Site icon Vistara News

CWG-2022 | ಚಾನು ಚಿನ್ನದ ಬಳಿಕ ಬಿಂದ್ಯಾರಾಣಿ ಬೆಳ್ಳಿ, ನಾಲ್ಕನೇ ಪದಕ ʻಎತ್ತಿತುʼ ಭಾರತ

bindya rani devi

ಬರ್ಮಿಂಗ್‌ಹ್ಯಾಂ: ಮೀರಾ ಬಾಯಿ ಚಾನು ಅವರು ಚಿನ್ನದ ಪದಕ ಗೆದ್ದುದನ್ನು ಕಂಡು ಖುಷಿಗೊಂಡಿದ್ದ ಭಾರತಕ್ಕೆ ಬಿಂದ್ಯಾರಾಣಿ ದೇವಿ ಮಧ್ಯರಾತ್ರಿ ಬೆಳ್ಳಿ ಪದಕ ತಂದುಕೊಟ್ಟಿದ್ದಾರೆ. ಇಲ್ಲಿ ನಡೆಯುತ್ತಿರುವ ಕಾಮನ್‌ವೆಲ್ತ್‌ ಗೇಮ್ಸ್-೨೦೨೨ನಲ್ಲಿ ಈ ಮೂಲಕ ಭಾರತ ನಾಲ್ಕನೇ ಪದಕಕ್ಕೆ ಶನಿವಾರ ರಾತ್ರಿ ಕೊರಳೊಡ್ಡಿ ಸಂಭ್ರಮಿಸಿತು. ಅದಕ್ಕಿಂತ ಮೊದಲು ಸಂಕೇತ್‌ ಸರ್ಗರ್‌ ಅವರು ಬೆಳ್ಳಿ ಮತ್ತು ಕನ್ನಡಿಗ ಗುರುರಾಜ ಪೂಜಾರಿ ಅವರು ಕಂಚಿನ ಪದಕ ಗೆದ್ದು ಸಂಭ್ರಮಿಸಿದ್ದರು.

ಮಹಿಳೆಯರ ೫೫ ಕೆಜಿ ವಿಭಾಗದ ಫೈನಲ್‌ನಲ್ಲಿ ಬಿಂದ್ಯಾರಾಣಿ ಅವರು ಸ್ಕ್ಯಾಚ್‌ನಲ್ಲಿ ೮೬ ಕೆಜಿ ಮತ್ತು ಕ್ಲೀನ್‌ ಎಂಡ್‌ ಜರ್ಕ್‌ ವಿಭಾಗದಲ್ಲಿ ೧೧೬ ಕೆಜಿ, ಹೀಗೆ ಒಟ್ಟು ೨೦೨ ಕೆಜಿ ಎತ್ತುವ ಮೂಲಕ ಬೆಳ್ಳಿಯ ಪದಕ ಪಡೆದರು. ಕ್ಲೀನ್‌ ಎಂಡ್‌ ಜರ್ಕ್‌ ವಿಭಾಗದಲ್ಲಿ ಅವರು ಎತ್ತಿದ ೧೧೬ ಕೆಜಿ ಅವರಿಗೆ ಪದಕ ತಂದುಕೊಟ್ಟಿದ್ದು ಮಾತ್ರವಲ್ಲ ಅವರ ಪಾಲಿನ ವೈಯಕ್ತಿಕ ದಾಖಲೆಯಾಗಿಯೂ, ರಾಷ್ಟ್ರೀಯ ದಾಖಲೆಯಾಗಿಯೂ ದಾಖಲಾಯಿತು. ಅಷ್ಟೇ ಏಕೆ ಇದು ಕಾಮನ್‌ ವೆಲ್ತ್‌ನಲ್ಲಿ ಕೂಡಾ ಕ್ಲೀನ್‌ ಎಂಡ್‌ ಜರ್ಕ್‌ ವಿಭಾಗದಲ್ಲಿ ಒಂದು ಹೊಸ ದಾಖಲೆಯೆ.

ನೈಜೀರಿಯಾದ ಅದಿಜಾತ್‌ ಅಡೆನಿಕ್‌ ಒಲರಿನೋಯ್‌ ಅವರು ೨೦೩ (೯೨+೧೧೧) ಕೆಜಿ ಎತ್ತುವ ಮೂಲಕ ಚಿನ್ನದ ಪದಕ ಪಡೆದರೆ, ಇಂಗ್ಲೆಂಡ್‌ನ ಫ್ರೇಯರ್‌ ಮಾರೋ ೧೯೮ ಕೆಜಿ ಎತ್ತಿ ಕಂಚಿಗೆ ಕೊರಳಾದರು.

ಬಿಂದ್ಯಾರಾಣಿಯ ತಾಕತ್ತು
ನಿಜವೆಂದರೆ, ಬಿಂದ್ಯಾರಾಣಿ ಅವರು ಸ್ನ್ಯಾಚ್‌ ವಿಭಾಗದಲ್ಲಿ ಮೊದಲ ಪ್ರಯತ್ನದಲ್ಲಿ ಎತ್ತಿದ್ದು ೮೧ ಕೆಜಿ ಮಾತ್ರ. ಎರಡನೇ ಸುತ್ತಿನಲ್ಲಿ ಅದನ್ನು ೮೪ ಕೆಜಿಗೆ ಏರಿಸಿದರೆ ಮೂರನೇ ಪ್ರಯತ್ನದಲ್ಲಿ ಅದು ೮೬ಕ್ಕೆ ಏರಿಸಿದರು. ಆದರೂ ಇದು ಕಡಿಮೆಯೆ. ಯಾಕೆಂದರೆ, ಪ್ರತಿಸ್ಪರ್ಧಿಗಳಾಗಿದ್ದ ಅದಿಜಾತ್‌ ಮತ್ತು ಮೊರೊ ಅನುಕ್ರಮವಾಗಿ ೯೨ ಕೆಜಿ ಮತ್ತು ೮೯ ಕೆಜಿ ಎತ್ತಿ ಭಾರಿ ಮುಂದಿದ್ದರು. ಹೀಗಾಗಿ ಈ ವಿಭಾಗದಲ್ಲಿ ಭಾರತಕ್ಕೆ ಪದಕದ ಆಸೆ ಅಷ್ಟೇನೂ ಇರಲಿಲ್ಲ.

ಆದರೆ, ಯಾವಾಗ ಕ್ಲೀನ್‌ ಎಂಡ್‌ ಜರ್ಕ್‌ ಸುತ್ತು ಶುರುವಾಯಿತೋ ಮತ್ತೆ ಆಸೆ ಚಿಗುರಿತು. ನಿಜ ಅಂದರೆ, ಇಲ್ಲಿ ಕೂಡಾ ಬಿಂದ್ಯಾ ರಾಣಿ ಮೊದಲ ಪ್ರಯತ್ನದಲ್ಲಿ ಅಂಥ ಸಾಧನೆ ತೋರಲಿಲ್ಲ. ಸಿಕ್ಕಿದರೆ ಕಂಚು ಸಿಕ್ಕೀತು ಎಂಬಂಥ ಪರಿಸ್ಥಿತಿ ಇತ್ತು. ಬೆಳ್ಳಿ ಗೆದ್ದೇ ಗೆಲ್ಲುತ್ತಾರೆ ಎಂದು ನಂಬಲಾಗಿದ್ದ ಇಂಗ್ಲೆಂಡ್‌ನ ಫ್ರೇಯರ್‌ ಮೊರೊ ಚಿನ್ನಕ್ಕಾಗಿ ಪ್ರಯತ್ನಿಸುತ್ತೇನೆ ಎಂದು ಆರು ಕೆಜಿ ಹೆಚ್ಚುವರಿ ಭಾರಕ್ಕೆ ಪ್ರಯತ್ನಿಸಿದರು. ಆದರೆ, ಅವರಿಗೆ ಅದು ಸಾಧ್ಯವಾಗಲಿಲ್ಲ. ಈ ಹಂತದಲ್ಲಿ ಬಿಂದ್ಯಾರಾಣಿಗೆ ಒಂದು ಅವಕಾಶ ಸಿಕ್ಕಿತು. ಅವರು ಬೆಳ್ಳಿ ಗೆಲ್ಲಲು ೧೧೬ ಕೆಜಿ ಎತ್ತಬೇಕಿತ್ತು. ೨೩ ವರ್ಷದ ಈ ಹೆಣ್ಮಗಳು ತನ್ನೆಲ್ಲ ಶಕ್ತಿಯನ್ನು ಕೇಂದ್ರೀಕರಿಸಿ ತೋಳುಗಳನ್ನು ಬಲಗೊಳಿಸಿ ಎತ್ತಿಯೇ ಬಿಟ್ಟರು. ಕೊನೆಯ ಹಂತದಲ್ಲಿ ಆರು ಕೆಜಿ ಹೆಚ್ಚುವರಿ ಭಾರವೂ ಅವರನ್ನು ಕುಗ್ಗಿಸಲಿಲ್ಲ. ಅತ್ಯಂತ ಪವರ್‌ಫುಲ್‌ ಪ್ರದರ್ಶನದೊಂದಿಗೆ ಮಧ್ಯರಾತ್ರಿಯ ಬಳಿಕ ಭಾರತದ ಬುಟ್ಟಿಗೆ ನಾಲ್ಕನೇ ಪದಕವನ್ನು ಸೇರಿಸಿ ತಾವೂ ಮಿಂಚಿದರು.

ಮಣಿಪುರದ ಸಾಧಕಿ
ಮಣಿಪುರ ಮೂಲದ ಬಿಂದ್ಯಾರಾಣೀ ದೇವಿ ಸೊರೊಖೈಬಾಮ್‌ ಅವರು ೫೫ ಕೆಜಿ ದೇಹ ತೂಕ ವಿಭಾಗದಲ್ಲಿ ವೇಟ್‌ ಲಿಫ್ಟಿಂಗ್‌ನಲ್ಲಿ ಮಾಡಿದ್ದು ಸಣ್ಣ ಸಾಧನೆ ಏನಲ್ಲ. ೨೦೧೯ರ ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿ ಭಾರತಕ್ಕೆ ಚಿನ್ನದ ಪದಕ ಗೆದ್ದು ಕೊಟ್ಟಿದ್ದರು. ೨೦೨೧ರಲ್ಲಿ ರಜತ ಸಾಧನೆ ಮಾಡಿದ್ದ ಅವರು ೨೦೨೨ರಲ್ಲೂ ಬೆಳ್ಳಿ ಗೆದ್ದು ಸಂಭ್ರಮಿಸಿದ್ದಾರೆ.

ಇದನ್ನೂ ಓದಿ | CWG- 2022 | ಮೀರಾ ಭಾರತ್‌ ಮಹಾನ್‌, ಬಂಗಾರ ಗೆದ್ದ ಚಾನು, ಭಾರತಕ್ಕೆ ಮೊದಲ ಸ್ವರ್ಣ

Exit mobile version