Site icon Vistara News

CSK vs PBKS: ಚೆನ್ನೈಗೆ ತವರಿನಲ್ಲೇ ಆಘಾತವಿಕ್ಕಿ ಪ್ಲೇ ಆಫ್​ ಆಸೆ ಜೀವಂತವಿರಿಸಿದ ಪಂಜಾಬ್​

CSK vs PBKS

ಚೆನ್ನೈ: ಪ್ಲೇ ಆಫ್​ ಆಸೆಯನ್ನು ಜೀವಂತವಿರಿಸಲು ಗೆಲ್ಲಲೇ ಬೇಕಾದ ಮಹತ್ವದ ಪಂದ್ಯದಲ್ಲಿ ಪಂಜಾಬ್​ ಕಿಂಗ್ಸ್(CSK vs PBKS)​ ತಂಡ ಹಾಲಿ ಚಾಂಪಿಯನ್​ ಚೆನ್ನೈ ಸೂಪರ್​ ಕಿಂಗ್ಸ್​ ತಂಡವನ್ನು ಅವರದ್ದೇ ನೆಲದಲ್ಲಿ 7 ವಿಕೆಟ್​ಗಳಿಂದ ಮಗುಚಿ ಹಾಕಿದೆ. ಇದು ಈ ಆವೃತ್ತಿಯಲ್ಲಿ ಚೆನ್ನೈಗೆ ತವರಿನಲ್ಲಿ ಎದುರಾದ 2ನೇ ಸೋಲಾಗಿದೆ. ಇದಕ್ಕೂ ಮುನ್ನ ಲಕ್ನೋ ವಿರುದ್ಧ ಸೋಲು ಕಂಡಿತ್ತು. ಜಾನಿ ಬೇರ್​ಸ್ಟೋ(46 ರನ್​) ಮತ್ತು ರಾಹುಲ್​ ಚಹರ್​ (16ಕ್ಕೆ 2 ವಿಕೆಟ್​) ಪಂಜಾಬ್​ ಗೆಲುವಿನ ಪ್ರಮುಖ ರೂವಾರಿಗಳಾಗಿ ಮೂಡಿಬಂದರು.

ಇಲ್ಲಿನ ಎಂ.ಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆದ ಐಪಿಎಲ್​ನ(IPL 2024) 49 ಪಂದ್ಯದಲ್ಲಿ ಟಾಸ್ ಗೆದ್ದು ಬೌಲಿಂಗ್​ ಆಯ್ದುಕೊಂಡ ಪಂಜಾಬ್​ ಇದಕ್ಕೆ ತಕ್ಕ ಪ್ರದರ್ಶನ ನೀಡುವು ಮೂಲಕ ಚೆನ್ನೈ ತಂಡವನ್ನು 162 ರನ್​ಗೆ ಕಟ್ಟಿಹಾಕಿತು. ಸಾಧಾರಣ ಮೊತ್ತದ ಗುರಿಯನ್ನು ಅಷ್ಟೇ ಸೊಗಸಾಗಿ ಬೆನ್ನಟ್ಟಿದ ಪಂಜಾಬ್​ ಬ್ಯಾಟರ್​ಗಳು 17.5 ಓವರ್​ಗಳಲ್ಲಿ ಕೇವಲ 3 ವಿಕೆಟ್​ಗೆ 163 ರನ್​ ಬಾರಿಸಿ ಗೆಲುವಿನ ಪತಾಕೆ ಹಾರಿಸಿದರು.

​ಚೇಸಿಂಗ್​ ವೇಳೆ ಕಳೆದ ಪಂದ್ಯದ ಶತಕ ವೀರ ಜಾನಿ ಬೇರ್​ಸ್ಟೋ 46 ರನ್​ ಬಾರಿಸಿ ಈ ಪಂದ್ಯದಲ್ಲಿಯೂ ತಮ್ಮ ಬ್ಯಾಟಿಂಗ್​ ಪ್ರತಾಪ ತೋರಿದರು. ಆರಂಭದಿಂದಲೇ ಬಿರುಸಿನ ಬ್ಯಾಟಿಂಗ್​ಗೆ ಒತ್ತು ಕೊಟ್ಟ ಅವರು ಪ್ರತಿ ಓವರ್​ನಲ್ಲಿಯೂ ಕನಿಷ್ಠ ಒಂದು ಬೌಂಡರಿ ಅಥವಾ ಸಿಕ್ಸರ್​ ಬಾರಿಸುತ್ತಲೇ ಮುನ್ನುಗಿದರು. ಇವರಿಗೆ 2ನೇ ಕ್ರಮಾಂಕದಲ್ಲಿ ಆಡಲಿಳಿದ ದಕ್ಷಿಣ ಆಫ್ರಿಕಾದ ಹಾರ್ಡ್​ ಹಿಟ್ಟರ್​ ರೀಲಿ ರೂಸೊ ಉತ್ತಮ ಸಾಥ್​ ನೀಡಿದರು. ಬೇರ್​ಸ್ಟೋ ವಿಕೆಟ್​ ಪತನದ ಬಳಿಕ ಇವರು ತಂಡವನ್ನು ಆಧರಿಸಿದರು. 23 ಎಸೆತ ಎದುರಿಸಿ 43(5 ಬೌಂಡರಿ, 2 ಸಿಕ್ಸರ್​) ರನ್​ ಬಾರಿಸಿದರು. ಅಂತಿಮವಾಗಿ ಶಶಾಂಕ್​ ಸಿಂಗ್​(25) ಮತ್ತು ಹಂಗಾಮಿ ನಾಯಕ ಸ್ಯಾಮ್​ ಕರನ್​(26) ಅಜೇಯರಾಗಿ ಉಳಿದು ತಂಡವನ್ನು ಗೆಲುವಿನ ದಡ ಸೇರಿಸಿದರು. ಇದೇ ವೇಳೆ ಶಶಾಂಕ್ ಟಿ20 ಕ್ರಿಕೆಟ್​ನಲ್ಲಿ 2 ಸಾವಿರ ರನ್​ಗಳ ಗಡಿ ದಾಡಿದರು.

ಚೆನ್ನೈಗೆ ಗಾಯಕ್ವಾಡ್​ ಆಸರೆ


ಮೊದಲು ಬ್ಯಾಟಿಂಗ್​ ನಡೆಸಿದ ಚೆನ್ನೈ ತಂಡ ಉತ್ತಮ ಆರಂಭವೇನೊ ಪಡೆಯಿತು. ನಾಯಕ ಋತುರಾಜ್​ ಗಾಯಕ್ವಾಡ್​ ಮತ್ತು ಅನುಭವಿ ಹಾಗೂ ಹಿರಿಯ ಆಟಗಾರ ಅಜಿಂಕ್ಯ ರಹಾನೆ ಸೇರಿಕೊಂಡು ಮೊದಲ ವಿಕೆಟ್​ಗೆ 64 ರನ್​ ಒಟ್ಟುಗೂಡಿಸಿದರು. ರಹಾನೆ 29 ರನ್​ ಗಳಿಸಿ ವಿಕೆಟ್​ ಕಳೆದುಕೊಂಡರು. ಉತ್ತಮ ಸ್ಥಿತಿಯಲ್ಲಿದ್ದ ಚೆನ್ನೈ ರಹಾನೆ ವಿಕೆಟ್​ ಪತನದ ಬಳಿಕ ದಿಢೀರ್​ ಕುಸಿತ ಕಂಡಿತು. ಸತತವಾಗಿ ವಿಕೆಟ್​ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು.

ಒಂದೆಡೆ ಸಹ ಆಟಗಾರರ ವಿಕೆಟ್ ಬೀಳುತ್ತಿದ್ದರೂ ಕೂಡ ಮತ್ತೊಂದು ತುದಿಯಲ್ಲಿ ಕ್ರೀಸ್​ ಕಚ್ಚಿ ನಿಂತ ಗಾಯಕ್ವಾಡ್​ ತಮ್ಮ ಶಕ್ತಿ ಮೀರಿದ ಬ್ಯಾಟಿಂಗ್​ ಪ್ರದರ್ಶನದ ಮೂಲಕ ತಂಡದ ಮೊತ್ತವನ್ನು ಹಿಗ್ಗಿಸುವ ಪ್ರಯತ್ನ ಮುಂದುವರಿಸಿದರು. ಒಂದು ಹಂತದಲ್ಲಿ ಸಮೀರ್ ರಿಜ್ವಿ ಅವರಿಂದ ಸಣ್ಣ ಮಟ್ಟದ ಜತೆಯಾಟದ ಬೆಂಬಲ ಸಿಕ್ಕರೂ ಕೂಡ ಇದು ಹೆಚ್ಚು ಹೊತ್ತು ಸಾಗಲಿಲ್ಲ. 21 ರನ್​ ಗಳಿಸಿದ್ದ ವೇಳೆ ರಿಜ್ವಿ ಕೂಡ ಔಟಾದರು. ಗಾಯಕ್ವಾಡ್​ 48 ಎಸೆತಗಳಿಂದ 5 ಬೌಂಡರಿ ಮತ್ತು 2 ಸಿಕ್ಸರ್​ ಬಾರಿಸಿ 62 ರನ್​ ಗಳಿಸಿದರು.

ಇದನ್ನೂ ಓದಿ IPL 2024: ನಾಯಕ ಹಾರ್ದಿಕ್​ ಪಾಂಡ್ಯ ಸೇರಿ ಮುಂಬೈ ತಂಡದ ಆಟಗಾರರಿಗೆ ಬಿತ್ತು ಭಾರೀ ದಂಡ

ದುಬೆ ಬ್ಯಾಟಿಂಗ್​ ವಿಫಲ


ಈ ಆವೃತ್ತಿಯಲ್ಲಿ ಇಂಪ್ಯಾಕ್ಟ್​ ಆಟಗಾರನಾಗಿ ಕಣಕ್ಕಿಳಿಯುತ್ತಿದ್ದ ಶಿವಂ ದುಬೆ ಎಲ್ಲ ಪಂದ್ಯಗಳಲ್ಲಿಯೂ ಉತ್ತಮ ಬ್ಯಾಟಿಂಗ್​ ಪ್ರದರ್ಶನ ತೋರಿದ್ದರು. ಆದರೆ ಟಿ20 ವಿಶ್ವಕಪ್​ಗೆ ಆಯ್ಕೆಯಾದ ಮರು ಪಂದ್ಯದಲ್ಲಿಯೇ ಗೋಲ್ಡನ್​ ಡಕ್​ ಸಂಕಟಕ್ಕೆ ಸಿಲುಕಿದರು. ಹರ್​ಪ್ರೀತ್​ ಬ್ರಾರ್​ ಎಸೆತದಲ್ಲಿ ಎಲ್​ಬಿಡಬ್ಲ್ಯು ಬಲೆಗೆ ಬಿದ್ದರು. ಮೊಯಿನ್​ ಅಲಿ ಕ್ಯಾಚ್​ನಿಂದ ಒಂದು ಜೀವದಾನ ಪಡೆದರೂ ಕೂಡ ಇದರ ಲಾಭವೆತ್ತಲು ವಿಫಲರಾದರು. 15 ರನ್​ ಗಳಿಸಿ ರಾಹುಲ್​ ಚಹರ್​ ಎಸೆತದಲ್ಲಿ ಕ್ಲೀನ್​ ಬೌಲ್ಡ್​ ಆದರು. ಮಹೇಂದ್ರ ಸಿಂಗ್​ ಧೋನಿ 11 ಎಸೆತಗಳಿಂದ 14 ರನ್​ ಗಳಿಸಿ ರನೌಟ್​ ಆದರು.

ಇದುವರೆಗೆ ದ್ವಿತೀಯ ಕ್ರಮಾಂಕದಲ್ಲಿ ಆಡುತ್ತಿದ್ದ ಡೇರಿಯಲ್​ ಮಿಚೆಲ್​ ಅವರನ್ನು ಈ ಪಂದ್ಯದಲ್ಲಿ 8ನೇ ಕ್ರಮಾಂಕದಲ್ಲಿ ಆಡಿಸಲಾಯಿತು. ಈ ಪ್ರಯೋಗ ಚೆನ್ನೈಗೆ ಭಾರೀ ಹಿನ್ನಡೆ ಉಂಟುಮಾಡಿತು. ಅವರನ್ನು ಎಂದಿನಂತೆ 2ನೇ ಕ್ರಮಾಂಕದಲ್ಲಿ ಆಡಿಸುತ್ತಿದ್ದರೆ ದೊಡ್ಡ ಮೊತ್ತವನ್ನು ಕಲೆಹಾಕಬಹುದಾಗಿತ್ತು. ಪಂಜಾಬ್​ ಪರ ರಾಹುಲ್​ ಚಹರ್​ ಮತ್ತು ಹರ್​ಪ್ರೀತ್​ ಬ್ರಾರ್​ ತಲಾ 2 ವಿಕೆಟ್​ ಉರುಳಿಸಿದರು.

Exit mobile version