ನವದೆಹಲಿ: ನೆದರ್ಲೆಂಡ್ಸ್ ವಿರುದ್ಧದ ಪಂದ್ಯದಲ್ಲಿ ಶತಕ ಬಾರಿಸುವ ಮೂಲಕ ಡೇವಿಡ್ ವಾರ್ನರ್(David Warner) ಅವರು ವಿಶ್ವಕಪ್‌ನಲ್ಲಿ ದಾಖಲೆಯೊಂದನ್ನು ಬರೆದಿದ್ದಾರೆ. ವಿಶ್ವಕಪ್‌ನಲ್ಲಿ ಟೂರ್ನಿಯಲ್ಲಿ ಅತ್ಯಧಿಕ ಶತಕ ಬಾರಿಸಿದ ಸಚಿನ್ ತೆಂಡೂಲ್ಕರ್(Sachin Tendulkar) ಅವರ ದಾಖಲೆಯನ್ನು ಸರಿಗಟ್ಟಿದ್ದಾರೆ.
ಸಚಿನ್ ಮತ್ತು ವಾರ್ನರ್ ವಿಶ್ವಕಪ್‌ನಲ್ಲಿ ತಲಾ 6 ಶತಕ ಬಾರಿಸಿದ್ದಾರೆ. 7 ಶತಕ ಬಾರಿಸಿರುವ ರೋಹಿತ್ ಶರ್ಮ ಅವರು ಅಗ್ರಸ್ಥಾನದಲ್ಲಿದ್ದಾರೆ. ರೋಹಿತ್ ಅವರು ಈ ದಾಖಲೆಯನ್ನು ಹಾಲಿ ಆವೃತ್ತಿಯಲ್ಲಿ ನಿರ್ಮಿಸಿದ್ದರು. ಇದೀಗ ವಾರ್ನರ್ ಕೂಡ ಇದೇ ಆವೃತ್ತಿಯಲ್ಲಿ 2 ಆತಕ ಬಾರಿಸುವ ಮೂಲಕ ಸಚಿನ್ ಅವರ ದಾಖಲೆಯನ್ನು ಸರಿಗಟ್ಟಿದ್ದಾರೆ. ಇದು ವಾರ್ನರ್ ಅವರ ಏಕದಿನ ಕ್ರಿಕೆಟ್ನ 22ನೇ ಶತಕವಾಗಿದೆ. ಆಸ್ಟ್ರೇಲಿಯಾದ ರಿಕಿ ಪಾಂಟಿಂಗ್ ಮತ್ತು ಲಂಕಾದ ಕುಮಾರ ಸಂಗಕ್ಕರ ಅವರು ವಿಶ್ವಕಪ್‌ನಲ್ಲಿ ತಲಾ 5 ಶತಕ ಬಾರಿಸಿದ್ದಾರೆ.
ವಾರ್ನರ್ ಅವರು ಈ ಪಂದ್ಯದಲ್ಲಿ ಅಂತಿಮವಾಗಿ 93 ಎಸೆತ ಎದುರಿಸಿ 11 ಬೌಂಡರಿ ಮತ್ತು 3 ಸಿಕ್ಸರ್ ನೆರವಿನಿಂದ 104 ರನ್ಗೆ ವಿಕೆಟ್ ಕೈಚೆಲ್ಲಿದರು. ಕಳೆದ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿಯೂ ವಾರ್ನರ್ ಶತಕ ಬಾರಿಸಿ ಸಂಭ್ರಮಿಸಿದ್ದರು. ಈ ಶತಕದ ಮೂಲಕ ಬ್ಯಾಕ್ ಟು ಬ್ಯಾಕ್ ಶತಕ ಬಾರಿಸಿದಂತಾಗಿದೆ.
ಒಂದೇ ಆವೃತ್ತಿಯ ವಿಶ್ವಕಪ್‌ನಲ್ಲಿ ವಾರ್ನರ್ ಅವರು ಮೂರು ಶತಕ ಬಾರಿಸಿದ ಸಾಧನೆ ಮಾಡಿದ್ದಾರೆ. 2019ರ ವಿಶ್ವಕಪ್‌ನಲ್ಲಿ ಈ ಸಾಧನೆ ಮಾಡಿದ್ದರು. ಈ ಬಾರಿ ಸದ್ಯ 2 ಆತಕ ಬಾರಿಸಿದ್ದಾರೆ. ಮುಂದಿನ ಪಂದ್ಯಗಳಲ್ಲಿ 2 ಶತಕ ಬಾರಿಸಿದರೆ ಸಂಗಕ್ಕರ ದಾಖಲೆಯನ್ನು ಸರಿಗಟ್ಟಲಿದ್ದಾರೆ. ಸದ್ಯ ಈ ಬಾರಿಯ ಟೂರ್ನಿಯಲ್ಲಿ ಅತ್ಯಧಿಕ ಶತಕ ಬಾರಿಸಿರುವ ದಾಖಲೆ ಕ್ವಿಂಟನ್ ಡಿ ಕಾಕ್ ಹೆಸರಿನಲ್ಲಿದೆ. ಅವರು ಸದ್ಯ ಮೂರು ಶತಕ ಬಾರಿಸಿದ್ದಾರೆ. ಇವರೂ ಕೂಡ ಇನ್ನೊಂದು ಶತಕ ಬಾರಿಸಿದರೆ ಕುಮಾರ ಸಂಗಕ್ಕರ(4 ಶತಕ) ದಾಖಲೆಯನ್ನು ಸರಿಗಟ್ಟಲಿದ್ದಾರೆ.
ವಿಶ್ವಕಪ್‌ನಲ್ಲಿ ಅತಿ ಹೆಚ್ಚು ಶತಕಗಳು
ರೋಹಿತ್ ಶರ್ಮಾ 7 ಶತಕ
ಸಚಿನ್ ತೆಂಡೂಲ್ಕರ್ 6 ಶತಕ
ಡೇವಿಡ್ ವಾರ್ನರ್ 6 ಶತಕ
ರಿಕಿ ಪಾಂಟಿಂಗ್ 5 ಶತಕ
ಕುಮಾರ್ ಸಂಗಕ್ಕಾರ 5 ಶತಕ
The iconic David Warner jump.
— Mufaddal Vohra (@mufaddal_vohra) October 25, 2023
Pushpa celebration.
– David Warner is a complete package!pic.twitter.com/mIA4JCMnaK
ಒಂದೇ ವಿಶ್ವಕಪ್‌ನಲ್ಲಿ ಅತ್ಯಧಿಕ ಶತಕ ಬಾರಿಸಿದ ಸಾಧಕರು
ಪ್ರಸ್ತುತ ಟೀಮ್ ಇಂಡಿಯಾದ ನಾಯಕನಾಗಿರುವ ರೋಹಿತ್ ಶರ್ಮ ಒಂದೇ ವಿಶ್ವಕಪ್‌ನಲ್ಲಿ ಅತಿ ಹೆಚ್ಚು ಶತಕ ಬಾರಿಸಿದ ಆಟಗಾರನಾಗಿದ್ದಾರೆ. ಅವರು 2019ರಲ್ಲಿ ಲಂಡನ್ನಲ್ಲಿ ನಡೆದಿದ್ದ ವಿಶ್ವಕಪ್‌ನಲ್ಲಿ 5 ಶತಕ ಬಾರಿಸಿದ್ದರು. ಈ ಮೂಲಕ ಲಂಕಾದ ಕುಮಾರ ಸಂಗಕ್ಕರ ಅವರ ಹೆಸರಿನಲ್ಲಿದ್ದ ದಾಖಲೆಯನ್ನು ಮುರಿದಿದ್ದರು. ಈ ಆವೃತ್ತಿಯಲ್ಲಿ ರೋಹಿತ್ 9 ಪಂದ್ಯಗಳನ್ನು ಆಡಿ ಒಟ್ಟು 648 ರನ್ ಗಳಿಸಿದ್ದರು. ವಿಶ್ವಕಪ್‌ನಲ್ಲಿ ಒಟ್ಟು ರೋಹಿತ್ 7 ಶತಕ ಬಾರಿಸಿದ್ದಾರೆ. 2015 ರಲ್ಲಿ ಮತ್ತು ಹಾಲಿ ಆವೃತ್ತಿಯ ವಿಶ್ವಕಪ್‌ನಲ್ಲಿ ಒಂದು ಶತಕ ಬಾರಿಸಿದ್ದಾರೆ. ಈ ಮೂಲಕ ವಿಶ್ವಕಪ್‌ನಲ್ಲಿ ಅತಿ ಹೆಚ್ಚು ಶತಕ ಬಾರಿಸಿದ ಆಟಗಾರ ಎಂಬ ಹಿರಿಮೆಯನ್ನು ಹೊಂದಿದ್ದಾರೆ.
ಇದನ್ನೂ ಓದಿ AUS vs NED: ಪಂದ್ಯಕ್ಕೂ ಮುನ್ನ ಅಗಲಿದ ಬಿಷನ್ ಸಿಂಗ್ ಬೇಡಿಗೆ ಮೌನ ಪ್ರಾರ್ಥನೆ ಸಲ್ಲಿಸಿದ ಆಟಗಾರರು
ಶ್ರೀಲಂಕಾದ ಮಾಜಿ ನಾಯಕ ಮತ್ತು ಬ್ಯಾಟರ್ ಕುಮಾರ ಸಂಗಕ್ಕರ ಒಂದೇ ವಿಶ್ವಕಪ್‌ನಲ್ಲಿ ಸತತ 4 ಶತಕಗಳನ್ನು ಸಿಡಿಸಿದ ದಾಖಲೆ ಹೊಂದಿದ್ದಾರೆ. ಸಂಗಕ್ಕಾರ 2015ರ ಏಕದಿನ ವಿಶ್ವಕಪ್‌ನಲ್ಲಿ ಬಾಂಗ್ಲಾದೇಶ, ಸ್ಕಾಟ್ಲೆಂಡ್, ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ವಿರುದ್ಧ ಈ ಸಾಧನೆ ಮಾಡಿದ್ದರು. ರೋಹಿತ್ಗೂ ಮುನ್ನ ಅವರು ಈ ಸಾಧಕರ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದಿದ್ದರು. ಒಟ್ಟಾರೆ ವಿಶ್ವಕಪ್‌ನಲ್ಲಿ ಸಂಗಕ್ಕರ 5 ವಿಶ್ವಕಪ್ ಶತಕ ಬಾರಿಸಿದ್ದಾರೆ.