ನವ ದೆಹಲಿ: ಟೀಮ್ ಇಂಡಿಯಾದ ಯುವ ಕ್ರಿಕೆಟರ್, ವಿಕೆಟ್ ಕೀಪರ್ ರಿಷಭ್ ಪಂತ್ ಭೀಕರ ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದಾರೆ. ಅವರು ಶುಕ್ರವಾರ ಬೆಳಗ್ಗೆ ದೆಹಲಿಯಿಂದ ಉತ್ತರಾಖಂಡ್ಗೆ ತೆರಳುತ್ತಿದ್ದರು. ಹಮ್ಮದ್‌ಪುರ ಝಾಲ್ ಬಳಿ ರೂರ್ಕಿಯ ನರ್ಸನ್ ಗಡಿಯಲ್ಲಿರುವ ದೆಹಲಿ-ಡೆಹ್ರಾಡೂನ್ ಹೆದ್ದಾರಿಯ ಕಾರು ಡಿವೈಡರ್ಗೆ ಡಿಕ್ಕಿ ಹೊಡೆದು ಅಪಘಾತ ನಡೆದಿದೆ. ಸದ್ಯ ರಿಷಭ್ ಪಂತ್ರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಮಂಜು ಕವಿದಿದ್ದ ಪರಿಣಾಮ ಸರಿಯಾಗಿ ರಸ್ತೆ ಕಾಣದಿರುವುದೇ ಈ ಅವಘಡಕ್ಕೆ ಕಾರಣ ಎನ್ನಲಾಗಿದೆ.
ವೈದ್ಯರ ಪ್ರಕಾರ, ರಿಷಬ್ ಪಂತ್ ಅವರ ಹಣೆ ಮತ್ತು ಕಾಲಿಗೆ ಗಾಯಗಳಾಗಿವೆ. ಸದ್ಯ ರಿಷಬ್ ಪಂತ್ ಅವರ ಸ್ಥಿತಿ ಸ್ಥಿರವಾಗಿದ್ದು, ಅವರನ್ನು ರೂರ್ಕಿಯಿಂದ ದೆಹಲಿಗೆ ಕಳುಹಿಸಲಾಗುತ್ತಿದೆ ಎಂದು ಸಕ್ಷಮ್ ಆಸ್ಪತ್ರೆಯ ಅಧ್ಯಕ್ಷ ಡಾ. ಸುಶೀಲ್ ನಗರ್ ತಿಳಿಸಿದ್ದಾರೆ. ಹಾಗೇ, ರಿಷಬ್ ದಾಖಲಾಗಿದ್ದ ಸಕ್ಷಮ್ ಆಸ್ಪತ್ರೆಗೆ ದೇಹತ್ ಪೊಲೀಸ್ ಅಧಿಕಾರಿ ಸ್ವಪ್ನಾ ಕಿಶೋರ್ ಭೇಟಿ ನೀಡಿ ವಿಚಾರಣೆ ನಡೆಸಿದ್ದಾರೆ.
ಅಪಘಾತ ಸಂಭವಿಸಿದ ಸಂದರ್ಭದಲ್ಲಿ ರಿಷಭ್ ಪಂತ್ ಅವರು ಒಬ್ಬರೇ ಕಾರಿನಲ್ಲಿದ್ದರು ಎಂದು ಉತ್ತರಾಖಂಡ ಪೊಲೀಸ್ ಮಹಾ ನಿರ್ದೇಶಕ ಅಶೋಕ್ ಕುಮಾರ್ ತಿಳಿಸಿದ್ದಾರೆ. ಕಾರು ರೇಲಿಂಗ್‌ಗೆ ಡಿಕ್ಕಿ ಹೊಡೆದ ಪರಿಣಾಮ ಬೆಂಕಿ ಹೊತ್ತಿಕೊಂಡಿದೆ. ಇದೇ ವೇಳೆ ಪಂತ್ ಕಾರಿನ ಗಾಜನ್ನು ಒಡೆದು ಹೊರಗಡೆ ಬಂದಿದ್ದಾರೆ. ಅಪಘಾತದಲ್ಲಿ ಪಂತ್ ಅವರ ತಲೆ, ಮೊಣಕಾಲು ಹಾಗೂ ಬೆನ್ನಿಗೆ ಗಾಯಗಳಾಗಿದ್ದು, ಡೆಹ್ರಾಡೂನ್‌ನ ಮ್ಯಾಕ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ಮಾಹಿತಿ ನೀಡಿದ್ದಾರೆ.
ಗಂಭೀರ ಗಾಯಗೊಂಡ ಪಂತ್ಗೆ ಪ್ಲಾಸ್ಟಿಕ್ ಸರ್ಜರಿ ಮಾಡಲಾಗುವುದು ಎಂದು ಆಸ್ಪತ್ರೆಯ ಮೂಲಗಳು ಮಾಹಿತಿ ನೀಡಿದೆ. ಗಾಯಗೊಂಡ ಪಂತ್ ಅವರು ಶೀಘ್ರ ಗುಣಮುಖರಾಗಲಿ ಎಂದು ಬಿಸಿಸಿಐ, ಹಾಲಿ ಮತ್ತು ಮಾಜಿ ಕ್ರಿಕೆಟ್ ಆಟಗಾರರು ಸೇರಿದಂತೆ ಹಲವರು ಹಾರೈಸಿದ್ದಾರೆ
ಇದನ್ನೂ ಓದಿ: INDvsBAN | ಕೊಹ್ಲಿ ಮರ್ಯಾದೆ ಕಾಪಾಡಿದ ಪಂತ್; ಕೈ ಮುಗಿದು ಅಭಿನಂದಿಸಿದ ನಾಯಕ