಲ್ಲಿ ಲಂಡನ್ನಲ್ಲಿಯೇ ನೆಲೆಸುವ ಸಾಧ್ಯತೆ ಇದೆ. ಶ್ರೀಲಂಕಾ ವಿರುದ್ಧದ ಏಕದಿನ ಸರಣಿ ಮುಕ್ತಾಯದ ಬಳಿಕ ಕೂಡ ಕೊಹ್ಲಿ ಭಾರತಕ್ಕೆ ಆಗಮಿಸದೆ ನೇರವಾಗಿ ಲಂಡನ್ಗೆ ತೆರಳಿದ್ದರು. ಇದನೆಲ್ಲ ನೋಡುವಾಗ ಕೊಹ್ಲಿ ಮತ್ತು ಅವರ ಕುಟುಂಬ ಲಂಡನ್ನಲ್ಲಿಯೇ ನೆಲೆಸಲಿದ್ದಾರೆ ಎನ್ನಲಡ್ಡಿಯಿಲ್ಲ.
ಹಿಂದೂಸ್ತಾನ್ ಟೈಮ್ಸ್ ವರದಿ ಪ್ರಕಾರ, ಅನುಷ್ಕಾ ಮತ್ತು ವಿರಾಟ್ ಯುಕೆ ಮೂಲದ ಕಂಪನಿಯ ನಿರ್ದೇಶಕರಾಗಿದ್ದಾರೆ. ಯುಕೆ ಸರ್ಕಾರದ ಫೈಂಡ್ ಅಂಡ್ ಅಪ್ಡೇಟ್ ಕಂಪನಿಯ ಮಾಹಿತಿ ಸೇವೆಯ ಪ್ರಕಾರ, ದಂಪತಿಗಳು ಮ್ಯಾಜಿಕ್ ಲ್ಯಾಂಪ್ನ ಮೂವರು ನಿರ್ದೇಶಕರಲ್ಲಿ ಇಬ್ಬರು. ಇದು ಆಗಸ್ಟ್ 1, 2022 ರಂದು ಆರಂಭಗೊಂಡ ಸಲಹಾ ಸಂಸ್ಥೆಯಾಗಿದೆ. ಕಂಪನಿಯ ಅಧಿಕೃತ ಕಚೇರಿ ವಿಳಾಸವು ಯುಕೆಯ ವೆಸ್ಟ್ ಯಾರ್ಕ್ಶೈರ್ನಲ್ಲಿದೆ.
ವಿರಾಟ್ ಕೊಹ್ಲಿ ಅವರು ಟಿ20 ವಿಶ್ವಕಪ್ ಸ್ಮರಣೀಯ ಗೆಲುವಿನ ಬಳಿಕ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ಗೆ ವಿದಾಯ ಹೇಳಿದ್ದರು. ಫೈನಲ್ ಪಂದ್ಯದಲ್ಲಿ 76 ರನ್ ಬಾರಿಸಿ ಪಂದ್ಯಶ್ರೇಷ್ಠ ಪ್ರಶಸ್ತಿ ಸ್ವೀಕರಿಸಿದ ವೇಳೆ ಕೊಹ್ಲಿ ತಮ್ಮ ನಿವೃತ್ತಿ ಘೋಷಿಸಿದ್ದರು. ‘ದೇವರು ದೊಡ್ಡವನು. ಭಾರತಕ್ಕಾಗಿ ಇದು ನನ್ನ ಕೊನೆಯ ಟಿ20 ಪಂದ್ಯವಾಗಿತ್ತು. ನಾವು ಆ ಕಪ್ ಎತ್ತಲು ಬಯಸಿದ್ದೆ. ಇದು ಸಾಕಾರಗೊಂಡಿದೆ. ಮುಂದಿನ ಪೀಳಿಗೆಗೆ ಟಿ20 ಆಟವನ್ನು ಮುಂದಕ್ಕೆ ಕೊಂಡೊಯ್ಯುವ ಸಮಯ ಇದು. ಅದ್ಭುತ ದಿನದಂದು ವಿದಾಯ ಹೇಳುವ ಸೌಭಾಗ್ಯ ನನಗೆ ಒದಗಿದ್ದು ನಿಜ್ಜಕ್ಕೂ ಸಂತಸ ತಂದಿದೆ” ಎಂದಿದ್ದರು. ಕೊಹ್ಲಿ ತಮ್ಮ 125 ಪಂದ್ಯಗಳ ಟಿ 20 ಅಂತಾರಾಷ್ಟ್ರೀಯ ವೃತ್ತಿಜೀವನವನ್ನು ಭಾರತದ ಎರಡನೇ ಅತಿ ಹೆಚ್ಚು ರನ್ ಗಳಿಸಿದ ಸ್ವರೂಪದಲ್ಲಿ ಕೊನೆಗೊಳಿಸಿದ್ದಾರೆ. 4188 ರನ್, 48.69 ಸರಾಸರಿ ಮತ್ತು ಸ್ಟ್ರೈಕ್ ರೇಟ್ 137.04 ಹೊಂದಿದ್ದರು.