ಬೆಂಗಳೂರು: ಡೇವಿಸ್ ಕಪ್ ಗ್ರೂಪ್ 2 ಹಂತದ(Davis Cup 2023) ಪಂದ್ಯಕ್ಕೆ ಭಾರತ ತಂಡ ಪ್ರಕಟಗೊಂಡಿದೆ. ಮೊರೊಕ್ಕೊ ವಿರುದ್ಧ ಭಾರತ ತಂಡ ಆಡಲಿದೆ. ಈ ಟೂರ್ನಿ ಪಂದ್ಯಾವಳಿ ಸೆಪ್ಟಂಬರ್ 16 ಮತ್ತು 17ರಂದು ಲಕ್ನೋದಲ್ಲಿ ನಡೆಯಲಿದೆ. ತಂಡದಲ್ಲಿ ದಿಗ್ವಿಜಯ್ ಪ್ರತಾಪ್ ಸಿಂಗ್(Digvijay Pratap Singh) ಹೊಸ ಆಟಗಾರನಾಗಿದ್ದಾರೆ. 6 ಆಟಗಾರರನ್ನು ಒಳಗೊಂಡ ತಂಡ ಇದಾಗಿದ್ದು ಸುಮಿತ್ ನಾಗಲ್(Sumit Nagal), ಶಶಿ ಕುಮಾರ್ ಮುಕುಂದ್, ಯುಕಿ ಭಾಂಬ್ರಿ, ರಾಮ್‌ಕುಮಾರ್ ರಾಮನಾಥನ್ ಮತ್ತು ರೋಹನ್ ಬೋಪಣ್ಣ ಉಳಿದ ಆಟಗಾರರು.
ವರ್ಲ್ಡ್ ಗ್ರೂಪ್ ಪ್ಲೇ-ಆಫ್ ಸುತ್ತಿನಲ್ಲಿ ಡೆನ್ಮಾರ್ಕ್ ವಿರುದ್ಧ ಸೋತ ಕಾರಣ ಭಾರತ ವಿಶ್ವ ಗ್ರೂಪ್ 2ಕ್ಕೆ ಇಳಿದಿದೆ. ಆಟಗಾರರ ಶ್ರೇಯಾಂಕ ಮತ್ತು ಈಗಿನ ಪ್ರದರ್ಶನವನ್ನು ಮಾನದಂಡವಾಗಿರಿಸಿ ಈ ತಂಡವನ್ನು ಪ್ರಕಟಿಸಲಾಗಿದೆ. ಈ ತಂಡದ ತರಬೇತಿಯಲ್ಲಿ ಸಾಕೇತ್ ಮೈನೇನಿ, ಮಾನಸ್ ಧಾಮ್ನೆ, ಮನೀಷ್ ಸುರೇಶ್‌ಕುಮಾರ್, ಕರಣ್ ಸಿಂಗ್ ಮತ್ತು ಯುವನ್ ನಂದಲ್ ಪಾಲ್ಗೊಳ್ಳಲಿದ್ದಾರೆ ಎಂದು ಎಐಟಿಎ ತಿಳಿಸಿದೆ.
ಇದನ್ನೂ ಓದಿ Davis Cup: ಡೇವಿಸ್ ಕಪ್ ಟೆನಿಸ್; ಸುಮಿತ್ ನಗಾಲ್ಗೆ ಜಯ; ರೇಸ್ನಲ್ಲಿ ಉಳಿದ ಭಾರತ
ಬೋಪಣ್ಣಗೆ ವಿದಾಯ ಟೂರ್ನಿ
ಭಾರತದ ಖ್ಯಾತ ಅನುಭವಿ ಟೆನಿಸ್ ಆಟಗಾರ, ಕನ್ನಡಿಗ ರೋಹನ್ ಬೋಪಣ್ಣ(Rohan Bopanna) ಅವರಿಗೆ ಇದು ವಿದಾಯದ ಸರಣಿ. ಟೂರ್ನಿ ಆರಂಭಕ್ಕೂ ಒಂದು ತಿಂಗಳ ಮುಂದೆ ಅವರು ತಮ್ಮ ನಿವೃತ್ತಿಯನ್ನು ಪ್ರಕಟಿಸಿದ್ದರು. ಡೇವಿಸ್ ಕಪ್‌ನಿಂದ ದೂರ ಸರಿದರೆ ಈ ಅವಕಾಶ ಭಾರತದ ಟೆನಿಸಿಗನಿಗೇ ಸಿಗುತ್ತದೆ ಎಂದು ಹೇಳುವ ಮೂಲಕ ತಮ್ಮ ನಿವೃತ್ತಿ ವಿಚಾರವನ್ನು ತಿಳಿಸಿದ್ದರು.
ಮೂಲತಃ ಕೊಡಗಿನವರಾದ 43 ವರ್ಷದ ಬೋಪಣ್ಣ ಭಾರತದ ಟೆನಿಸ್ಗೆ ಅಪಾರ ಕೊಡುಗೆ ಸಲ್ಲಿಸಿದ್ದಾರೆ. 2002ರಲ್ಲಿ ಡೇವಿಸ್ ಕಪ್‌ಗೆ ಪದಾರ್ಪಣೆ ಮಾಡಿದ ಅವರು ಎಟಿಪಿ ಟೂರ್‌ಗಳಲ್ಲಿ ಸಕ್ರಿಯರಾಗಿದ್ದು, ಭಾರತವನ್ನು 32 ಸ್ಪರ್ಧೆಗಳಲ್ಲಿ ಪ್ರತಿನಿಧಿಸಿ 12 ಸಿಂಗಲ್ಸ್ ಮತ್ತು 10 ಡಬಲ್ಸ್ ಪಂದ್ಯಗಳಲ್ಲಿ ಗೆಲುವು ಕಂಡಿದ್ದಾರೆ. ದಿಗ್ಗಜ ಲಿಯಾಂಡರ್ ಪೇಸ್ ಅವರು 58 ಪಂದ್ಯಗಳಲ್ಲಿ ಆಡುವ ಮೂಲಕ ಅತ್ಯಧಿಕ ಪಂದ್ಯವನ್ನಾಡಿದ ದಾಖಲೆ ಹೊಂದಿದ್ದಾರೆ. ಕಳೆದ ತಿಂಗಳು ನಡೆದ ವಿಂಬಲ್ಡನ್ ಟೂರ್ನಿಯಲ್ಲಿ ಸೆಮಿಫೈನಲ್ ತಲುಪಿದ ಸಾಧನೆ ಮಾಡಿದ್ದರು.