ಬೆಂಗಳೂರು: ಈಗಾಗಲೇ ಮಹಿಳಾ WPL ಕ್ರಿಕೆಟ್ ಟೂರ್ನಿ (WPL 2024) ಆರಂಭವಾಗಿ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಒಂದು ಕಡೆ ಹೆಚ್ಚೆಚ್ಚು ಜನರು ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಮ್ಯಾಚ್ ವೀಕ್ಷಿಸಲು ಬರುತ್ತಿದ್ದರೆ, ಮತ್ತೊಂದೆಡೆ ಕೆಲ ಕ್ರಿಕೆಟ್ ಬುಕ್ಕಿಗಳು ಆನ್‌ಲೈನ್‌ನಲ್ಲಿ ಬೆಟ್ಟಿಂಗ್ ಕಟ್ಟಿ ಹಣ ಮಾಡುತ್ತಿದ್ದಾರೆ. ಈ ಮಧ್ಯೆ ಖತರ್ನಾಕ್ ಗ್ಯಾಂಗ್‌ವೊಂದು ಬುಕ್ಕಿಯೊಬ್ಬನಿಗೆ ಬೆಟ್ಟಿಂಗ್‌ನಿಂದ ಹಣ ಬಂದಿದೆ ಎಂದು ತಿಳಿದು ಕಿಡ್ನಾಪ್‌ಗೆ ಯತ್ನಿಸಿ, ಪೊಲೀಸರಿಗೆ (kidnapping Case) ಸಿಕ್ಕಿ ಬಿದ್ದ ಘಟನೆ ನಡೆದಿದೆ.
ಸಂತೋಷ್ ಎಂಬ ಕ್ರಿಕೆಟ್ ಬುಕ್ಕಿ ಇತ್ತೀಚೆಗೆ ಮಹಿಳಾ ಕ್ರಿಕೆಟ್ ಐಪಿಎಲ್‌ನಲ್ಲಿ ಬೆಟ್ಟಿಂಗ್ ಆಡಿದ್ದ. ಬೆಟ್ಟಿಂಗ್‌ನಿಂದ ಸ್ವಲ್ಪ ಹಣವನ್ನು ಸಂತೋಷ್ ಗಳಿಸಿದ್ದ. ಈ ಬಗ್ಗೆ ರೌಡಿಶೀಟರ್ ಸಾಗರ್ ಎಂಬಾತನಿಗೆ ಮಾಹಿತಿ ಸಿಕ್ಕಿತ್ತು. ಈ ನಡುವೆ ಇಟ್ಟುಮಡು ಸಾಗರ್ ತನ್ನ ಗ್ಯಾಂಗ್ ಜತೆ ಸೇರಿ ಸಂತೋಷ್ ಕಿಡ್ನ್ಯಾಪ್ ಮಾಡಲು ಪ್ಲ್ಯಾನ್ ಮಾಡಿದ್ದ.
ಇದನ್ನೂ ಓದಿ: 300 ಯೂನಿಟ್ ವಿದ್ಯುತ್ ಉಚಿತ ನೀಡುವ ಮೋದಿಯ ಯೋಜನೆ ಏನು? ಯಾರಿಗೆಲ್ಲ ಇದರಿಂದ ಲಾಭ?
ಅದರಂತೆ ಸಾಗರ್ ಬೇರೆ ಸ್ನೇಹಿತರ ಮುಖಾಂತರ ಸಂತೋಷನನ್ನು ಹನುಮಂತನಗರಕ್ಕೆ ಕರೆಸಿಕೊಂಡಿದ್ದ. ಹನುಮಂತ ನಗರಕ್ಕೆ ಸಂತೋಷ್ ಬರುತ್ತಿದ್ದಂತೆ ಟೀ ಕುಡಿಯೋಣ ಬಾ ಎಂದು ಕಾರಿನಲ್ಲಿ ಕೂರಿಸಿಕೊಂಡು ಕನಕಪುರ ಕಡೆ ಹೊರಟ್ಟಿದ್ದರು. ಆಗ ಎಂಟ್ರಿ ಕೊಟ್ಟ ಇಟ್ಟುಮಡು ರೌಡಿಶೀಟರ್ ಸಾಗರ್, ಪ್ರತಿ ತಿಂಗಳು ಇನ್ನು ಮೇಲೆ ಬೆಟ್ಟಿಂಗ್‌ನಿಂದ ಬರುವ ಹಣದಲ್ಲಿ ಹಫ್ತ ನೀಡಬೇಕು ಎಂದು ಸಂತೋಷ್‌ಗೆ ಅವಾಜ್ ಹಾಕಿದ್ದ.
ಇತ್ತ ಸಂತೋಷ್‌ನನ್ನು ಕಾರಿನಲ್ಲಿ ಕಿಡ್ನ್ಯಾಪ್ ಮಾಡಿರುವ ಬಗ್ಗೆ ಸಿಸಿಬಿ ಅಧಿಕಾರಿಗಳಿಗೆ ಖಚಿತ ಮಾಹಿತಿ ರವಾನೆಯಾಗಿತ್ತು. ಹೀಗಾಗಿ ಗಿರಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು, ಕೂಡಲೇ ಸಿಸಿಬಿ ಪೊಲೀಸರು ಆರೋಪಿಗಳು ಇರುವ ಸ್ಥಳದ ಬಗ್ಗೆ ಮಾಹಿತಿ ಪಡೆದು ದಾಳಿ ನಡೆಸಿದರು. ಈ ವೇಳೆ ರೌಡಿ ಶೀಟರ್ ಸಾಗರ್, ಪ್ರೇಮ್ ಕುಮಾರ್, ರವಿತೇಜ, ಭೂಷಣ್ ಎಂಬುವವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳು ಬೇರೆಯಾರಿಗಾದರೂ ಇದೇ ರೀತಿ ಹಫ್ತ ನೀಡುವಂತೆ ಬೆದರಿಕೆ ಹಾಕಿದ್ದಾರಾ ಎಂಬುದರ ಬಗ್ಗೆ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ