ಮುಂಬಯಿ : ಭಾರತ ತಂಡದ ಮಾಜಿ ನಾಯಕ ಹಾಗೂ ಬಿಸಿಸಿಐ ಅಧ್ಯಕ್ಷ ಹಾಗೂ ದಾದಾ ಖ್ಯಾತಿಯ ಸೌರವ್ ಗಂಗೂಲಿ ಅವರು ಮಗದೊಮ್ಮೆ ಭಾರತ ತಂಡದ ನಾಯಕತ್ವ ಹೆಗಲೇರಿಸಿಕೊಳ್ಳಲಿದ್ದಾರೆ. ಅವರ ನೇತೃತ್ವದ ಭಾರತ ತಂಡ (legends cricket league) ವಿಶ್ವದ ಹಿರಿಯ ಆಟಗಾರರನ್ನು ಒಳಗೊಂಡಿರುವ ತಂಡದ ವಿರುದ್ಧ ಆಡಲಿದೆ. ಈ ಪಂದ್ಯ ಸೆಪ್ಟೆಂಬರ್ ೧೬ಕ್ಕೆ ನಡೆಯಲಿದ್ದು, ಸ್ವಾತಂತ್ರ್ಯದ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ ಈ ಪಂದ್ಯವನ್ನು ಆಯೋಜಿಸಲಾಗಿದೆ. ಹಣಾಹಣಿಗಂಗೂಲಿಯ ತವರೂರು ಕೋಲ್ಕೊತಾದ ಈಡನ್ ಗಾರ್ಡನ್ಸ್‌ನಲ್ಲಿ ನಡೆಯಲಿದೆ.
ಕ್ರಿಕೆಟ್‌ಗೆ ವಿದಾಯ ಹೇಳಿ ಹಲವು ವರ್ಷಗಳಾದೂ ಅವರು ಹೇಗೆ ಮತ್ತೆ ನಾಯಕತ್ವ ವಹಿಸಲು ಸಾಧ್ಯ ಎಂಬುದು ಎಲ್ಲದ ಮನದಲ್ಲಿ ಮೂಡುವ ಪ್ರಶ್ನೆ. ಆದರೆ, ಅವರು ನಾಯಕರಾಗುವುದು ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡುವ ಟೀಮ್ ಇಂಡಿಯಾಗೆ ಅಲ್ಲ. ಬದಲಾಗಿ ಲೆಜೆಂಡ್ಸ್ ಕ್ರಿಕೆಟ್ ಟೂರ್ನಿಯಲ್ಲಿ ಪಾಲ್ಗೊಳ್ಳುವ ಇಂಡಿಯಾ ಮಹಾರಾಜಾಸ್ ತಂಡಕ್ಕೆ. ಈ ತಂಡ ವರ್ಲ್ಡ್ ಜಯಂಟ್ಸ್ ತಂಡದ ವಿರುದ್ಧ ಆಡಲಿದೆ.
ಈ ಬಾರಿ ಲೆಜೆಂಡ್ಸ್ ಕ್ರಿಕೆಟ್ ಲೀಗ್ ಫ್ರಾಂಚೈಸಿ ಮಾದರಿಯಲ್ಲಿ ನಡೆಯಲಿದೆ. ಒಟ್ಟಾರೆ ನಾಲ್ಕು ತಂಡಗಳು ಪಾಲ್ಗೊಳ್ಳಲಿದ್ದು, ಸೆಪ್ಟೆಂಬರ್ ೧೭ಕ್ಕೆ ಲೀಗ್ ಆರಂಭವಾಗಲಿದೆ. ಈ ಪಂದ್ಯವು ಸ್ವಾತಂತ್ರ್ಯದ ಅಮೃತಮಹೋತ್ಸವದ ಭಾಗವಾಗಿದೆ. ಒಟ್ಟಾರೆಯಾಗಿ ೧೫ ಪಂದ್ಯಗಳನ್ನು ಆಯೋಜಿಸಲಾಗಿದೆ.
ಲೆಜೆಂಡ್ಸ್ ಕ್ರಿಕೆಟ್ ಲೀಗ್‌ನ ಕಮಿಷನರ್ ಆಗಿರುವ ರವಿ ಶಾಸ್ತ್ರಿ ಅವರು ಈ ಬಗ್ಗೆ ಮಾತನಾಡಿ “ಸ್ವಾತಂತ್ರ್ಯದ ೭೫ನೇ ವರ್ಷಾಚರಣೆ ಮಾಡುತ್ತಿರುವ ನಮಗೆ ಅತ್ಯಂತ ಸಂಭ್ರಮದ ಕ್ಷಣವಾಗಿದೆ. ಹೀಗಾಗಿ ಲೆಜೆಂಡ್ಸ್ ಕ್ರಿಕೆಟ್ ಲೀಗ್‌ನ ಮೊದಲ ಪಂದ್ಯವನ್ನು ಈ ಸಂಭ್ರಮಕ್ಕೆ ಮೀಸಲಿಡಲಿದ್ದೇವೆ,” ಎಂದು ಹೇಳಿದರು.
ಲೆಜೆಂಡ್ಸ್ ಕ್ರಿಕೆಟ್ ಲೀಗ್‌ನ ಸಿಇಒ ರಮಣ್ ರಹೇಜಾ ಮಾತನಾಡಿ “ಎಲ್ಲ ಭಾರತೀಯರಿಗೆ ಹೆಮ್ಮೆಯ ಸಂಗತಿಯಾಗಿರುವ ಸ್ವಾತಂತ್ರ್ಯದ ಅಮೃತ ಮಹೋತ್ಸವ ದಿನದ ಹಿನ್ನೆಲೆಯಲ್ಲಿ ಈ ಬಾರಿಯ ಲೀಗ್‌ನ ಮೊದಲ ಪಂದ್ಯವನ್ನು ಅದಕ್ಕಾಗಿ ಮೀಸಲಿಡಲಿದ್ದೇವೆ. ಉಳಿದಂತೆ ನಾಲ್ಕು ಫ್ರಾಂಚೈಸಿಗಳು ೨೨ ದಿನಗಳ ಕಾಲ ೧೫ ಪಂದ್ಯಗಳಲ್ಲಿ ಪಾಲ್ಗೊಳ್ಳಲಿವೆ,” ಎಂದು ಹೇಳಿದರು.
ತಂಡಗಳು
ಇಂಡಿಯಾ ಮಹಾರಾಜಾಸ್
ಸೌರವ್ ಗಂಗೂಲಿ (ನಾಯಕ), ವೀರೇಂದ್ರ ಸೆಹ್ವಾಗ್, ಮೊಹಮ್ಮದ್ ಕೈಫ್, ಯೂಸುಫ್ ಪಠಾಣ್, ಎಸ್. ಬದರೀನಾಥ್, ಇರ್ಫಾನ್ ಪಠಾಣ್, ಪಾರ್ಥಿವ್ ಪಟೇಲ್ (ವಿಕೆಟ್ ಕೀಪರ್), ಸ್ಟುವರ್ಟ್ ಬಿನ್ನಿ, ಎಸ್. ಶ್ರೀಶಾಂತ್, ಹರ್ಭಜನ್ ಸಿಂಗ್, ನಮನ್ ಓಜಾ, ಅಶೋಕ್ ದಿಂಡಾ, ಪ್ರಜ್ಞಾನ್ ಓಜಾ, ಅಜಯ್ ಜಡೇಜಾ, ಆರ್. ಪಿ ಸಿಂಗ್, ಜೋಗಿಂದರ್ ಶರ್ಮ, ರಿತೇಂದರ್ ಸಿಂಗ್ ಸೋಧಿ.
ವೈರ್ಲ್ಡ್ ಜಯಂಟ್ಸ್
ಇಯಾನ್ ಮಾರ್ಗನ್, ಲೆಂಡ್ಲ್ ಸಿಮನ್ಸ್, ಹರ್ಷೆಲ್ ಗಿಬ್ಸ್, ಜಾಕ್ ಕಾಲಿಸ್, ಸನತ್ ಜಯಸೂರ್ಯ, ಮ್ಯಾಟ್ ಪ್ರಿಯರ್, ನಥಾನ್ ಮೆಕ್‌ಕಲಮ್, ಜಾಂಟಿ ರೋಡ್ಸ್, ಮುತ್ತಯ್ಯ ಮುರಳೀಧರನ್, ಡೇಲ್ ಸ್ಟೇನ್, ಹ್ಯಾಮಿಲ್ಟನ್ ಮಜಕಡಾ, ಮುಶ್ರಫೆ ಮೊರ್ತಜಾ, ಅಸ್ಘರ್ ಅಪ್ಘನ್, ಮಿಚೆಲ್ ಜಾನ್ಸನ್, ಬ್ರೆಟ್ ಲೀ, ಕೆವಿನ್ ಒಬ್ರಿಯಾನ್, ದಿನೇಶ್ ರಾಮ್ದಿನ್.