ಹೈದರಾಬಾದ್: ಸನ್ ರೈಸರ್ಸ್ ಹೈದರಬಾದ್ ತಂಡದ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ತಂಡ 7 ರನ್ಗಳ ವಿಜಯ ಸಾಧಿಸಿದೆ. ಈ ಮೂಲಕ ಹಾಲಿ ಆವೃತ್ತಿಯ ಐಪಿಎಲ್ನಲ್ಲಿ ಎರಡನೇ ವಿಜಯ ದಾಖಲಿಸಿಕೊಂಡಿದೆ. ಇದರೊಂದಿಗೆ ಕಳಪೆ ಪ್ರದರ್ಶನದ ಮೂಲಕ ಟೀಕೆಗೆ ಒಳಗಾಗಿದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಸ್ವಲ್ಪ ಮಟ್ಟಿಗೆ ಸಮಧಾನಪಟ್ಟುಕೊಂಡಿದೆ. ಏತನ್ಮಧ್ಯೆ, ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ಡೇವಿಡ್ ವಾರ್ನರ್ ಈ ಪಂದ್ಯದಲ್ಲಿ ವಿಶೇಷ ಸಾಧನೆ ಮಾಡಿದ್ದಾರೆ. ಅವರು ಈ ಪಂದ್ಯದಲ್ಲಿ ಸಿಕ್ಸರ್ ಬಾರಿಸುವ ಮೂಲಕ ಹಾಲಿ ಅವೃತ್ತಿಯಲ್ಲಿ ಸಿಕ್ಸರ್ ಬಾರಿಸಿದಂತಾಗಿದೆ.
ಹೈದರಾಬಾದ್ ತಂಡದ ಸ್ಪಿನ್ ಬೌಲರ್ ವಾಷಿಂಗ್ಟನ್ ಸುಂದರ್ ಅವರ ಬೌಲಿಂಗ್ಗೆ ಡೇವಿಡ್ ವಾರ್ನರ್ ಸಿಕ್ಸರ್ ಬಾರಿಸಿದ್ದರು. ಅಚ್ಚರಿಯೆಂದರೆ ಡೆಲ್ಲಿ ಕ್ಯಾಫಿಟಲ್ಸ್ ತಂಡದ ಪಾಲಿಗೂ ಹಾಲಿ ಐಪಿಎಲ್ನ ಪವರ್ ಪ್ಲೇ ಅವಧಿಯಲ್ಲಿ ಮೊದಲ ಸಿಕ್ಸರ್ ಎನಿಸಿಕೊಂಡಿದೆ. ಈ ಸಿಕ್ಸರ್ ಹೊರತಾಗಿಯೂ ಡೇವಿಡ್ ವಾರ್ನರ್ ದೊಡ್ಡ ಮೊತ್ತವನ್ನೇನೂ ಬಾರಿಸಲಿಲ್ಲ. 21 ರನ್ಗಳೀಗೆ ಅವರು ವಿಕೆಟ್ ಒಪ್ಪಿಸಿದ್ದಾರೆ.
ಹಾಲಿ ಆವೃತ್ತಿಯ ಐಪಿಎಲ್ನ ಏಳು ಪಂದ್ಯಗಳಲ್ಲಿ ಡೇವಿಡ್ ವಾರ್ನರ್ 306 ರನ್ಗಳನ್ನು ಬಾರಿಸಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪರವಾಗಿ ರನ್ ಬಾರಿಸುತ್ತಿರುವ ಏಕೈಕ ಆಟಗಾರ ಅವರು. ರಾಜಸ್ಥಾನ್ ರಾಯಲ್ಸ್ ವಿರುದ್ಧ 65 ರನ್ ಸೇರಿದಂತೆ ಒಟ್ಟು ನಾಲ್ಕು ಅರ್ಧ ಶತಕಗಳನ್ನು ಅವರು ಬಾರಿಸಿದ್ದಾರೆ.
ಪಂದ್ಯದಲ್ಲಿ ಏನಾಯಿತು?
ಐಪಿಎಲ್ 16ನೇ ಆವೃತ್ತಿಯ 34ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಎರಡನೇ ಜಯ ಲಭಿಸಿದೆ. ಸನ್ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ 7 ರನ್ನಿಂದ ಗೆದ್ದ ಡೇವಿಡ್ ವಾರ್ನರ್ ಪಡೆ ಸಂಭ್ರಮಿಸಿತು. ಇದೇ ವೇಳೆ ಸತತ ಮೂರನೇ ಸೋಲಿಗೆ ಒಳಗಾಯಿತು. ಅಕ್ಷರ್ ಪಟೇಲ್ (34) ಹಾಗೂ ಮನೀಶ್ ಪಾಂಡೆ (34) ಡೆಲ್ಲಿ ತಂಡದ ಗೆಲುವಿನ ರೂವಾರಿಗಳೆನಿಸಿಕೊಂಡರು. ಡೆಲ್ಲಿ ಬೌಲರ್ಗಳು ಸಣ್ಣ ಮೊತ್ತವನ್ನು ಕಾಪಾಡಿಕೊಳ್ಳುವುದಕ್ಕೆ ಯಶಸ್ವಿಯಾದರು.
ಇಲ್ಲಿನ ರಾಜೀವ್ಗಾಂಧಿ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡ ತನ್ನ ಪಾಲಿನ 20 ಓವರ್ಗಳಲ್ಲಿ 9 ವಿಕೆಟ್ ನಷ್ಟ ಮಾಡಿಕೊಂಡು 144 ರನ್ ಬಾರಿಸಿತು. ಪ್ರತಿಯಾಗಿ ಬ್ಯಾಟ್ ಮಾಡಿದ ಹೈದರಾಬಾದ್ ತಂಡ ತನ್ನ ಪಾಲಿನ 20 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 137 ರನ್ ಬಾರಿಸಿ ಸೋಲೊಪ್ಪಿಕೊಂಡಿತು.
ಸಾಧರಣ ಮೊತ್ತದ ಗುರಿಯನ್ನು ಬೆನ್ನಟ್ಟಿದ ಹೈದರಾಬಾದ್ ತಂಡದ ಬ್ಯಾಟಿಂಗ್ ಕೂಡ ಉತ್ತಮವಾಗಿರಲಿಲ್ಲ. ಹ್ಯಾರಿ ಬ್ರೂಕ್ 7 ರನ್ಗಳಿಗೆ ಔಟಾದರೆ, ರಾಹುಲ್ ತ್ರಿಪಾಠಿ 15 ರನ್ಗೆ ವಿಕೆಟ್ ಒಪ್ಪಿಸಿದರು. ಇನ್ನೊಂದು ಬದಿಯಲ್ಲಿ ಮಯಾಂಕ್ ಅಗರ್ವಾಲ್ ರನ್ ಬಾರಿಸುತ್ತಾ ಗೆಲುವಿನ ವಿಶ್ವಾಸ ಮೂಡಿಸಿದರು. ಆದರೆ, 49 ರನ್ಗೆ ಔಟಾದ ಅವರು 1 ರನ್ನಿಂದ ಅರ್ಧ ಶತಕದಿಂದ ವಂಚಿತರಾದರು. ನಾಯಕ ಏಡೆನ್ ಮಾರ್ಕ್ರಮ್ 3 ರನ್ಗೆ ವಿಕೆಟ್ ಒಪ್ಪಿಸಿದರು. 85 ರನ್ಗೆ ಐದು ವಿಕೆಟ್ ಕಳೆದುಕೊಂಡ ಹೈದರಾಬಾದ್ ತಂಡಕ್ಕೆ ಕೊನೇ ಹಂತದಲ್ಲಿ ಹೆನ್ರಿಚ್ ಕ್ಲಾಸೆನ್ (31 ರನ್) ಭರವಸೆ ಮೂಡಿಸಿದರು. 19 ಎಸೆತದಲ್ಲಿ 3 ಫೋರ್ ಹಾಗೂ 1 ಸಿಕ್ಸರ್ ಅವರು ಬಾರಿಸಿದರು. ಬೌಲಿಂಗ್ನಲ್ಲಿ ಮೂರು ವಿಕೆಟ್ ಪಡೆದು ಮಿಂಚಿದ್ದ ವಾಷಿಂಗ್ಟನ್ ಸುಂದರ್ 24 ರನ್ ಬಾರಿಸಿ ಕೊನೇ ತನಕ ಕ್ರೀಸ್ ಕಾಯ್ದುಕೊಂಡರೂ ಗೆಲುವು ತಂದುಕೊಡಲು ಅವರಿಗೆ ಸಾಧ್ಯವಾಗಿಲ್ಲ.