Site icon Vistara News

CWG- 2022 | ಮಂಕಿಪಾಕ್ಸ್ ಭೀತಿ, ಸುರಕ್ಷಿತ ಲೈಂಗಿಕತೆಗೆ ಮನವಿ, 1.5 ಲಕ್ಷ ಕಾಂಡೋಮ್‌ ವಿತರಣೆ

CWG- 2022

ಬರ್ಮಿಂಗ್‌ಹ್ಯಾಮ್‌ : ೨೨ನೇ ಆವೃತ್ತಿಯ ಕಾಮನ್ವೆಲ್ತ್‌ ಗೇಮ್ಸ್ (CWG- 2022) ನಡೆಯುತ್ತಿರುವ ಬರ್ಮಿಂಗ್‌ಹ್ಯಾಮ್‌ ತುಂಬಾ ಬೃಹತ್‌ ಉತ್ಸವದ ಕಳೆ. ೬೦೦೦ರಷ್ಟು ಕ್ರೀಡಾಪಟುಗಳು, ಆಯೋಜಕರು, ಅಂಪೈರ್‌ಗಳು, ರೆಫರಿಗಳು, ಗ್ರೌಂಡ್‌ ಸಿಬ್ಬಂದಿ ಮತ್ತು ಪ್ರೇಕ್ಷಕರು. ಹೀಗೆ ಬರ್ಮಿಂಗ್‌ಹ್ಯಾಮ್‌ ನಗರದಲ್ಲಿ ಎಲ್ಲಿ ನೋಡಿದರೂ ಜನಜಾತ್ರೆ. ನೃತ್ಯ, ಡಾನ್ಸ್‌, ಪಾರ್ಟಿ, ಸಂಗೀತ ಸೇರಿದಂತೆ ಮನೋರಂಜನೆ ಹಾಗೂ ವಿನೋದಾವಳಿಗಳಿಗೆ ಕೊರತೆಯಿಲ್ಲ. ಇದೂ ಅಲ್ಲದೆ, ಬೃಹತ್‌ ಕ್ರೀಡೆಗಳ ನಡುವೆ ರತಿಕ್ರೀಡೆಯೂ ನಿತ್ಯ ನಿರಂತರ. ಗೇ, ಲೆಸ್ಬಿಯನ್‌ ಸೇರಿದಂತೆ ಎಲ್ಲ ರೀತಿಯ ಪಲ್ಲಂಗದಾಟಗಳು ನಡೆಯುತ್ತಿವೆ. ಈ ವಿಚಾರ ಆಯೋಜಕರ ಮಂಡೆಬಿಸಿಗೆ ಕಾರಣವಾಗಿದೆ. ಬ್ರಿಟನ್‌ನಲ್ಲಿ ಮಂಕಿಪಾಕ್ಸ್‌ ಪ್ರಕರಣಗಳು ಏರುತ್ತಿದ್ದು, ಎಗ್ಗಿಲ್ಲದೇ ನಡೆಯುತ್ತಿರುವ ಕಾಮದಾಟಗಳು ಸೋಂಕು ಮಿತಿಮೀರಲು ಕಾರಣವಾಗಬಹುದು ಎನ್ನುವ ಆತಂಕ ಹುಟ್ಟಿಸಿದೆ.

ಕಾಮಕ್ಕೆ ಕಣ್ಣಿಲ್ಲ ಎಂಬ ಮಾತಿನಿಂತೆ ಮಾನವನ ರಸಿಕತೆಗೆ ಕಡಿವಾಣ ಹೇರುವುದು ಅಷ್ಟು ಸುಲಭವಲ್ಲ. ಅದರಲ್ಲೂ ಕದ್ದುಮುಚ್ಚಿ ರಂಗಿನಾಟ ಆಡುವುದು ಇನ್ನಷ್ಟು ಥ್ರಿಲ್‌ ಕೊಡುವ ಸಂಗತಿ. ಇವೆಲ್ಲದರ ಬಗ್ಗೆ ಅರಿವು ಹೊಂದಿರುವ ಆಯೋಜಕರು ಕಾಮನ್ವೆಲ್ತ್‌ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಲು ಬಂದಿರುವ ಅಥ್ಲೀಟ್‌ಗಳಿಗೆ ಒಟ್ಟಾರೆ ೧.೫ ಲಕ್ಷ ಕಾಂಡೋಮ್‌ಗಳನ್ನು ವಿತರಿಸಿದ್ದಾರೆ. ಆದಷ್ಟು ಸುರಕ್ಷಿತ ಲೈಂಗಿಕತೆಗೆ ಒತ್ತುಕೊಡಿ ಎಂದು ಸಂದೇಶ ಸಾರಿದ್ದಾರೆ. ಹಲವರ ಜತೆ ಸಂಪರ್ಕ ಸಾಧಿಸದಂತೆಯೂ ಮುನ್ನೆಚ್ಚರಿಕೆ ಕೊಟ್ಟಿದ್ದಾರೆ.

೧೦ ದಿನಗಳ ಕ್ರೀಡಾಕೂಟದ ವೇಳೆ ಮುನ್ನೆಚ್ಚರಿಕೆಯ ಕ್ರಮವಾಗಿ ಪ್ರತಿ ಅಥ್ಲೀಟ್‌ಗೆ ತಲಾ ೨೩ ಕಾಂಡೋಮ್‌ಗಳನ್ನು ನೀಡಲಾಗಿದೆಯಂತೆ. ಆದರೆ, ಅದನ್ನು ಬಳಸದೇ ಇರುವುದು ಒಳಿತು ಎಂಬುದಾಗಿಯೂ ಹೇಳಲಾಗಿದೆ. ಒಲಿಂಪಿಕ್ಸ್‌ ವೇಳೆ ಕಾಂಡೋಮ್‌ ನೀಡುವ ಪದ್ಧತಿಯಂತೆ ಇಲ್ಲೂ ವಿತರಣೆ ಮಾಡಲಾಗಿದೆ. ಅದನ್ನು ಬಳಸದೇ, ಸ್ವಯಂ ನಿಯಂತ್ರಣ ಮಾಡಿಕೊಂಡರೆ ಒಳಿತು. ನಿಮ್ಮ ದೇಶಕ್ಕೆ ವಾಪಸ್‌ ತೆಗೆದುಕೊಂಡು ಹೋಗಿ ಎಚ್‌ಐವಿ ವೈರಸ್‌ ಕುರಿತು ಅರಿವು ಮೂಡಿಸಲು ಅದನ್ನು ಬಳಸಿ ಎಂದು ಸಲಹೆ ಕೊಟ್ಟಿದ್ದಾರೆ.

ಆರೋಗ್ಯ ಇಲಾಖೆ ಎಚ್ಚರಿಕೆ

ಯುಕೆ ಹೆಲ್ತ್‌ ಸೆಕ್ಯುರಿಟಿ ಏಜೆನ್ಸಿಯೂ (ಯುಕೆಎಚ್‌ಎಸ್‌ಎ) ಅಥ್ಲೀಟ್‌ಗಳಿಗೆ ಮಂಕಿಪಾಕ್ಸ್‌ ಹರಡುವ ಸಾಧ್ಯತೆಗಳ ಬಗ್ಗೆ ಮುನ್ನೆಚ್ಚರಿಕೆ ಕೊಟ್ಟಿದೆ. ಈಗಾಗಲೆ ೨೨೦೦ ಪ್ರಕರಣಗಳು ಪತ್ತೆಯಾಗಿವೆ. ಕ್ರೀಡಾಕೂಟದ ವೇಳೆ ಇನ್ನಷ್ಟು ಹರಡುವ ಸಾಧ್ಯತೆಗಳಿವೆ ಎಂದು ಹೇಳಿದೆ.

“ಅಥ್ಲೀಟ್‌ಗಳು ಬೃಹತ್‌ ಕ್ರೀಡಾಕೂಟಕ್ಕೆ ಬಂದಿದ್ದೀರಿ. ಇಲ್ಲಿ ಪಾರ್ಟಿ ರೀತಿಯ ಪರಿಸ್ಥಿತಿಯಿದೆ. ಹೀಗಾಗಿ ಸುರಕ್ಷಿತ ಲೈಂಗಿಕ ಸಂಪರ್ಕಕ್ಕೆ ಆದ್ಯತೆ ಕೊಡಬೇಕು. ಅಗತ್ಯ ಸಂದರ್ಭಗಳಲ್ಲಿ ಕಾಂಡೋಮ್‌ ಬಳಸಿ, ಅಸುರಕ್ಷಿತ ಲೈಂಗಿಕತೆಯಿಂದ ಖಂಡಿತವಾಗಿಯೂ ಸೋಂಕು ತಗುಲಬಹುದು,” ಎಂದು ಯುಕೆಎಚ್‌ಎಸ್‌ಎ ಹೇಳಿದೆ.

ವ್ಯಕ್ತಿಯೊಬ್ಬರನ್ನು ಮುಟ್ಟುವುದರಿಂದಲೂ ಮಂಕಿಪಾಕ್ಸ್‌ ಸೋಂಕು ಹರಡುವ ಸಾಧ್ಯತೆಗಳಿವೆ. ಹೀಗಾಗಿ ಯಾರಿಗಾದರೂ ಮಂಕಿಪಾಕ್ಸ್‌ ಲಕ್ಷಣಗಳು ಕಾಣಿಸಿಕೊಂಡರೆ ತಕ್ಷಣ ಸ್ಥಳೀಯ ಆರೋಗ್ಯ ಸೇವಾ ವಿಭಾಗಕ್ಕೆ ಮಾಹಿತಿ ನೀಡಬೇಕು ಎಂದು ಹೇಳಿದೆ.

ವಾರಕ್ಕೂ ಅಧಿಕ ಕಾಲ ನಡೆಯುವ ಬರ್ಮಿಂಗ್‌ಹ್ಯಾಮ್‌ ಕಾಮನ್ವೆಲ್ತ್‌ ಗೇಮ್ಸ್‌ ನಡುವೆ ಅಥ್ಲೀಟ್‌ಗಳು ಹಾಗೂ ಹೊರದೇಶದ ಪ್ರವಾಸಿಗರು ಲೈಂಗಿಕ ಕಾರ್ಯಕರ್ತರನ್ನು ಸಂಪರ್ಕಿಸಬಹುದು ಎಂಬುದು ಆಯೋಜಕರ ಅನುಭವದ ಮಾತು. ಕೊರೊನಾ ಸೋಂಕು ಹಾಗೂ ಮಂಕಿಪಾಕ್ಸ್‌ ಸಾಂಕ್ರಾಮಿಕ ಹೆಚ್ಚುತ್ತಿರುವುದು ಆಯೋಜಕರ ಗಮನಕ್ಕೆ ಬಂದಿದೆ. ಕ್ರೀಡಾಕೂಟ ಮುಗಿದ ಬಳಿಕವೂ ಸೋಂಕನ್ನು ನಿವಾರಣೆ ಮಾಡುವುದು ಅಲ್ಲಿನ ಆರೋಗ್ಯ ಸಂಸ್ಥೆಗಳಿಗೆ ಸಮಸ್ಯೆ ಎನಿಸುತ್ತದೆ. ಹೀಗಾಗಿ ಅಥ್ಲೀಟ್‌ಗಳಿಗೆ ಸ್ವಯಂ ನಿಯಂತ್ರಣದ ಪಾಠವನ್ನು ಆಯೋಜಕರು ಬೋಧಿಸುತ್ತಿದ್ದಾರೆ.

ಇದನ್ನೂ ಓದಿ | CWG- 2022 | ಕಾಮನ್ವೆಲ್ತ್‌ ಗೇಮ್ಸ್‌ನಲ್ಲಿ ಇಂದು ಕಣದಲ್ಲಿರುವ ಭಾರತೀಯರು ಯಾರು?

Exit mobile version