ದುಬೈ: ಪೋರ್ಚುಗಲ್‌ನ ಸೂಪರ್ ಸ್ಟಾರ್ ಕ್ರಿಸ್ಟಿಯಾನೊ ರೊನಾಲ್ಡೊ(Cristiano Ronaldo) ಅವರು ತಾನು ಪ್ರತಿನಿಧಿಸುವ ಅಲ್ ನಾಸ್ಸರ್(Al Nassr) ತಂಡ ಕಿಂಗ್ಸ್ ಕಪ್ ಫೈನಲ್‌ನಲ್ಲಿ(King’s Cup final) ಸೋಲು ಕಂಡ ಬೇಸರದಲ್ಲಿ ಮೈದಾನದಲ್ಲೇ ಬಿಕ್ಕಿ ಬಿಕ್ಕಿ ಅತ್ತ ಪ್ರಸಂಗ ನಡೆದಿದೆ. ರೊನಾಲ್ಡೊ ಕಣ್ಣೀರು ಸುರಿಸುತ್ತಿರುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್(viral video) ಆಗಿದೆ.
ಮೇ 31, ಶುಕ್ರವಾರ ತಡರಾತ್ರಿ ನಡೆದಿದ್ದ ಕಿಂಗ್ಸ್ ಕಪ್ ಫೈನಲ್‌ನಲ್ಲಿ ಅಲ್ ನಾಸ್ಸರ್ ಮತ್ತು ಅಲ್ ಹಿಲಾಲ್(Al Hilal) ತಂಡಗಳು ಮುಖಾಮುಖಿಯಾಗಿದ್ದವು. ಅತ್ಯಂತ ಜಿದ್ದಾಜಿದ್ದಿನಿಂದ ಸಾಗಿದ ಈ ಪಂದ್ಯ 1-1 ಗೋಲುಗಳಿಂದ ಮುಕ್ತಾಯಕಂಡಿತು. ಹೆಚ್ಚುವರಿ ಸಮಯದ ಆಟದಲ್ಲಿಯೂ ಉಭಯ ತಂಡಗಳಿಂದ ಗೋಲು ಗಳಿಸಲು ಸಾಧ್ಯವಾಗದ ಕಾರಣ ಅಂತಿಮವಾಗಿ ವಿಜೇತರನ್ನು ನಿರ್ಧರಿಸಲು ಪೆನಾಲ್ಟಿ ಶೂಟೌಟ್ ಮೊರೆ ಹೋಗಲಾಯಿತು. ಶೂಟೌಟ್ನಲ್ಲಿ ಅಲ್ ಹಿಲಾಲ್ ತಂಡ 5-4 ಗೋಲುಗಳ ಅಂತರದಿಂದ ಗೆದ್ದು ಚಾಂಪಿಯನ್ ಪಟ್ಟ ಅಲಂಕರಿಸಿತು.
ತಂಡ ಸೋಲುತ್ತಿದ್ದಂತೆ ಕ್ರಿಸ್ಟಿಯಾನೊ ರೊನಾಲ್ಡೊ ಮೈದಾನದಲ್ಲೇ ಬಿದ್ದು ಅಳತೊಡಗಿದರು. ರೊನಾಲ್ಡೊ ಅವರು ಟರ್ಫ್‌ನ ಮೇಲೆ ಮಲಗಿ ಅಳುತ್ತಿದ್ದ ವೇಳೆ ಸಹ ಆಟಗಾರರು ಮತ್ತು ತಂಡದ ಮಾಲಿಕ ಕೂಡ ಆಗಮಿಸಿ ರೊನಾಲ್ಡೊರನ್ನು ಸಂತೈಸಿದ್ದಾರೆ. ರನ್ನರ್ಸ್-ಅಪ್ ಪದಕ ನೀಡುವ ವೇಳೆಯೂ ರೊನಾಲ್ಡೊ ಕಣ್ಣೀರು ಸುರಿಸುತ್ತಲೇ ಇದ್ದರು. ಈ ದೃಶ್ಯ ಕಂಡು ಅವರ ಅಭಿಮಾನಿಗಳ ಕಣ್ಣಲ್ಲಿಯೂ ನೀರು ಬರುವಂತೆ ಮಾಡಿತು.
ಇದನ್ನೂ ಓದಿ Cristiano Ronaldo: ಅಶ್ಲೀಲ ವರ್ತನೆ ತೋರಿದ ರೊನಾಲ್ಡೊಗೆ ಅಮಾನತು ಶಿಕ್ಷೆ ವಿಧಿಸಿದ ಸೌದಿ ಫುಟ್ಬಾಲ್ ಫೆಡರೇಷನ್
ಬರೋಬ್ಬರಿ 1,700 ಕೋಟಿ ರೂ. (200 ಮಿಲಿಯನ್ ಯೂರೋಸ್) ಪಡೆದು ಕ್ರಿಸ್ಟಿಯಾನೊ ರೊನಾಲ್ಡೊ 2 ವರ್ಷಗಳ ಒಪ್ಪಂದ ಪ್ರಕಾರ ಅಲ್ ನಾಸ್ಸರ್ ತಂಡಕ್ಕೆ ಸೇರಿದ್ದರು. ತಂಡದ ಪರ ಇದುವರೆಗೆ ಒಟ್ಟು 35 ಗೋಲು ಬಾರಿಸಿದ್ದಾರೆ. ಆದರೆ ತಂಡವನ್ನು ಚಾಂಪಿಯನ್ ಪಟ್ಟ ಅಲಂಕರಿಸುವಲ್ಲಿ ವಿಫಲರಾಗಿದ್ದಾರೆ.
67 ವರ್ಷಗಳ ಇತಿಹಾಸ ಹೊಂದಿರುವ ಅಲ್ ನಾಸ್ಸರ್ ಸೌದಿ ಅರೇಬಿಯದ ಅತ್ಯಂತ ಶ್ರೀಮಂತ ಫುಟ್‌ಬಾಲ್ ಕ್ಲಬ್. 9 ಸಲ ಚಾಂಪಿಯನ್ಸ್ ಲೀಗ್ ಪ್ರಶಸ್ತಿ ಜಯಿಸಿದೆ. 6 ಸಲ ಕಿಂಗ್ಸ್ ಕಪ್ 3 ಸಲ ಕ್ರೌನ್ ಪ್ರಿನ್ಸೆಸ್ ಕಪ್, 3 ಸಲ ಫೆಡರೇಶನ್ ಕಪ್,2 ಸಲ ಸೌದಿ ಸೂಪರ್ ಕಪ್, ಚಾಂಪಿಯನ್ ಆಗಿ ಮೂಡಿಬಂದ ಹೆಗ್ಗಳಿಕೆ ಈ ಕ್ಲಬ್‌ನದ್ದು.