Site icon Vistara News

K L Rahul: ಕ್ರಿಕೆಟರ್​ ಕೆ.ಎಲ್​.ರಾಹುಲ್ ತೊಡೆ ಭಾಗಕ್ಕೆ ಸರ್ಜರಿ ಮುಕ್ತಾಯ; ಆದಷ್ಟು ಬೇಗ ಆಟಕ್ಕೆ ಮರಳುವ ಆಶಯ

Cricketer KL Rahul underwent thigh surgery

#image_title

ಭಾರತೀಯ ಕ್ರಿಕೆಟ್​ ತಂಡದ ಬ್ಯಾಟರ್​, ವಿಕೆಟ್​ ಕೀಪರ್​ ಕೆ.ಎಲ್​.ರಾಹುಲ್ (cricketer K L Rahul) ಅವರು ತೊಡೆ ಸರ್ಜರಿಗೆ ಒಳಗಾಗಿದ್ದಾರೆ (Cricketer K L Rahul Thigh Surgery) ಮಂಗಳವಾರ ಶಸ್ತ್ರಚಿಕಿತ್ಸೆ ಮಾಡಲಾಗಿದ್ದು, ಆರೋಗ್ಯ ಸ್ಥಿರವಾಗಿದೆ ಎಂದು ಹೇಳಲಾಗಿದೆ. ಈ ಬಗ್ಗೆ ಕೆ.ಎಲ್.ರಾಹುಲ್ ಅವರು ಇನ್​ಸ್ಟಾಗ್ರಾಂ ಪೋಸ್ಟ್ ಹಾಕಿದ್ದು ‘ನಾನು ಸರ್ಜರಿಗೆ ಒಳಗಾಗಿದ್ದೇನೆ. ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ, ಏನೂ ತೊಂದರೆಯಾಗದಂತೆ, ಆರಾಮದಾಯಕವಾಗಿ ಮಾಡಿಕೊಟ್ಟ ವೈದ್ಯರಿಗೆ, ವೈದ್ಯಕೀಯ ಸಿಬ್ಬಂದಿಗೆ ನನ್ನ ಕೃತಜ್ಞತೆಗಳು. ನಾನು ನಿಧಾನಕ್ಕೆ ಚೇತರಿಸಿಕೊಳ್ಳುವ ಹಾದಿಯಲ್ಲಿ ಇದ್ದೇನೆ. ಶೀಘ್ರವೇ ಗುಣಮುಖನಾಗಿ, ಮತ್ತೆ ಕ್ರಿಕೆಟ್​ ಮೈದಾನಕ್ಕೆ ಮರಳಲು ಉತ್ಸುಕನಾಗಿದ್ದೇನೆ. ಮುಂದೆ ಸಾಗುತ್ತಿದ್ದೇನೆ !’ ಎಂದು ಬರೆದುಕೊಂಡಿದ್ದಾರೆ.

ಐಪಿಎಲ್​​ನಲ್ಲಿ ಲಖನೌ ಸೂಪರ್ ಜೇಂಟ್ಸ್​ ತಂಡದ ನಾಯಕನಾಗಿರುವ ಕನ್ನಡಿಗ ಕೆ.ಎಲ್.ರಾಹುಲ್ ಮೇ 1ರಂದು ಗಾಯಗೊಂಡಿದ್ದರು. ಅಂದು ಆರ್​ಸಿಬಿ ವಿರುದ್ಧ ಪಂದ್ಯದಲ್ಲಿ ಆಡುವಾಗ ಫೀಲ್ಡಿಂಗ್ ಮಾಡುವಾಗ ಅವರಿಗೆ ಬಲ ತೊಡೆ ಭಾಗದಲ್ಲಿ ವಿಪರೀತ ನೋವು ಕಾಣಿಸಿಕೊಂಡಿತ್ತು. ಆಗ ಕೆ.ಎಲ್.ರಾಹುಲ್ ಮೈದಾನದಲ್ಲಿ ಕುಸಿದುಬಿದ್ದಿದ್ದರು. ತಕ್ಷಣ ಎದ್ದೇಳಲಾಗದೆ ನೋವಿನಲ್ಲಿ ನರಳಾಡಿದ್ದರು. ನಾಲ್ಕೈದು ದಿನಗಳ ಹಿಂದೆ ಇನ್​ಸ್ಟಾಗ್ರಾಂನಲ್ಲಿ ಪೋಸ್ಟ್ ಹಾಕಿದ್ದ ಅವರು ‘ನನಗೆ ಸರ್ಜರಿ ಅನಿವಾರ್ಯ ಎಂದು ವೈದ್ಯಕೀಯ ತಂಡ ಹೇಳಿದೆ. ಹೀಗಾಗಿ ಐಪಿಎಲ್​ನಲ್ಲಿ ಮುಂದುವರಿಯಲು ಸಾಧ್ಯವಾಗುತ್ತಿಲ್ಲ. ಅಷ್ಟೇ ಅಲ್ಲ, ಜೂನ್ 7ರಿಂದ ಇಂಗ್ಲೆಂಡ್​ನ ಕೆನಿಂಗ್ಟನ್​ ಓವಲ್​ನಲ್ಲಿ ನಡೆಯಲಿರುವ ಆಸ್ಟ್ರೇಲಿಯಾ ವಿರುದ್ಧದ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಪಂದ್ಯದಿಂದಲೂ ಹೊರಗುಳಿಯುತ್ತೇನೆ’ ಎಂದು ತಿಳಿಸಿದ್ದರು.

ಇದನ್ನೂ ಓದಿ: Team India : ವಿಶ್ವ ಟೆಸ್ಟ್​ ಚಾಂಪಿಯನ್​ಷಿಪ್​ಗೆ ಕೆ .ಎಲ್​ ರಾಹುಲ್​ ಔಟ್​, ಸರ್ಜರಿ ಅನಿವಾರ್ಯ

ಜಸ್ಪ್ರೀತ್ ಬುಮ್ರಾ, ರಿಷಭ್ ಪಂತ್ ಮತ್ತು ಶ್ರೇಯಸ್ ಅಯ್ಯರ್ ಗಾಯದ ಸಮಸ್ಯೆಯಿಂದಾಗಿ ಈಗಾಗಲೇ ಭಾರತ ತಂಡದಿಂದ ಹೊರಕ್ಕೆ ಉಳಿದಿದ್ದಾರೆ. ಇದೇ ವೇಳೆ ರಾಹುಲ್​ ಕೂಡ ಗಾಯಕ್ಕೆ ಒಳಗಾಗಿದ್ದಾರೆ. ರಾಹುಲ್ ಅವರ ಅನುಪಸ್ಥಿತಿಯಿಂದ ಭಾರತ ತಂಡದ ಬ್ಯಾಟಿಂಗ್​ ಮಧ್ಯಮ ಕ್ರಮಾಂಕ ಮತ್ತೆ ದುರ್ಬಲಗೊಂಡಿದೆ. ಅತ್ತ ನಾಯಕ ಇಲ್ಲದೆ ಲಖನೌ ಸೂಪರ್​ ಜೈಂಟ್ಸ್​ ತಂಡಕ್ಕೂ ಸಮಸ್ಯೆಯಾಗಿದೆ.

Exit mobile version