Site icon Vistara News

WPL 2024: ಆರ್‌ಸಿಬಿ ಶುಭಾರಂಭ; ಯುಪಿ ವಿರುದ್ಧ ಸ್ಮೃತಿ ಮಂಧಾನ ಪಡೆಗೆ ರೋಚಕ ಜಯ

RCB Women Team

WPL 2024: RCB Women's Team Won By 2 Runs Against UPW Women's Team

ಬೆಂಗಳೂರು: ಮಹಿಳೆಯರ ಪ್ರೀಮಿಯರ್‌ ಲೀಗ್‌ನಲ್ಲಿ (WPL 2024) ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಮಹಿಳೆಯರ ತಂಡ (RCB Women’s Team) ಹಾಗೂ ಉತ್ತರ ಪ್ರದೇಶ ವಾರಿಯರ್ಸ್‌ ಮಹಿಳೆಯರ ತಂಡದ (UPW Women’s Team) ಮಧ್ಯೆ ನಡೆದ ಪಂದ್ಯದಲ್ಲಿ ಸ್ಮೃತಿ ಮಂಧಾನ ಬಳಗವು 2 ರನ್‌ಗಳ ರೋಚಕ ಗೆಲುವು ಸಾಧಿಸಿದೆ. ಆ ಮೂಲಕ ಡಬ್ಲ್ಯೂಪಿಎಲ್‌ನ ಮೊದಲ ಪಂದ್ಯದಲ್ಲಿ ಗೆಲುವು ಸಾಧಿಸಿ ಶುಭಾರಂಭ ಮಾಡಿದೆ.

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಆರ್‌ಸಿಬಿ ನೀಡಿದ 158 ರನ್‌ಗಳ ಗುರಿ ಬೆನ್ನತ್ತಿದ ಯುಪಿ ಮಹಿಳೆಯರ ತಂಡವು 20 ಓವರ್‌ಗಳಲ್ಲಿ 7 ವಿಕೆಟ್‌ ಕಳೆದುಕೊಂಡು 155 ರನ್‌ ಗಳಿಸಲಷ್ಟೇ ಶಕ್ತವಾಯಿತು. ಇದರಿಂದಾಗಿ ಆರ್‌ಸಿಬಿ 2 ರನ್‌ಗಳ ರೋಚಕ ಜಯ ಗಳಿಸಿತು. ಸುಬ್ಬಿನೇನಿ ಮೇಘನಾ (53) ಹಾಗೂ ರಿಚಾ ಘೋಷ್‌ (62) ಅದ್ಭುತ ಬ್ಯಾಟಿಂಗ್ ಹಾಗೂ ಸೊಭಾನ ಆಶಾ ಅವರ (22/5) ಅವರ ಮಾರಕ ಬೌಲಿಂಗ್‌ ದಾಳಿಗೆ ಸಿಲುಕಿದ ಯುಪಿ ಸೋಲೊಪ್ಪಿಕೊಂಡಿತು.

ಪಂದ್ಯಕ್ಕೆ ತಿರುವು ಕೊಟ್ಟ ಸೊಭಾನ ಆಶಾ

ಒಂದು ಹಂತದಲ್ಲಿ ಉತ್ತರ ಪ್ರದೇಶ ವಾರಿಯರ್ಸ್‌ ತಂಡವು 16 ಓವರ್‌ಗಳಲ್ಲಿ ಕೇವಲ 3 ವಿಕೆಟ್‌ ಕಳೆದುಕೊಂಡು 126 ರನ್‌ ಗಳಿಸಿ ಗೆಲುವಿನ ಸನಿಹದಲ್ಲಿತ್ತು. ಆದರೆ, ಸೊಭಾನ ಆಶಾ 17ನೇ ಓವರ್‌ನಲ್ಲಿ ಮೂರು ವಿಕೆಟ್‌ ಪಡೆಯುವ ಮೂಲಕ ಯುಪಿಡಬ್ಲ್ಯು ತಂಡದ ಜಯವನ್ನು ಕಸಿದರು. ಇದು ಪಂದ್ಯದ ಟರ್ನಿಂಗ್‌ ಪಾಯಿಂಟ್‌ ಆಯಿತು.

ಟಾಸ್‌ ಸೋತು ಬ್ಯಾಟಿಂಗ್‌ಗೆ ಇಳಿದ ಆರ್‌ಸಿಬಿ ತಂಡಕ್ಕೆ ಆರಂಭಿಕ ಆಘಾತ ಎದುರಾಯಿತು. ಸೋಫಿ ಡಿವೈನ್‌ (1), ನಾಯಕಿ ಸ್ಮೃತಿ ಮಂಧಾನ (13) ಹಾಗೂ ಎಲಿಸ್ ಪೆರ‍್ರಿ (8) ಅವರು ಬೇಗನೆ ವಿಕೆಟ್‌ ಕಳೆದುಕೊಂಡ ಕಾರಣ ಒಂದು ಹಂತದಲ್ಲಿ ಆರ್‌ಸಿಬಿಯು 54 ರನ್‌ಗಳಿಗೆ ಮೂರು ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಆದರೆ, ಸುಬ್ಬಿನೇನಿ ಮೇಘನಾ (53) ಹಾಗೂ ರಿಚಾ ಘೋಷ್‌ (62) ಅವರು ಅಬ್ಬರದ ಬ್ಯಾಟಿಂಗ್‌ ಮಾಡಿದ ಕಾರಣ ಆರ್‌ಸಿಬಿಯು 20 ಓವರ್‌ಗಳಲ್ಲಿ 6 ವಿಕೆಟ್‌ ಕಳೆದುಕೊಂಡು 157 ರನ್‌ ಗಳಿಸಲು ಶಕ್ತವಾಯಿತು.

ಇದನ್ನೂ ಓದಿ: Janhvi Kapoor : ನಟಿ ಜಾಹ್ನವಿ ಕಪೂರ್​ಗೆ ಆರ್​​ಸಿಬಿಯ ಇಬ್ಬರು ಆಟಗಾರರು ಇಷ್ಟ

ಅಭಿಮಾನಿಗಳಿಂದ ತುಂಬಿದ್ದ ಚಿನ್ನಸ್ವಾಮಿ ಸ್ಟೇಡಿಯಂ

ಸಾಮಾನ್ಯವಾಗಿ, ಆರ್‌ಸಿಬಿ ಪುರುಷರ ತಂಡದ ಪಂದ್ಯಗಳಿದ್ದಾಗ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂ ತುಂಬಿ ತುಳುಕುತ್ತದೆ. ಆದರೆ, ಆರ್‌ಸಿಬಿ ಮಹಿಳೆಯರ ತಂಡದ ಪಂದ್ಯದ ವೇಳೆಯೂ ಸ್ಟೇಡಿಯಂ ತುಂಬಿತ್ತು. ಎಲ್ಲೆಡೆ ಅಭಿಮಾನಿಗಳು ಆರ್‌ಸಿಬಿ, ಆರ್‌ಸಿಬಿ ಎಂದು ಘೋಷಣೆ ಕೂಗಿದರು. ಆ ಮೂಲಕ ಆರ್‌ಸಿಬಿ ಮಹಿಳೆಯರ ತಂಡಕ್ಕೂ ಅಭಿಮಾನಿಗಳು ಹುರಿದುಂಬಿಸಿದರು.

ಸಂಕ್ಷಿಪ್ತ ಸ್ಕೋರ್

ಆರ್‌ಸಿಬಿ 20 ಓವರ್‌ಗಳಲ್ಲಿ 157/6
ರಿಚಾ ಘೋಷ್‌ 62, ಸುಬ್ಬಿನೇನಿ ಮೇಘನಾ 53, ರಾಜೇಶ್ವರಿ ಗಾಯಕ್ವಾಡ್‌ 24ಕ್ಕೆ 2

ಯುಪಿಡಬ್ಲ್ಯು 20 ಓವರ್‌ಗಳಲ್ಲಿ 155/7
ಗ್ರೇಸ್‌ ಹ್ಯಾರಿಸ್‌ 38, ಶ್ವೇತಾ ಸೆಹ್ರಾವತ್‌ 31, ಸೊಭಾನ ಆಶಾ 22ಕ್ಕೆ 5

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version