Site icon Vistara News

CWG -2022 | ಕಾಮನ್ವೆಲ್ತ್‌ ಗೇಮ್ಸ್‌ ಅದ್ಧೂರಿ ಶುಭಾರಂಭ

CWG-2022

ಬರ್ಮಿಂಗ್‌ಹ್ಯಾಮ್‌: ಪ್ರತಿಷ್ಠಿತ ಕಾಮನ್ವೆಲ್ತ್‌ ಗೇಮ್ಸ್‌ (CWG- 2022) ಕ್ರೀಡಾಕೂಟದ ಉದ್ಘಾಟನಾ ಸಮಾರಂಭ ಗುರುವಾರ ತಡರಾತ್ರಿ ನಡೆಯಿತು. ಸ್ಥಳೀಯ ಹಾಗೂ ವಿಶ್ವದ ಹಲವು ರಾಷ್ಟ್ರಗಳ ಕ್ರೀಡಾ ಪ್ರೇಮಿಗಳ ಸಮ್ಮುಖದಲ್ಲಿ ನಾನಾ ಕಾರ್ಯಕ್ರಮಗಳು ನಡೆದವು. ವಿಭಿನ್ನ ಸಾಂಸ್ಕೃತಿಕ ಚಟುವಟಿಕೆಗಳನ್ನು ಆಯೋಜಿಸಿದ್ದ ಸಂಘಟಕರು ೨೨ನೇ ಆವೃತ್ತಿಯ ಕ್ರೀಡಾಕೂಟಕ್ಕೆ ಸ್ವಾಗತ ಕೋರಿದರು.

ಬರ್ಮಿಂಗ್‌ಹ್ಯಾಮ್‌ನಲ್ಲಿರುವ ಅಲೆಕ್ಸಾಂಡರ್‌ ಸ್ಟೇಡಿಯಮ್‌ನಲ್ಲಿ ಉದ್ಘಾಟನಾ ಕಾರ್ಯಕ್ರಮ ನಡೆಯಿತು. ಬ್ರಿಟನ್ ರಾಜಕುಮಾರ ಪ್ರಿನ್ಸ್‌ ಚಾರ್ಲ್ಸ್‌ ಅವರು ಕ್ರೀಡಾಕೂಟಕ್ಕೆ ಚಾಲನೆ ಕೊಟ್ಟರು. ಅದಕ್ಕಿಂತ ಮೊದಲು ಬರ್ಮಿಂಗ್‌ಹ್ಯಾಮ್‌ ಸಂಸ್ಕೃತಿಯನ್ನು ಪ್ರತಿನಿಧಿಸುವ ಕಾರ್ಯಕ್ರಮಗಳು ನಡೆದವು. ಅಲ್ಲಿನ ಮನೆಗಳು, ದಿನ ಬಳಕೆಯ ವಸ್ತುಗಳು ದೈನಂದಿನ ಚಟುವಟಿಕೆಗಳನ್ನು ಮೈದಾನದಲ್ಲಿ ಪ್ರದರ್ಶಿಸಲಾಯಿತು.

ಕಾರ್ಯಕ್ರಮ ನಡೆಯುವ ಸ್ಟೇಡಿಯಮ್‌ಗೆ ೭೨ ಬಣ್ಣಬಣ್ಣದ ಕಾರುಗಳನ್ನು ತರುವ ಮೂಲಕ ಅಲ್ಲಿನ ನಾಗರಿಕತೆಯನ್ನು ವಿವರಿಸಲಾಯಿತು.

ನೊಬೆಲ್‌ ಶಾಂತಿ ಪ್ರಶಸ್ತಿ ಪುರಸ್ಕೃತೆ ಮಲಾಲ ಯೂಸುಫ್‌ಝೈ ಅವರು ಬರ್ಮಿಂಗ್‌ಹ್ಯಾಮ್‌ನ ಬದುಕಿನ ಕತೆಯನ್ನು ವಿವರಿಸಿದರು. ಬರ್ಮಿಂಗ್‌ಹ್ಯಾಮ್‌ನಲ್ಲಿ ಹೇಗೆ ಬೆಳೆದೆ, ಅಲ್ಲಿನ ಗ್ರಂಥಾಲಯದಲ್ಲಿ ಹೇಗೆ ಓದಿದೆ ಹಾಗೂ ಹೇಗೆ ಗೆಳೆಯರನ್ನು ಮಾಡಿಕೊಂಡೆ ಎಂಬುದನ್ನು ವಿವರಿಸಿದರು.

ಜಗದ್ವಿಖ್ಯಾತ ಹಾಸ್ಯ ನಟರಾಗಿದ್ದ ಚಾರ್ಲಿ ಚಾಪ್ಲಿನ್‌ ಅವರ ತವರೂರು ಬರ್ಮಿಂಗ್‌ಹ್ಯಾಮ್‌ ಆಗಿರುವುದರಿಂದ, ಕಾರ್ಯಕ್ರಮದಲ್ಲಿ ಅವರನ್ನೂ ಸ್ಮರಿಸಲಾಯಿತು. ಅದೇ ರೀತಿ ವಿಶೇಷ ಚೇತನರು ನಾನಾ ಬಗೆಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೀಡಿದರು. ಅದೇ ರೀತಿ ಕೈಗಾರಿಕಾ ಕ್ರಾಂತಿ ಹಾಗೂ ಮುದ್ರಣಯಂತ್ರಗಳ ಅನ್ವೇಷಣೆಯನ್ನೂ ವಿವರಿಸಲಾಯಿತು.

ಶುಭಹಾರೈಕೆಗಳು

ಕಾಮನ್ವೆಲ್ತ್‌ ಗೇಮ್ಸ್‌ನಲ್ಲಿ ಪಾಲ್ಗೊಂಡಿರುವ ಭಾರತೀಯ ಕ್ರೀಡಾಪಟುಗಳಿಗೆ ಭಾರತದ ಅನೇಕ ಗಣ್ಯರು ಹಾಗೂ ಕ್ರೀಡಾಪಟುಗಳು ಶುಭ ಹಾರೈಸಿದರು. ಪ್ರಧಾನ ಮಂತ್ರಿ ನರೇಂದ್ರ ಮೋದಿ, ನೂತನ ರಾಷ್ಟ್ರಪತಿ ದ್ರೌಪದಿ ಮುರ್ಮು ಸೇರಿದಂತೆ ರಾಷ್ಟ್ರನಾಯಕರು ಭಾರತದ ನಿಯೋಗದ ಅಥ್ಲೀಟ್‌ಗಳಿಗೆ ಶುಭ ಹಾರೈಸಿದ್ದಾರೆ. ಅಂತೆಯೆ ಕ್ರಿಕೆಟಿಗ ವಿರಾಟ್‌ ಕೊಹ್ಲಿ, ಶ್ರೇಯಸ್‌ ಅಯ್ಯರ್‌ ಸೇರಿದಂತೆ ಹಲವು ಕ್ರೀಡಾಪಟುಗಳು ಯಶಸ್ಸಿಗೆ ಆಲ್‌ದಿ ಬೆಸ್ಟ್‌ ಹೇಳಿದರು.

Exit mobile version