ದೋಹಾ : ಕ್ರೊಯೇಷ್ಯಾ ಗೋಲ್‌ಕೀಪರ್ ಡಾಮಿನಿಕ್ ಲಿವಾಕೊವಿಕ್ ಪೆನಾಲ್ಟಿ ಶೂಟೌಟ್ ವೇಳೆ ಮೂರು ಗೋಲ್‌ಗಳನ್ನು ತಡೆಯುವ ಮೂಲಕ ತನ್ನ ತಂಡಕ್ಕೆ ಗೆಲುವು ತಂದುಕೊಟ್ಟರು. ಅವರ ಅದ್ಭುತ ಸಾಹಸದ ನೆರವಿನಿಂದ ಮಿಂಚಿದ ಕ್ರೊಯೇಷ್ಯಾ ಬಳಗ ಜಪಾನ್ ತಂಡವನ್ನು ಪೆನಾಲ್ಟಿ ಶೂಟ್‌ಔಟ್‌ನಲ್ಲಿ ೩-೧ ಗೋಲ್‌ಗಳಿಂದ ಸೋಲಿಸಿ ಕ್ವಾರ್ಟರ್ ಫೈನಲ್ಸ್ ಹಂತಕ್ಕೆ ಪ್ರವೇಶ ಪಡೆಯಿತು. ಅಲ್ ಜನೌಬ್ ಸ್ಟೇಡಿಯಮ್‌ನಲ್ಲಿ ನಡೆದ ೧೬ರ ಘಟ್ಟದ ಹಣಾಹಣಿಯ ಪೂರ್ಣ ಅವಧಿಯಲ್ಲಿ ಇತ್ತಂಡಗಳು ೧-೧ ಗೋಲ್‌ಗಳ ಸಮಬಲ ಸಾಧಿಸಿದ ಹಿನ್ನೆಲೆಯಲ್ಲಿ ಪೆನಾಲ್ಟಿ ಮೊರೆ ಹೋಗಲಾಯಿತು.
ಕ್ರೊಯೇಷ್ಯಾ ತಂಡದ ಪರ ಪೆನಾಲ್ಟಿಯಲ್ಲಿ ಮಾರಿಯೊ ಪಾಸಾಲಿಕ್, ನಿಕೋಲಾ ವ್ಲಾಸಿಕ್ ಹಾಗೂ ಮಾರ್ಸೆಲೊ ಬ್ರೊಸೊವಿಕ್ ಗೋಲ್‌ಗಳನ್ನು ಬಾರಿಸಿದರು. ಜಪಾನ್‌ನ ಟಕುಮಿ ಮಿನಮಿನೊ, ಕೊರೊ ಮಿಟೊಮಾ ಹಾಗೂ ಮಾಯಾ ಯೊಶಿದಾ ಬಾರಿಸಿದ ಗೋಲನ್ನು ಕ್ರೊಯೇಷ್ಯಾ ಗೋಲ್‌ಕೀಪರ್ ಡಾಮಿನಿಕ್ ತಡೆದರು.
ಪೂರ್ಣ ಅವಧಿಯಲ್ಲಿ ಪಂದ್ಯದಲ್ಲಿ ಜಪಾನ್‌ನ ಡಾಯಿಜೆನ್ ಮಯೆಡಾ (೪೩ನೇ ನಿಮಿಷ) ಗೋಲ್ ಬಾರಿಸಿದರೆ, ಎದುರಾಳಿ ಕ್ರೊಯೇಷ್ಯಾ ತಂಡದ ಪರ ಇವಾನ್ ಪೆರಿಸಿಕ್ (೫೫ನೇ ನಿಮಿಷ) ಗೋಲ್ ಬಾರಿಸಿದರು. ಕ್ರೊಯೇಷ್ಯಾ ತಂಡ ೮ರ ಘಟ್ಟದಲ್ಲಿ ಬ್ರೆಜಿಲ್ ಮತ್ತು ದಕ್ಷಿಣ ಕೊರಿಯಾ ನಡುವಿನ ಪಂದ್ಯದ ವಿಜೇತರಿಗೆ ಎದುರಾಗಲಿದೆ.
ಇದನ್ನೂ ಓದಿ | Deepika Padukone | ಫುಟ್ಬಾಲ್ ವಿಶ್ವ ಕಪ್ ಅನಾವರಣ ಮಾಡಲಿದ್ದಾರೆ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ