ಸಿಡ್ನಿ: ಆಸ್ಟ್ರೇಲಿಯನ್ ಕ್ರಿಕೆಟ್ ತಂಡದ ಸ್ಟಾರ್ ಆಟಗಾರ ಡೇವಿಡ್ ವಾರ್ನರ್(David Warner Retirement) ಅವರು ಟಿ20 ಕ್ರಿಕೆಟ್‌ಗೆ ನಿವೃತ್ತಿ ಘೋಷಿಸುವ ಮೂಲಕ 15 ವರ್ಷಗಳ ಅಂತಾರಾಷ್ಟ್ರೀಯ ಕ್ರಿಕೆಟ್ ವೃತ್ತಿಜೀವನಕ್ಕೆ ತೆರೆ ಎಳೆದಿದ್ದಾರೆ. ಹಾಲಿ ಆವೃತ್ತಿಯ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತ ವಿರುದ್ಧ ಸೋಲು ಕಾಣುವ ಮೂಲಕ ಆಸ್ಟ್ರೇಲಿಯಾ ಹೊರಬಿದ್ದ ಬಳಿಕ ವಾರ್ನರ್ ತಮ್ಮ ನಿವೃತ್ತಿ ಪ್ರಕಟಿಸಿದರು. ಈ ವರ್ಷದ ಜನವರಿಯಲ್ಲಿ ಟೆಸ್ಟ್ ಹಾಗೂ ಏಕದಿನ ಕ್ರಿಕೆಟ್‌ಗೂ ವಾರ್ನರ್ ವಿದಾಯ ಹೇಳಿದ್ದರು.
37 ವರ್ಷದ ಡೇವಿಡ್ ವಾರ್ನರ್, 2009ರಲ್ಲಿ ಮೆಲ್ಬೋರ್ನ್ನಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಯಲ್ಲಿ ಆಡುವ ಮೂಲಕ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. ಆಸ್ಟ್ರೇಲಿಯಾ ಪರ ಒಟ್ಟು 110 ಪಂದ್ಯಗಳನ್ನು ಆಡಿ 3277 ರನ್ ಬಾರಿಸಿದ್ದಾರೆ. ಈ ವೇಳೆ 1 ಶತಕ ಮತ್ತು 28 ಅರ್ಧಶತಕ ಬಾರಿಸಿದ್ದಾರೆ. ವಿದಾಯ ಹೇಳಿದರೂ ಕೂಡ ಮುಂದಿನ ವರ್ಷ ಪಾಕಿಸ್ತಾನದಲ್ಲಿ ನಡೆಯುವ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ತಂಡ ಬಯಸಿದರೆ ಆಡಲು ಸಿದ್ಧ ಎಂದು ಹೇಳಿದ್ದಾರೆ. ಆಸ್ಟ್ರೇಲಿಯಾ ಪರ ಟಿ20 ಕ್ರಿಕೆಟ್ನಲ್ಲಿ ಅತ್ಯಧಿಕ ರನ್ ಕಲೆಹಾಕಿದ ಬ್ಯಾಟರ್ ಎನಿಸಿಕೊಂಡಿದ್ದಾರೆ.
ರಿಕಿ ಪಾಂಟಿಂಗ್, ಆ್ಯಡಂ ಗಿಲ್ ಕ್ರಿಸ್ಟ್, ಶೇನ್ ವಾರ್ನ್ ಅವರಂತಹ ದಿಗ್ಗಜ ಆಟಗಾರರೊಂದಿಗೆ ಆಡಿದ ಅನುಭವವನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ. ನನ್ನ ಕ್ರಿಕೆಟ್ ವೃತ್ತಿಜೀವನದಲ್ಲಿ ಸಾಧಿಸುವುದು ಇನ್ನೂ ಯಾವುದೂ ಉಳಿದಿಲ್ಲ. ಮೂರು ಮಾದರಿಯ (ಏಕದಿನ, ಟೆಸ್ಟ್ ಮತ್ತು ಟಿ20) ವಿಶ್ವಕಪ್ ತಂಡದ ಸದಸ್ಯ ಎನ್ನುವುದು ನಿಜಕ್ಕೂ ಹೆಮ್ಮೆಯ ಸಂಗತಿ. ನನ್ನ ಕ್ರಿಕೆಟ್ ಜರ್ನಿಯಲ್ಲಿ ಸಹಕರಿಸಿದ ಎಲ್ಲ ಸಿಬ್ಬಂದಿ, ಸಹ ಆಟಗಾರರಿಗೆ ನಾನು ಚಿರಋಣಿ ಎಂದು ವಾರ್ನರ್ ಹೇಳಿದ್ದಾರೆ.
ಇದನ್ನೂ ಓದಿ IND vs AUS: ಟೀಮ್ ಇಂಡಿಯಾ ಆಟಗಾರರ ಮೇಲೆ ಹಿಟ್ ಅಂಡ್ ರನ್ ಗಂಭೀರ ಆರೋಪ ಮಾಡಿದ ದೆಹಲಿ ಪೊಲೀಸರು!
ವಾರ್ನರ್ ಟೆಸ್ಟ್ ಸಾಧನೆ
2011 ಜನವರಿ 4ರಂದು ಬ್ರಿಸ್ಬೇನ್‌ನಲ್ಲಿ ಕಿವೀಸ್ ವಿರುದ್ಧದ ಪಂದ್ಯವನ್ನಾಡುವ ಮೂಲಕ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಡೇವಿಡ್ ವಾರ್ನರ್ ಒಟ್ಟು 205 ಇನಿಂಗ್ಸ್‌ಗಳಲ್ಲಿ 8,786 ರನ್ ಗಳಿಸಿದ್ದಾರೆ. 26 ಶತಕ ಹಾಗೂ 37 ಅರ್ಧಶತಕ ಬಾರಿಸಿದ್ದಾರೆ. ಅಜೇಯ 335 ಇವರ ವೈಯಕ್ತಿಕ ಗರಿಷ್ಠ ಮೊತ್ತವಾಗಿದೆ. 4 ವಿಕೆಟ್ ಕೂಡ ಪಡೆದಿದ್ದಾರೆ.
ಏಕದಿನ ಸಾಧನೆ
161 ಏಕದಿನ ಪಂದ್ಯಗಳನ್ನು ಆಡಿರುವ ವಾರ್ನರ್ 159 ಇನಿಂಗ್ಸ್ಗಳಿಂದ 6932 ರನ್ ಬಾರಿಸಿದ್ದಾರೆ. 22 ಶತಕ ಮತ್ತು 33 ಅರ್ಧಶತಕ ಒಳಗೊಂಡಿದೆ. 179 ವೈಯಕ್ತಿಕ ಗರಿಷ್ಠ ಮೊತ್ತವಾಗಿದೆ. ಕಳೆದ ವರ್ಷ ಭಾರತ ವಿರುದ್ಧ ಏಕದಿನ ವಿಶ್ವಕಪ್ ಪಂದ್ಯವೇ ವಾರ್ನರ್ಗೆ ಕೊನೆಯ ಏಕದಿನ ಪಂದ್ಯವಾಗಿತ್ತು.