Site icon Vistara News

Dattajirao Gaekwad: ಭಾರತ ಟೆಸ್ಟ್ ತಂಡದ ಹಿರಿಯ ಮಾಜಿ ನಾಯಕ ದತ್ತಾಜಿರಾವ್ ಗಾಯಕ್ವಾಡ್ ನಿಧನ

dattajirao gaekwad

ಬೆಂಗಳೂರು: ಟೀಮ್​ ಇಂಡಿಯಾದ(Team India) ಹಿರಿಯ ಟೆಸ್ಟ್ ಕ್ರಿಕೆಟಿಗ ಹಾಗೂ ಮಾಜಿ ನಾಯಕ ದತ್ತಾಜಿರಾವ್ ಗಾಯಕ್ವಾಡ್(Dattajirao Gaekwad) ವಯೋಸಹಜ ಕಾಯಿಲೆಗಳಿಂದ ಮಂಗಳವಾರ ನಿಧನ ಹೊಂದಿದರು. ಇವರ ನಿಧನಕ್ಕೆ ಬಿಸಿಸಿಐ ಮತ್ತು ಮಾಜಿ ಆಟಗಾರರು ಕಂಬನಿ ಮಿಡಿದಿದ್ದಾರೆ. ಅವರಿಗೆ 95 ವರ್ಷ ವಯಸ್ಸಾಗಿತ್ತು.

“ಭಾರತದ ಮಾಜಿ ನಾಯಕ ಮತ್ತು ಭಾರತದ ಹಿರಿಯ ಟೆಸ್ಟ್ ಕ್ರಿಕೆಟಿಗ ದತ್ತಾಜಿರಾವ್ ಗಾಯಕ್ವಾಡ್ ಅವರ ನಿಧನಕ್ಕೆ ಬಿಸಿಸಿಐ ದುಃಖವನ್ನು ವ್ಯಕ್ತಪಡಿಸುತ್ತದೆ. ಗಾಯಕ್ವಾಡ್ ಅವರ ಕುಟುಂಬ, ಸ್ನೇಹಿತರು ಮತ್ತು ಅಭಿಮಾನಿಗಳಿಗೆ ಈ ದುಖವನ್ನು ಭರಿಸುವ ಶಕ್ತಿ ನೀಡಲಿ” ಎಂದು ಬಿಸಿಸಿಐ ತನ್ನ ಟ್ವಿಟರ್​ ಎಕ್ಸ್​ ಖಾತೆಯಲ್ಲಿ ಸಂತಾಪ ವ್ಯಕ್ತಪಡಿಸಿದೆ.

‘ಕಳೆದ 12 ದಿನಗಳಿಂದ ಬರೋಡಾ ಆಸ್ಪತ್ರೆಯ ಐಸಿಯುನಲ್ಲಿ ದತ್ತಾಜಿರಾವ್ ಗಾಯಕ್ವಾಡ್ ಸಾವು ಬದುಕಿನ ನಡುವೆ ಹೋರಾಡುತ್ತಿದ್ದರು. ಇಂದು(ಮಂಗಳವಾರ) ಮುಂಜಾನೆ ಕೊನೆಯುಸಿರೆಳೆದಿದ್ದಾರೆ” ಎಂದು ಕುಟುಂಬದ ಮೂಲಗಳು ಪಿಟಿಐಗೆ ತಿಳಿಸಿವೆ. 1952 ಮತ್ತು 1961 ರ ನಡುವೆ ದತ್ತಾಜಿರಾವ್ ಭಾರತದ ಪರ 11 ಟೆಸ್ಟ್ ಪಂದ್ಯಗಳನ್ನು ಆಡಿದ್ದರು. 1959ರಲ್ಲಿ ಇಂಗ್ಲೆಂಡ್ ಪ್ರವಾಸದ ಸಂದರ್ಭದಲ್ಲಿ ರಾಷ್ಟ್ರೀಯ ತಂಡದ ನಾಯಕರಾಗಿದ್ದರು.


ಬಲಗೈ ಬ್ಯಾಟರ್ ಆಗಿದ್ದ ಗಾಯಕ್ವಾಡ್ ಅವರು 1952ರಲ್ಲಿ ಲೀಡ್ಸ್‌ನಲ್ಲಿ ಇಂಗ್ಲೆಂಡ್ ವಿರುದ್ಧದ ಪಂದ್ಯವನ್ನಾಡುವ ಮೂಲಕ ಭಾರತ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. 1961ರಲ್ಲಿ ಚೆನ್ನೈನಲ್ಲಿ ಪಾಕಿಸ್ತಾನದ ವಿರುದ್ಧ ಅಂತಿಮ ಪಂದ್ಯ ಆಡಿದ್ದರು. 11 ಟೆಸ್ಟ್​ ಪಂದ್ಯಗಳಿಂದ 350 ರನ್​ ಬಾರಿಸಿದ್ದಾರೆ.

ರಣಜಿ ಟ್ರೋಫಿಯಲ್ಲಿ, ಗಾಯಕ್ವಾಡ್ 1947 ರಿಂದ 1961ರವರೆಗೆ ಬರೋಡಾವನ್ನು ಪ್ರತಿನಿಧಿಸಿದ್ದರು. 1959-60ರ ಋತುವಿನಲ್ಲಿ ಮಹಾರಾಷ್ಟ್ರ ವಿರುದ್ಧ ಔಟಾಗದೆ 249 ರನ್ ಗಳಿಸಿದ್ದು ಅವರ ಗರಿಷ್ಠ ಮೊತ್ತವಾಗಿತ್ತು. 110 ಪ್ರಥಮ ದರ್ಜೆ ಕ್ರಿಕೆಟ್​ ಆಡಡಿರುವ ಅವರು 5788 ರನ್​ ಬಾರಿಸಿದ್ದಾರೆ. ಇದರಲ್ಲಿ 17 ಶತಕಗಳು ಒಳಗೊಂಡಿದೆ.

Exit mobile version