Site icon Vistara News

CWG- 2022 | ಟೇಬಲ್‌ ಟೆನಿಸ್‌ನಲ್ಲಿ ಶರತ್‌ ಬಂಗಾರದ ಕಮಾಲ್‌

CWG-2022

ಬರ್ಮಿಂಗ್ಹಮ್‌ : ಭಾರತದ ಹಿರಿಯ ಟೇಬಲ್ ಟೆನಿಸ್‌ ಪಟು ಶರತ್‌ ಕಮಾಲ್‌, ಇಲ್ಲಿ ನಡೆದ ಕಾಮನ್ವೆಲ್ತ್‌ ಗೇಮ್ಸ್‌ನ (CWG- 2022) ಟೇಬಲ್‌ ಟೆನಿಸ್‌ನ ಪುರುಷರ ಸಿಂಗಲ್ಸ್‌ನ ಫೈನಲ್‌ ಪಂದ್ಯದಲ್ಲಿ ಗೆಲುವು ಸಾಧಿಸಿದ ಬಂಗಾರದ ಪದಕ ತಮ್ಮದಾಗಿಸಿಕೊಂಡಿದ್ದಾರೆ. ಇದು ಹಾಲಿ ಆವೃತ್ತಿಯಲ್ಲಿ ಅವರಿಗೆ ದೊರಕಿದ ನಾಲ್ಕನೇ ಪದಕ. ಅದರಲ್ಲಿ ಮೂರು ಬಂಗಾರದ ಪದಕಗಳು ಎಂಬುದು ವಿಶೇಷ. ಅವರು ಮಿಶ್ರ ತಂಡ ಸ್ಪರ್ಧೆಯಲ್ಲಿ, ಮಿಶ್ರ ಡಬಲ್ಸ್‌ನಲ್ಲಿ ಹಾಗೂ ಸಿಂಗಲ್ಸ್‌ನಲ್ಲಿ ಚಿನ್ನದ ಪದಕ ಗೆದ್ದಿದ್ದರೆ, ಪುರುಷರ ಡಬಲ್ಸ್‌ನಲ್ಲಿ ಬೆಳ್ಳಿಯ ಪದಕ ತಮ್ಮದಾಗಿಸಿಕೊಂಡಿದ್ದರು. ಅಂತೆಯೇ ೪೦ ವರ್ಷದ ಹಿರಿಯ ಆಟಗಾರನ ಕಾಮನ್ವೆಲ್ತ್‌ ಗೇಮ್ಸ್‌ನ ಒಟ್ಟು ಪದಕಗಳ ಸಂಖ್ಯೆ ೧೩ಕ್ಕೇರಿತು. ಇದರಲ್ಲಿ ಪುರುಷರ ಸಿಂಗಲ್ಸ್ ವಿಭಾಗದ ಎರಡು ಸ್ವರ್ಣ ಪದಕಗಳಿವೆ.

ಸೋಮವಾರ ಸಂಜೆ ನಡೆದ ಫೈನಲ್‌ ಪಂದ್ಯದಲ್ಲಿ ಅವರು ಸ್ಥಳೀಯ ಟಿಟಿ ಆಟಗಾರ ಲಿಯಾಮ್‌ ಪಿಚ್‌ಫೋರ್ಡ್‌ ವಿರುದ್ಧ ೪-೧ ಅಂತರದಿಂದ ಗೆಲುವು ಸಾಧಿಸಿದರು.

ಚಿನ್ನದ ಪದಕದ ಪಂದ್ಯ ಆರಂಭದಿಂದಲೇ ಜಿದ್ದಾಜಿದ್ದಿನಿಂದ ಕೂಡಿತ್ತು. ಆದಾಗ್ಯೂ ಭಾರತದ ಟಿಟಿ ಪಟು ೧೧-೧೩ ಅಂಕಗಳಿಂದ ಮೊದಲ ಸೆಟ್‌ ಕಳೆದುಕೊಂಡರು. ಆದರೆ, ತಮ್ಮ ಅನುಭವವನ್ನು ಬಳಿಸಿಕೊಂಡು ಆಡಲು ಆರಂಭಿಸಿದ ಶರತ್ ಕಮಾಲ್ ಅವರು ೧೧-೭, ೧೧-೨, ೧೧-೬, ೧೧-೮ ಸೆಟ್‌ಗಳಿಂದ ಮುಂದಿನ ನಾಲ್ಕು ಗೇಮ್‌ಗಳನ್ನು ವಶಪಡಿಕೊಂಡು ಚಿನ್ನದ ಪದಕವನ್ನು ತಮ್ಮದಾಗಿಸಿಕೊಂಡರು.

ಶರತ್‌ ಕಮಾಲ್‌ ಅವರು ಭಾನುವಾರ ನಡೆದ ಮಿಶ್ರ ಡಬಲ್ಸ್ ಪಂದ್ಯದಲ್ಲಿ ಶ್ರೀಜಾ ಅಕುಲಾ ಅವರೊಂದಿಗೆ ಮಲೇಷ್ಯಾದ ಜೋಡಿಯನ್ನು ಸೋಲಿಸಿ ಬಂಗಾರದ ಪದಕ ಗೆದ್ದುಕೊಂಡಿದ್ದರು. ಶರತ್‌ ಅವರ ಸಿಂಗಲ್ಸ್‌ ಪದಕದೊಂದಿಗೆ ಭಾರತದ ಒಟ್ಟಾರೆ ಚಿನ್ನದ ಪದಕಗಳ ಸಂಖ್ಯೆ ೨೧ಕ್ಕೆ ಏರಿಕೆಯಾಯಿತು. ಒಟ್ಟಾರೆ ಪದಕಗಳ ಸಂಖ್ಯೆ ೫೯. ದಿನದ ಸ್ಪರ್ಧೆಯಲ್ಲಿ ಮಹಿಳೆಯರ ಸಿಂಗಲ್ಸ್‌ನಲ್ಲಿ ಪಿ.ವಿ ಸಿಂಧೂ ಚಿನ್ನ ಗೆದ್ದಿದ್ದರೆ, ಲಕ್ಷ್ಯ ಸೇನ್‌ ಪುರುಷರ ಸಿಂಗಲ್ಸ್‌ನಲ್ಲಿ ಸ್ವರ್ಣ ಗೆದ್ದಿದ್ದಾರೆ.

ಇದನ್ನೂ ಓದಿ | CWG- 2022 | ಪಿ. ವಿ ಸಿಂಧೂ ಸುಂದರ ಆಟಕ್ಕೆ ಒಲಿದ ಬಂಗಾರ, ಬರ್ಮಿಂಗ್ಹಮ್‌ನಲ್ಲಿ ಭಾರತಕ್ಕೆ ಮತ್ತೊಂದು ಸ್ವರ್ಣ

Exit mobile version