ದೋಹಾ : ವಿಶ್ವದ ನಂಬರ್ ಒನ್ ಫುಟ್ಬಾಲ್ ತಂಡ ಬ್ರೆಜಿಲ್‌ಗೆ ಅಚ್ಚರಿಯ ರೀತಿಯಲ್ಲಿ ಆಘಾತ ಕೊಟ್ಟ ಕ್ರೊಯೇಷ್ಯಾ ತಂಡ ಫಿಫಾ ವಿಶ್ವ ಕಪ್‌ನ (FIFA World Cup) ಸೆಮಿಫೈನಲ್ಸ್‌ಗೆ ಪ್ರವೇಶ ಪಡೆದುಕೊಂಡಿದೆ. ಇದರೊಂದಿಗೆ ಪ್ರಶಸ್ತಿ ಫೇವರಿಟ್ ಎನಿಸಿಕೊಂಡಿದ್ದ ಬ್ರೆಜಿಲ್ ತಂಡದ ವಿಶ್ವ ಕಪ್ ಅಭಿಯಾನ ಕೊನೆಗೊಂಡಿದೆ. ಸೋಲಿನ ನಿರಾಸೆಯಲ್ಲಿ ಬ್ರೆಜಿಲ್ ಬಳಗದ ಸ್ಟಾರ್ ಆಟಗಾರ ನೇಮರ್ ಸೇರಿದಂತೆ ಎಲ್ಲರೂ ಮೈದಾನಲ್ಲೇ ಕಣ್ಣೀರು ಹಾಕಿದರು.
ಇಲ್ಲಿನ ಎಜುಕೇಶನ್ ಸಿಟಿ ಸ್ಟೇಡಿಯಮ್‌ನಲ್ಲಿ ಶುಕ್ರವಾರ ನಡೆದ ಕ್ವಾರ್ಟರ್‌ಫೈನಲ್ ಹಣಾಹಣಿಯಲ್ಲಿ ವಿಶ್ವದ ೧೨ನೇ ಶ್ರೇಯಾಂಕದ ಕ್ರೊಯೇಷ್ಯಾ ತಂಡ ಪೆನಾಲ್ಟಿ ೪-೨ ಗೋಲ್‌ಗಳ ಅಂತರದೊಂದಿಗೆ ವಿಜಯ ಸಾಧಿಸಿತು. ಅದಕ್ಕಿಂತ ಮೊದಲು ನಡೆದ ಪಂದ್ಯದಲ್ಲಿ ಇತ್ತಂಡಗಳೂ ೧-೧ ಗೋಲ್‌ಗಳ ಸಮಬಲ ಸಾಧಿಸಿದ್ದವು.
೯೦ ನಿಮಿಷಗಳ ಪೂರ್ಣ ಅವಧಿಯ ಪಂದ್ಯದಲ್ಲಿ ಇತ್ತಂಡಗಳು ಗೋಲ್ ಬಾರಿಸದ ಕಾರಣ ಹೆಚ್ಚುವರಿ ೩೦ ನಿಮಿಷಗಳ ಆಟವನ್ನು ಆಡಿಸಲಾಯಿತು. ಈ ಅವಧಿಯಲ್ಲಿ ನೇಮರ್ ೧೦೫+೧ ನಿಮಿಷದಲ್ಲಿ ಗೋಲ್ ಬಾರಿಸುವ ಮೂಲಕ ಬ್ರೆಜಿಲ್ ತಂಡಕ್ಕೆ ಮುನ್ನಡೆ ತಂದು ಕೊಟ್ಟರು. ಹೀಗಾಗಿ ಬ್ರೆಜಿಲ್ ಗೆಲ್ಲುತ್ತದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ, ಇನ್ನೇನು ೩ ನಿಮಿಷಗಳಲ್ಲಿ ಕೊನೇ ಸೀಟಿ ಬೀಳುತ್ತದೆ ಎನ್ನುವಷ್ಟರಲ್ಲಿ ಕ್ರೊಯೇಷ್ಯಾದ ಬ್ರುನೊ ಪೆಟ್ಕೊವಿಕ್ (೧೧೭ ನೇ ನಿಮಿಷ) ಗೋಲ್ ಬಾರಿಸುವ ಮೂಲಕ ಸಮಬಲದ ಸಾಧನೆ ಆಗುವಂತೆ ಆಗುವಂತೆ ನೋಡಿಕೊಂಡರು.
ಬಳಿಕ ನಡೆದ ಪೆನಾಲ್ಟಿಯಲ್ಲಿ ಬ್ರೆಜಿಲ್ ತಂಡ ಮೊದಲ ಹಾಗೂ ನಾಲ್ಕನೇ ಅವಕಾಶದಲ್ಲಿ ಗೋಲ್ ಬಾರಿಸಲು ವಿಫಲಗೊಂಡಿತು. ಆದರೆ ಕ್ರೊಯೇಷ್ಯಾ ತಂಡ ಮೊದಲ ನಾಲ್ಕರನ್ನೂ ಗೋಲ್ ಬಾರಿಸಿ ಜಯ ಸಾಧಿಸಿತು.
ಇದನ್ನೂ ಓದಿ | Fifa World Cup| ಆಪರೇಷನ್ ಥಿಯೇಟರ್‌ನಲ್ಲೇ ಫಿಫಾ ವಿಶ್ವ ಕಪ್ ಪಂದ್ಯ ವೀಕ್ಷಿಸಿದ ರೋಗಿ!