ಲಖನೌ: ಐಪಿಎಲ್ನಲ್ಲಿ ಇಂಪ್ಯಾಕ್ಟ್ ಪ್ಲೇಯರ್ ನಿಯಮದ (Impact Player Rule) ಅಗತ್ಯವಿದೆಯೇ? ಈ ರೀತಿಯ ಚರ್ಚೆಯೊಂದು ಜೋರಾಗಿ ಹುಟ್ಟಿಕೊಂಡಿದೆ. ಅದಕ್ಕೆ ಹಾಲಿ ಆಟಗಾರರು ಧ್ವನಿಗೂಡಿಸಿದ್ದಾರೆ. ಪಂದ್ಯದ ಯಾವುದೇ ಹಂತದಲ್ಲಿ ಆಟಗಾರನನ್ನು ಬದಲಿ ಆಟಗಾರನನ್ನಾಗಿ ಮಾಡಲು ತಂಡಕ್ಕೆ ಅವಕಾಶ ನೀಡುವ ಹೊಸ ಆವಿಷ್ಕಾರವು ತೀವ್ರವಾಗಿ ಟೀಕೆಗೆ ಒಳಗಾಗಿದೆ. ಮೊದಲು ಅಭಿಮಾನಿಗಳು ಮತ್ತು ತಜ್ಞರು ಈಗಾಗಲೇ ಇದಕ್ಕೆ ವಿರುದ್ಧವಾಗಿದ್ದರು. ಇದೀಗ ಆಟಗಾರರು ಅದನ್ನು ತೀವ್ರವಾಗಿ ವಿರೋಧ ಮಾಡುತ್ತಿದ್ದಾರೆ. ಋತುರಾಜ್ ಗಾಯಕ್ವಾಡ್ ಆ ಬಗ್ಗೆ ಧ್ವನಿ ಎತ್ತಿದ್ದಾರೆ.
ಚೆನ್ನೈ ಸೂಪರ್ ಕಿಂಗ್ಸ್ (Chennai Super Kings) ನಾಯಕ ಋತುರಾಜ್ ಗಾಯಕ್ವಾಡ್ ತಮ್ಮ ತಂಡಕ್ಕೆ ಆರಾಮದಾಯಕ ಸೋಲಿನ ನಂತರ ನಿಯಮದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಲಕ್ನೋ ಸೂಪರ್ ಜೈಂಟ್ ವಿರುದ್ಧ ಕಠಿಣ ಪಿಚ್ನಲ್ಲಿ 176 ರನ್ ಗಳಿಸಿದರೂ, ಸಿಎಸ್ಕೆ 8 ವಿಕೆಟ್ಗಳ ಹೀನಾಯ ಸೋಲನ್ನು ಅನುಭವಿಸಿತು. ಪಂದ್ಯದ ನಂತರ ನೀಡಿದ ಸಂದರ್ಶನದಲ್ಲಿ ರುತುರಾಜ್ ಹೀಗೆ ಹೇಳಿದ್ದಾರೆ:
ಅಷ್ಟೊಂದು ರನ್ ಬಾರಿಸಿದರೂ ಗೆಲುವು ಕಷ್ಟವಾಗುತ್ತಿದೆ. ಇಂಪ್ಯಾಕ್ಟ್ ಸಬ್ ರೂಲ್ನೊಂದಿಗೆ 10-15 ಅಥವಾ 20 ರನ್ಗಳು ಹೆಚ್ಚುವರಿಯಾಗಿ ಬೇಕಾಗುತ್ತವೆ ಎಂದು ಹೇಳಿದ್ದಾರೆ.
ಆಲ್ರೌಂಡರ್ಗಳ ಬೆಳವಣಿಗೆಗೆ ಅಡ್ಡಿ
ಋತುರಾಜ್ ಗಾಯಕ್ವಾಡ್ ಕೂಡ ಇಂಪ್ಯಾಕ್ಟ್ ಪ್ಲೇಯರ್ನಿಂದ ಆಟದ ಬೆಳವಣಿಗೆಗೆ ಅಡ್ಡಿಯಾಗಿದೆ ಎಂದು ಹೇಳಿದ್ದಾರೆ. ಈ ನಿಯಮದಿಂದಾಗಿ ಆಲ್ರೌಂಡರ್ಗಳ ಬೆಳವಣಿಗೆಗೆ ಅಡ್ಡಿಯಾಗುತ್ತದೆ ಎಂದು ಭಾರತ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾ ಈ ಹಿಂದೆ ತಮ್ಮ ಆಲೋಚನೆಗಳನ್ನು ವ್ಯಕ್ತಪಡಿಸಿದ್ದಾರೆ.
ಪ್ರಾಮಾಣಿಕವಾಗಿ ಹೇಳುವುದಾದರೆ, ನಾನು ಇಂಪ್ಯಾಕ್ಟ್ ಪ್ಲೇಯರ್ ನಿಯಮದ ದೊಡ್ಡ ಅಭಿಮಾನಿಯಲ್ಲ. ಇದು ಆಲ್ರೌಂಡರ್ಗಳನ್ನು ಹಾಳು ಮಾಡಲಿದೆ. ಶಿವಂ ದುಬೆ ಮತ್ತು ವಾಷಿಂಗ್ಟನ್ ಸುಂದರ್ ಅವರಂತಹ ಆಟಗಾರರು ಬೌಲಿಂಗ್ ಮಾಡಲು ಸಿಗುತ್ತಿಲ್ಲ. ಇದು ನಮಗೆ ಒಳ್ಳೆಯದಲ್ಲ. 12 ಆಟಗಾರರು ಇರುವುದರಿಂದ ಇದು ಮನರಂಜನೆಯಷ್ಟೇ ಎಂದು ರೋಹಿತ್ ಹೇಳಿದ್ದರು.
ಇದನ್ನೂ ಓದಿ: KL Rahul : ಐಪಿಎಲ್ನಲ್ಲಿ ಧೋನಿಯ ದಾಖಲೆಯೊಂದನ್ನು ಮುರಿದ ಕೆ. ಎಲ್ ರಾಹುಲ್
ವಿಶ್ವದ ಅತ್ಯುತ್ತಮ ಬೌಲರ್ ಜಸ್ಪ್ರೀತ್ ಬುಮ್ರಾ ಕೂಡ ನಿಯಮದ ಬಗ್ಗೆ ಹೆಚ್ಚು ಸಂತೋಷವಾಗಿಲ್ಲ. ಬೌಲರ್ ಆಗಿ, ನಿಯಮವು ಬ್ಯಾಟರ್ಗಳಿಗೆ ಹೆಚ್ಚಿನ ನೆರವು ನೀಡುತ್ತದೆ ಎಂದು ಹೇಳಿದ್ದಾರೆ.
“ಸಮಯದ ನಿರ್ಬಂಧಗಳು ಮತ್ತು ಆಟಗಾರರ ನಿಯಮಗಳಿಂದಾಗಿ ಬೌಲರ್ಗಳಿಗೆ ಕಷ್ಟವಾಗುತ್ತದೆ. ಇದು ಬೌಲರ್ಗಲ ಸಂಯಮ ಹಾಳು ಮಾಡಲು ಬ್ಯಾಟರ್ಗಳಿಗೆ ನೆರವಾಗುತ್ತದೆ. ಈ ನಿಯಮದಿಂದಾಗಿ ಬೌಲರ್ ಶಕ್ತಿ ಅರ್ಧದಷ್ಟು ಇಳಿಯುತ್ತದೆ ಎಂದು ಹೇಳಿದ್ದಾರೆ.