ಬರ್ಮಿಂಗ್ಹಮ್ : ಕಾಮನ್ವೆಲ್ತ್ ಗೇಮ್ಸ್‌ನಲ್ಲಿ (CWG- 2022) ಭಾರತದ ಮುಂಚೂಣಿ ಬ್ಯಾಡ್ಮಿಂಟನ್ ಆಟಗಾರ್ತಿ ಪಿ. ವಿ ಸಿಂಧೂ ಬಂಗಾರದ ಪದಕ ಗೆದ್ದಿದ್ದಾರೆ. ಸೋಮವಾರ ಮಧ್ಯಾಹ್ನ (ಭಾರತೀಯ ಕಾಲಮಾನ) ನಡೆದ ಫೈನಲ್ ಪಂದ್ಯದಲ್ಲಿ ಅವರು ಕೆನಡಾದ ಮಿಶೆಲ್ ಲಿ ವಿರುದ್ಧ ಜಯ ಸಾಧಿಸಿ ಸ್ವರ್ಣ ಪದಕಕ್ಕೆ ಮುತ್ತಿಟ್ಟರು. ಈ ಮೂಲಕ ಅವರು ಕಾಮನ್ವೆಲ್ತ್ ಗೇಮ್ಸ್‌ನ ಮಹಿಳೆಯರ ಸಿಂಗಲ್ಸ್‌ನಲ್ಲಿ ಬಂಗಾರ ಗೆದ್ದ ಭಾರತದ ಮೊದಲ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
ಫೈನಲ್ ಪಂದ್ಯದಲ್ಲಿ ಪಿ. ವಿ ಸಂಪೂರ್ಣವಾಗಿ ಪಾರಮ್ಯ ಮೆರೆದರು. ವಿಶ್ವದ ೧೩ನೇ rank ಹೊಂದಿರುವ ಕೆನಡಾದ ಮಿಶೆಲ್ ಲೀ ಏಳನೇ rankನಲ್ಲಿರುವ ಸಿಂಧೂಗೆ ಸವಾಲೇ ಎನಿಸಲಿಲ್ಲ. ಹೀಗಾಗಿ ಭಾರತೀಯ ಆಟಗಾರ್ತಿ ೨೧-೧೫, ೨೧-೧೩ ಗೇಮ್‌ಗಳಿಂದ ಸುಲಭ ಜಯ ದಾಖಲಿಸಿದರು.
ಮೊದಲ ಗೇಮ್‌ನಲ್ಲಿ ಮಿಶೆಲ್ ಸ್ವಲ್ಪ ಪ್ರಮಾಣದ ಪೈಪೋಟಿ ನೀಡಿದರೂ, ಬ್ರೇಕ್‌ಗೆ ಮೊದಲು ಸಿಂಧೂ ೧೧-೮ರ ಮುನ್ನಡೆ ಗಳಿಸಿಕೊಂಡರು. ಬಳಿಕ ಸಿಂಧೂ ಎದುರಾಳಿಗೆ ಹೆಚ್ಚಿನ ಅವಕಾಶಗಳನ್ನು ನೀಡದೆ ಗೇಮ್ ವಶಪಡಿಸಿಕೊಂಡರು. ನಂತರದ ಗೇಮ್‌ನಲ್ಲಿ ಮಿಶೆಲ್ ಉತ್ತಮ ಆರಂಭದ ಮುನ್ಸೂಚನೆ ಕೊಟ್ಟರು. ಅದರೆ, ಒಂದು ಬಾರಿ ಪ್ರಹಾರ ಶುರು ಮಾಡಿದ ಸಿಂಧೂ ಗೆಲುವಿನ ತನಕ ನಿಲ್ಲಿಸಲಿಲ್ಲ.
ಸಿಂಧೂ ಅವರ ಬಂಗಾರದ ಪದಕದೊಂದಿ ಭಾರತದ ಒಟ್ಟಾರೆ ಪದಕಗಳ ಸಂಖ್ಯೆ ೫೬ಕ್ಕೆ ಏರಿಕೆಯಾಯಿತು. ಅದರಲ್ಲಿ ೧೯ ಚಿನ್ನ, ೧೫ ಬೆಳ್ಳಿ ಹಾಗೂ ೨೨ ಕಂಚಿನ ಪದಕಗಳು ಸೇರಿಕೊಂಡಿವೆ. ಅಂತೆಯೇ ೧೯ ಪದಕಗಳು ಗೆದ್ದ ತಕ್ಷಣ ಅಂಕಪಟ್ಟಿಯಲ್ಲಿ ನ್ಯೂಜಿಲೆಂಡ್ ಹಿಂದಿಕ್ಕಿ ನಾಲ್ಕನೇ ಸ್ಥಾನಕ್ಕೆ ಬಡ್ತಿ ಪಡೆದುಕೊಂಡಿತು. ಎರಡೂ ದೇಶಗಳು ೧೯ ಚಿನ್ನದ ಪದಕಗಳನ್ನೇ ಗೆದ್ದುಕೊಂಡಿದೆ. ಆದರೆ, ಭಾರತ (೧೫) ನ್ಯೂಜಿಲೆಂಡ್‌ಗಿಂತ (೧೨) ಹೆಚ್ಚು ಬೆಳ್ಳಿ ಹಾಗೂ ಒಟ್ಟು ಪದಕಗಳ ಪಟ್ಟಿಯಲ್ಲೂ ಮುಂದಿದೆ.
ಎರಡು ಒಲಿಂಪಿಕ್ಸ್ ಪದಕ ಗೆದ್ದಿರುವ ಪಿ.ವಿ. ಸಿಂಧೂ ಅವರು ಬೆಳ್ಳಿಯ ಪದಕ ಗೆದ್ದುಕೊಂಡಿದ್ದರು. ಆ ಆವೃತ್ತಿಯಲ್ಲಿ ಅವರು ಸೈನಾ ನೆಹ್ವಾಲ್ ವಿರುದ್ಧ ಫೈನಲ್‌ನಲ್ಲಿ ಸೋಲು ಕಂಡಿದ್ದರು.
ಇದನ್ನೂ ಓದಿ | CWG- 2022 | ಇಂದೂ ಕೂಡ ಸಿಗಬಹುದು ಭಾರತಕ್ಕೆ ಐದು ಪದಕಗಳು, ಅದರಲ್ಲಿ ಚಿನ್ನ ಎಷ್ಟು?