Site icon Vistara News

WI vs USA: ಹೋಪ್‌ ಬ್ಯಾಟಿಂಗ್​ ಆರ್ಭಟಕ್ಕೆ ತಲೆಬಾಗಿದ ಅಮೆರಿಕ; ವಿಂಡೀಸ್​ ಸೆಮಿ ಆಸೆ ಜೀವಂತ

WI vs USA

WI vs USA: West Indies won by 9 wkts

ಬಾರ್ಬಡೋಸ್​: ಬ್ಯಾಟಿಂಗ್​ ಮತ್ತು ಬೌಲಿಂಗ್​ನಲ್ಲಿ ಸಂಘಟಿತ ಪ್ರದರ್ಶನ ತೋರಿದ ವೆಸ್ಟ್​ ಇಂಡೀಸ್​(WI vs USA) ತಂಡ ಶನಿವಾರ ನಡೆದ ಸೂಪರ್​-8 ಪಂದ್ಯದಲ್ಲಿ ಅಮೆರಿಕ ವಿರುದ್ಧ 9 ವಿಕೆಟ್​ಗಳ ಗೆಲುವು ಸಾಧಿಸಿ ಸೆಮಿಫೈನಲ್​ ಆಸೆಯನ್ನು ಜೀವಂತವಾಗಿರಿಸಿದೆ. ಸತತ 2 ಸೋಲು ಕಂಡ ಅಮೆರಿಕ ಬಹುತೇಕ ಟೂರ್ನಿಯಿಂದ ಹೊರಬಿದ್ದಂತಾಗಿದೆ.

ಇಲ್ಲಿನ ಕೆನ್ಸಿಂಗ್ಟನ್‌ ಓವಲ್‌ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್‌ ಗೆದ್ದ ವೆಸ್ಟ್‌ ಇಂಡೀಸ್‌ ಮೊದಲು ಬೌಲಿಂಗ್‌ ಆಯ್ದುಕೊಂಡಿತು. ಆಯ್ಕೆಗೆ ತಕ್ಕ ಬೌಲಿಂಗ್‌ ಪ್ರದಶನ ತೋರುವ ಮೂಲಕ ಅಮೆರಿಕವನ್ನು ಕೇವಲ 128 ರನ್‌ಗಳಿಗೆ ಕಟ್ಟಿಹಾಕಿತು. ಬಳಿಕ ಈ ಸಣ್ಣ ಮೊತ್ತವನ್ನು ಬೆನ್ನಟ್ಟಿದ ವಿಂಡೀಸ್‌ 10.5 ಓವರ್‌ಗಳಲ್ಲಿ ಕೇವಲ ಒಂದು ವಿಕೆಟ್‌ನಷ್ಟಕ್ಕೆ 130 ರನ್‌ ಬಾರಿಸಿ ಭಜರಿ ಗೆಲುವು ತನ್ನದಾಗಿಸಿಕೊಂಡಿತು.

ಚೇಸಿಂಗ್​ ವೇಳೆ ಸಿಡಿದು ನಿಂತ ಓಪನರ್‌ ಶೈ ಹೋಪ್‌ ಅಮೆರಿಕ ಬೌಲರ್​ಗಳ ಮೇಲೆರಗಿ ಸಿಕ್ಸರ್ ಮತ್ತು ಬೌಂಡರಿಗಳ ಸುರಿಮಳೆಯನ್ನೇ ಸುರಿಸಿದರು. ಮೈದಾನದ ಮೂಲೆ ಮೂಲೆಗೆ ಚೆಂಡನ್ನು ಬಡಿದಟ್ಟಿ ತವರಿನ ಅಭಿಮಾನಿಗಳಿಗೆ ಭರಪೂರ ಮನರಂಜನೆ ಒದಗಿಸಿದರು. 39 ಎಸೆತಗಳಿಂದ ಅಜೇಯ 82 ರನ್​ ಬಾರಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಗೆಲುವಿನ ರನ್​ ಕೂಡ ಸಿಕ್ಸರ್​ ಮೂಲಕವೇ ಸಾರಿದರು. ಇವರ ಸ್ಫೋಟಕ ಬ್ಯಾಟಿಂಗ್​ ಇನಿಂಗ್ಸ್​ ವೇಳೆ ಬರೋಬ್ಬರಿ 8 ಸಿಕ್ಸರ್​ ಮತ್ತು 4 ಬೌಂಡರಿ ದಾಖಲಾಯಿತು. ಕಳೆದೊಂದು ವರ್ಷದಿಂದ ಬ್ಯಾಟಿಂಗ್ ಫಾರ್ಮ್​ ಕಳೆದುಕೊಂಡಿದ್ದ ಹೋಪ್‌ ಈ ಪಂದ್ಯದಲ್ಲಿ ಪ್ರಚಂಡ ಬ್ಯಾಟಿಂಗ್​ ನಡೆಸಿ ತಮ್ಮ ಹಳೆಯ ಬ್ಯಾಟಿಂಗ್ ಫಾರ್ಮ್ ಕಂಡುಕೊಂಡರು.

ಇದನ್ನೂ ಓದಿ IND vs BAN: ಇಂದು ಭಾರತ-ಬಾಂಗ್ಲಾ ಸೂಪರ್​-8 ಸೆಣಸಾಟ; ಪಂದ್ಯಕ್ಕೆ ಮಳೆ ಭೀತಿ ಇದೆಯೇ?

​ನಿಕೋಲಸ್​ ಪೂರನ್​ ಕೂಡ ಬಿರುಸಿನ ಬ್ಯಾಟಿಂಗ್​ ಮೂಲಕ ಕೇವಲ 12 ಎಸೆತಗಳಿಂದ 3 ಸಿಕ್ಸರ್​ ಮತ್ತು 1 ಬೌಂಡರಿ ಬಾರಿಸಿ ಅಜೇಯ 27 ರನ್​ ಗಳಿಸಿದರು. ಅಮೆರಿಕ ಪರ ಭಾರತೀಯ ಮೂಲದ ಬೌಲರ್​ ಹರ್ಮೀತ್ ಸಿಂಗ್ 18 ನ್​ ನೀಡಿ 1 ವಿಕೆಟ್​ ಕಿತ್ತರು.

ಮೊದಲು ಬ್ಯಾಟಿಂಗ್‌ ನಡೆಸಿದ ಅಮೆರಿಕಕ್ಕೆ ಆ್ಯಂಡ್ರೆ ರಸೆಲ್​ ಮೊದಲ ಓವರ್​ನಲ್ಲಿಯೇ ಆಘಾತವಿಕ್ಕಿದರು. ಅಪಾಯಕಾರಿ ಬ್ಯಾಟರ್​ ಸ್ಟೀವನ್ ಟೇಲರ್(3) ವಿಕೆಟ್​ ಕಿತ್ತರು. 3 ರನ್​ಗೆ 1 ವಿಕೆಟ್​ ಕಳೆದುಕೊಂಡಿತು. ದ್ವಿತೀಯ ಜತೆಯಾದ ಆಂಡ್ರೀಸ್ ಗೌಸ್(29) ಮತ್ತು ಎನ್ ಆರ್ ಕುಮಾರ್(20) ಸೇರಿಕೊಂಡು ಸಣ್ಣ ಬ್ಯಾಟಿಂಗ್​ ಹೋರಾಟವೊಂದನ್ನು ಸಂಘಟಿಸಿದರು. ಈ ಜೋಡಿ 48 ರನ್​ ಒಟ್ಟುಗೂಡಿಸಿದರು. ಈ ಜೋಡಿಯ ವಿಕೆಟ್​ ಪತನದ ಬಳಿಕ ಯಾರು ಕೂಡ ನಿರೀಕ್ಷಿತ ಬ್ಯಾಟಿಂಗ್​ ನಡೆಸುವಲ್ಲಿ ಯಶಸ್ಸು ಕಾಣಲಿಲ್ಲ.

ವಿಂಡೀಸ್​ ಪರ ಘಾತಕ ಬೌಲಿಂಗ್​ ದಾಳಿ ನಡೆಸಿದ ಆ್ಯಂಡ್ರೆ ರಸೆಲ್​ 31 ರನ್​ಗೆ 3 ವಿಕೆಟ್​ ಕಿತ್ತರೆ, ಸ್ಪಿನ್ನರ್ ರೋಸ್ಟನ್ ಚೇಸ್ 4 ಓವರ್​ ಬೌಲಿಂಗ್​ ನಡೆಸಿ ಕೇವಲ 19 ರನ್​ ವೆಚ್ಚದಲ್ಲಿ 3 ವಿಕೆಟ್​ ಉರುಳಿಸಿದರು. ಆಲ್ಜಾರಿ ಜೋಸೆಫ್​ 2 ವಿಕೆಟ್​ ಪಡೆದರು.

Exit mobile version