ಬರ್ಮಿಂಗ್ಹಮ್ : ಭಾರತದ ಟೇಬಲ್ ಟೆನಿಸ್ ಪಟು ಸತಿಯನ್ ಜ್ಞಾನಶೇಖರನ್ ಅವರಿಗೆ ಹಾಲಿ ಆವೃತ್ತಿಯ ಕಾಮನ್ವೆಲ್ತ್ ಗೇಮ್ಸ್ ಸ್ಮರಣೀಯ ಎನಿಸಿಕೊಳ್ಳಲಿದೆ. ಅವರು ಸೋಮವಾರ ನಡೆದ ಕಂಚಿನ ಪದಕದ ಪಂದ್ಯದಲ್ಲಿ ಗೆಲುವು ಸಾಧಿಸಿ, ಸಿಂಗಲ್ಸ್‌ನಲ್ಲಿ ಪದಕ ಗೆದ್ದ ಭಾರತದ ಮೊದಲ ಟಿಟಿ ಆಟಗಾರ ಎಂಬ ದಾಖಲೆ ಬರೆದರು. ಕಂಚಿನ ಪದಕದ ಪಂದ್ಯದಲ್ಲಿ ಅವರು ಇಂಗ್ಲೆಂಡ್‌ನ ಪಾಲ್ ಡ್ರಿಂಕ್‌ಹಾಲ್ ಅವರನ್ನು ೪-೩ ಅಂತರದಿಂದ ಮಣಿಸಿದರು.
ಸತಿಯನ್ ಗುಣಶೇಖರನ್ ಅವರಿಗೆ ಇದು ಒಟ್ಟಾರೆ ೩ನೇ ಕಾಮನ್ವೆಲ್ತ್ ಪದಕವಾಗಿದೆ. ಹಿಂದಿನ ಆವೃತ್ತಿಯಲ್ಲಿ ಚಿನ್ನದ ಪದಕ ಗೆದ್ದ ಭಾರತದ ಟಿಟಿ ಪುರುಷರ ಡಬಲ್ಸ್ ತಂಡದ ಸದಸ್ಯ ಹಾಗೂ ಹಾಲಿ ಆವೃತ್ತಿಯಲ್ಲಿ ಪುರುಷರ ಡಬಲ್ಸ್‌ನಲ್ಲಿ ಬೆಳ್ಳಿಯ ಪದಕ ಗೆದ್ದುಕೊಂಡಿದ್ದಾರೆ.
ಸತಿಯನ್ ಅವರು ಈ ಪದಕದೊಂದಿಗೆ ಭಾರತದ ೫೮ನೇ ಪದಕ ವಿಜೇತ ಎನಿಸಿಕೊಂಡರು. ಅಲ್ಲದೆ, ಭಾರತಕ್ಕೆ ೨೩ನೇ ಕಂಚಿನ ಪದಕ ತಂದುಕೊಟ್ಟರು.
ಕಂಚಿನ ಪದಕದ ಪಂದ್ಯದಲ್ಲಿ ಇಬ್ಬರೂ ಅತ್ಯುತ್ತಮ ಪ್ರದರ್ಶನ ತೋರಿದರು. ೧೧-೯, ೧೧-೩, ೧೧-೫ ಅಂಕಗಳಿಂದ ಸತಿಯನ್ ಅವರು ಮೊದಲ ಮೂರು ಸೆಟ್‌ಗಳನ್ನು ಗೆದ್ದರೆ, ೮-೧೧, ೯-೧೧, ೧೦-೧೨ ಅಂಕಗಳಿಂದ ಇಂಗ್ಲೆಂಡ್ ಆಟಗಾರ ಮುಂದಿನ ಮೂರು ಪಂದ್ಯಗಳನ್ನು ತಮ್ಮದಾಗಿಸಿಕೊಂಡರು. ಹೀಗಾಗಿ ಏಳನೆ ಸೆಟ್ ಅತ್ಯಂತ ರೋಚಕವಾಗಿ ನಡೆಯಿತು. ಈ ಸೆಟ್ ಅನ್ನು ೧೧-೯ರಿಂದ ಗೆದ್ದ ಸತಿಯನ್ ಕಂಚು ತಮ್ಮದಾಗಿಸಿಕೊಂಡರು.