ಕೊಲೊಂಬೊ : ಏಷ್ಯಾ ಕಪ್ ಫೈನಲ್ ಪಂದ್ಯದಲ್ಲಿ ಪಾಕಿಸ್ತಾನ ತಂಡವನ್ನು ೨೩ ರನ್‌ಗಳಿಂದ ಸೋಲಿಸಿದ ಶ್ರೀಲಂಕಾ ತಂಡ ಟ್ರೋಫಿ ತನ್ನದಾಗಿಸಿಕೊಂಡಿದೆ. ಟೂರ್ನಿಯುದ್ದಕ್ಕೂ ಅಧಿಕಾರಯುತ ಪ್ರದರ್ಶನ ನೀಡಿದ ಲಂಕಾ ಬಳಗ ಅರ್ಹವಾಗಿ ಟ್ರೋಫಿ ಗೆದ್ದಿದೆ. ಈ ಮೂಲಕ ಇತ್ತೀಚಿನ ದಿನಗಳಲ್ಲಿ ಯಾವುದೇ ಪ್ರಮುಖ ಟ್ರೋಫಿ ಗೆಲ್ಲದಿರುವ ಕೊರಗನ್ನು ನೀಗಿಸಿಕೊಂಡಿದೆ. ಈ ಗೆಲುವಿನ ಸಂಭ್ರಮದಲ್ಲಿರುವ ಶ್ರೀಲಂಕ ತಂಡದ ನಾಯಕ ದಸುನ್ ಶನಕ ಟ್ರೋಫಿ ಗೆಲುವಿನ ಶ್ರೇಯಸ್ಸನ್ನು ಸಂಕಷ್ಟದಲ್ಲಿರುವ ಶ್ರೀಲಂಕಾದ ಜನತೆಗೆ ಅರ್ಪಿಸಿದ್ದಾರೆ.
ಶ್ರೀಲಂಕಾ ಇದುವರೆಗೆ ಕಂಡು ಕೇಳರಿಯದ ಆರ್ಥಿಕ ಹಿಂಜರಿತಕ್ಕೆ ಒಳಗಾಗಿದೆ. ಆಹಾರ ಹಾಗೂ ಇಂಧನ ದುಬಾರಿಯಾಗಿರುವ ಕಾರಣ ಜನ ಜೀವನ ಕಷ್ಟವಾಗಿದೆ. ಆದಾಗ್ಯೂ ಕ್ರಿಕೆಟ್ ಪ್ರೇಮಿಗಳಾಗಿರುವ ಅಲ್ಲಿನ ಜನತೆ ಲಂಕಾ ತಂಡ ಕಪ್ ಗೆಲ್ಲುತ್ತಿದ್ದಂತೆ ರಸ್ತೆಯಲ್ಲಿ ನಿಂತು ಸಂಭ್ರಮ ವ್ಯಕ್ತಪಡಿಸಿದ್ದಾರೆ. ಅಂತೆಯೇ ಲಂಕಾ ನಾಯಕ ಯಶಸ್ಸನ್ನು ಲಂಕಾದ ಪ್ರಜೆಗಳಿಗೆ ಕೊಟ್ಟಿದ್ದಾರೆ.
“ಕಳೆದ ಹಲವು ವರ್ಷಗಳಿಂದ ಶ್ರೀಲಂಕಾ ತಂಡ ಉತ್ತಮವಾಗಿ ಆಡುತ್ತಿದೆ. ಯಾವುದೇ ಟ್ರೋಫಿಗಳನ್ನು ಗೆಲ್ಲುವುದಕ್ಕೆ ಸಾಧ್ಯವಾಗಿರಲಿಲ್ಲ. ಈ ಬಾರಿ ನಮ್ಮ ತಂಡದ ಎಲ್ಲರೂ ಅತ್ಯುತ್ತಮ ಪ್ರದರ್ಶನ ನೀಡಿದ್ದರು. ಇದೇ ಆಟ ಇನ್ನೂ ಹಲವಾರು ವರ್ಷಗಳ ಕಾಲ ಮುಂದುವರಿಯಲಿದ್ದು, ಇದು ನಮ್ಮ ಪಾಲಿಗೆ ಉತ್ತಮ ಸೂಚನೆ. ನಮ್ಮ ದೇಶದ ನಾಗರಿಕರೂ ಇಂಥ ವಿಜಯಕ್ಕಾಗಿ ಸಾಕಷ್ಟು ವರ್ಷಗಳಿಂದ ಕಾಯುತ್ತಿದ್ದರು. ಹೀಗಾಗಿ ಈ ಗೆಲುವನ್ನು ಅವರಿಗೆ ಅರ್ಪಿಸುತ್ತೇನೆ,” ಎಂದು ದಸುನ್ ಶನಕ ಹೇಳಿದ್ದಾರೆ.
“ಕಳೆದ ನಾಲ್ಕು ವರ್ಷಗಳಿಂದ ನಮ್ಮ ತಂಡ ಇದೇ ರೀತಿಯ ಪ್ರದರ್ಶನ ನೀಡುತ್ತಿದೆ. ಎರಡು ವರ್ಷಗಳಿಂದ ಉತ್ತಮ ಫಲಿತಾಂಶ ಪಡೆಯುತ್ತಿದ್ದೇವೆ. ಏಷ್ಯಾ ಕಪ್ ಟ್ರೋಫಿ ಗೆಲುವು ಮುಂದಿನ ಟಿ೨೦ ವಿಶ್ವ ಕಪ್‌ನಲ್ಲಿ ಉತ್ತಮ ಪ್ರದರ್ಶನ ನೀಡಲು ಪ್ರೇರಣೆ ನೀಡಲಿದೆ. ನಮಗೆ ಉತ್ತಮ ಪ್ರದರ್ಶನ ನೀಡುವ ಎಲ್ಲ ಸ್ವಾತಂತ್ರ್ಯ ನೀಡಲಾಗಿತ್ತು.ಅದು ಗೆಲುವಿಗೆ ನೆರವಾಯಿತು,” ಎಂದು ದಸುನ್ ಹೇಳಿದ್ದಾರೆ.
ಇದನ್ನೂ ಓದಿ |Asia Cup | ಸಾಲು ಸಾಲು ಸಂಕಷ್ಟಗಳ ನಡುವೆ ಏಷ್ಯಾ ಕಪ್ ಕಿರೀಟ ಮುಡಿಗೇರಿಸಿಕೊಂಡ ಶ್ರೀಲಂಕಾ