ಬೆಂಗಳೂರು: ಈಡನ್ ಗಾರ್ಡನ್ಸ್ ನಲ್ಲಿ ಗುರುವಾರ ನಡೆದ ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಐಸಿಸಿ ವಿಶ್ವಕಪ್ 2023 ರ ಎರಡನೇ ಸೆಮಿಫೈನಲ್ ನಲ್ಲಿ ಆಸ್ಟ್ರೇಲಿಯಾದ ಅನುಭವಿ ಆರಂಭಿಕ ಆಟಗಾರ ಡೇವಿಡ್ ವಾರ್ನರ್ (David Warner) ಇತಿಹಾಸ ಬರೆದಿದ್ದಾರೆ. ರನ್ ಮಷಿನ್ ವಿರಾಟ್ ಕೊಹ್ಲಿ ಬ್ಯಾಟಿಂಗ್ ಪಟ್ಟಿಯಲ್ಲಿ ಅಗ್ರಸ್ಥಾನವನ್ನು ವಿಸ್ತರಿಸುವುದರೊಂದಿಗೆ, ಎಲ್ಲರ ಕಣ್ಣುಗಳು 2023 ರ ವಿಶ್ವಕಪ್ನಲ್ಲಿ ಆಸ್ಟ್ರೇಲಿಯಾದ ಅತಿ ಹೆಚ್ಚು ರನ್ ಗಳಿಕೆದಾರ ವಾರ್ನರ್ ಮೇಲೆ ನೆಟ್ಟಿವೆ.
ಕೊಲ್ಕತ್ತಾದಲ್ಲಿ ನಡೆದ ಸೆಮಿಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾದ ಸವಾಲಿನ ಮೊತ್ತವಾದ 213 ರನ್ಗಳನ್ನು ಬೆನ್ನಟ್ಟುವ ಜವಾಬ್ದಾರಿಯನ್ನು ಆರಂಭಿಕ ಆಟಗಾರರಾದ ವಾರ್ನರ್ ಮತ್ತು ಟ್ರಾವಿಸ್ ಹೆಡ್ ಹೊತ್ತುಕೊಂಡರು. ಅವರಿಬ್ಬರೂ ಮೊದಲ ವಿಕೆಟ್ಗೆ 60 ರನ್ಗಳ ಜೊತೆಯಾಟವನ್ನು ದಾಖಲಿಸಿದರು. ನಾಲ್ಕು ಸಿಕ್ಸರ್ ಮತ್ತು ಒಂದು ಬೌಂಡರಿ ಬಾರಿಸಿದ ವಾರ್ನರ್, ಪವರ್ಪ್ಲೇ ಅವಧಿಯ ಲಾಭ ಪಡೆದುಕೊಂಡರು. ಆದಾಗ್ಯೂ, ಆರನೇ ಓವರ್ನಲ್ಲಿ ದಕ್ಷಿಣ ಆಫ್ರಿಕಾದ ಪಾಲಿಗೆ ಮೊದಲ ವಿಕೆಟ್ ರೂಪದಲ್ಲಿ ಔಟಾದರು. ಸ್ಪಿನ್ನರ್ ಏಡೆನ್ ಮಾರ್ಕ್ರಮ್ ಎಸೆತಕ್ಕೆ ವಾರ್ನರ್ ವಿಕೆಟ್ ಒಪ್ಪಿಸಿದರು.
ನೂತನ ದಾಖಲೆ
161.11 ಸ್ಟ್ರೈಕ್ ರೇಟ್ನಲ್ಲಿ ಬ್ಯಾಟಿಂಗ್ ಮಾಡಿದ ವಾರ್ನರ್, ಔಟಾಗುವ ಮೊದಲು 18 ಎಸೆತಗಳಲ್ಲಿ 29 ರನ್ ಗಳಿಸಿದರು. ಈ ವೇಳೆ ವಾರ್ನರ್ ಆಸ್ಟ್ರೇಲಿಯಾದ ಆರಂಭಿಕ ಆಟಗಾರನಾಗಿ ವಿಶ್ವ ಕಪ್ನಲ್ಲಿ ಎರಡನೇ ಬಾರಿಗೆ 500 ರನ್ಗಳ ಗಡಿಯನ್ನು ದಾಟುವಲ್ಲಿ ಯಶಸ್ವಿಯಾದರು. ವಾರ್ನರ್ 2019 ರ ವಿಶ್ವಕಪ್ನಲ್ಲಿ ಮೊದಲ ಬಾರಿಗೆ ‘ 500 ರನ್ಗಳ ಶಿಖರ ನಿರ್ಮಿಸಿದ್ದರು. ರಿಕಿ ಪಾಂಟಿಂಗ್ (2007), ಮ್ಯಾಥ್ಯೂ ಹೇಡನ್ (2007) ಮತ್ತು ಆರೋನ್ ಫಿಂಚ್ (2019) ಒಂದೇ ವಿಶ್ವಕಪ್ ಆವೃತ್ತಿಯಲ್ಲಿ ಆಸ್ಟ್ರೇಲಿಯಾ ಪರ 500 ಅಥವಾ ಅದಕ್ಕಿಂತ ಹೆಚ್ಚು ರನ್ ಗಳಿಸಿದವರಾಗಿದ್ದಾರೆ.
ಇದನ್ನೂ ಓದಿ : ICC World Cup 2023 : ವಿಶ್ವ ಕಪ್ನಲ್ಲಿ ಭಾರತಕ್ಕೆ ಆಸೀಸ್ ತಂಡ ಆಘಾತ ಕೊಟ್ಟ 3 ಸಂದರ್ಭಗಳು
ರೋಹಿತ್ ಶರ್ಮಾ ಎಲೈಟ್ ಕ್ಲಬ್
ವಾರ್ನರ್ ಎರಡು ವಿಶ್ವಕಪ್ಗಳಲ್ಲಿ 500 ಅಥವಾ ಅದಕ್ಕಿಂತ ಹೆಚ್ಚು ರನ್ ಗಳಿಸಿದ ಮೂರನೇ ಬ್ಯಾಟರ್ ಆಗಿದ್ದಾರೆ. ಇದಕ್ಕೂ ಮುನ್ನ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ 1996 ಮತ್ತು 2003ರ ಐಸಿಸಿ ವಿಶ್ವಕಪ್ನಲ್ಲಿ ಈ ಸಾಧನೆ ಮಾಡಿದ್ದರು. ಭಾರತದ ನಾಯಕ ರೋಹಿತ್ ಎರಡು ವಿಶ್ವ ಕಪ್ ಅಭಿಯಾನಗಳಲ್ಲಿ 500 ಅಥವಾ ಅದಕ್ಕಿಂತ ಹೆಚ್ಚು ರನ್ ಗಳಿಸಿದ್ದಾರೆ. 36 ವರ್ಷದ ಭಾರತದ ನಾಯಕ 2019 ಮತ್ತು 2023 ರ ವಿಶ್ವಕಪ್ನಲ್ಲಿ 500 ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ.
ಆಸ್ಟ್ರೇಲಿಯಾದ ವಾರ್ನರ್ ಐಸಿಸಿ ವಿಶ್ವಕಪ್ 2023 ರಲ್ಲಿ 10 ಪಂದ್ಯಗಳಲ್ಲಿ 528 ರನ್ ಗಳಿಸಿದ್ದಾರೆ. ಆಸೀಸ್ ಆರಂಭಿಕ ಆಟಗಾರ ಹಾಲಿ ವಿಶ್ವಕಪ್ನಲ್ಲಿ ಎರಡು ಶತಕಗಳು ಮತ್ತು ಎರಡು ಅರ್ಧಶತಕಗಳನ್ನು ಬಾರಿಸಿದ್ದಾರೆ. ದಕ್ಷಿಣ ಆಫ್ರಿಕಾ ಮತ್ತು ಆಸ್ಟ್ರೇಲಿಯಾ ನಡುವಿನ ಎರಡನೇ ಸೆಮಿಫೈನಲ್ ವಿಜೇತರು ಭಾನುವಾರ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿರುವ ಐಸಿಸಿ ವಿಶ್ವಕಪ್ 2023 ರಲ್ಲಿ ಭಾರತವನ್ನು ಎದುರಿಸಲಿದ್ದಾರೆ.