Site icon Vistara News

DC vS GT: ಗುಜರಾತ್​ ವಿರುದ್ಧ ಡೆಲ್ಲಿಗೆ ರೋಚಕ ಗೆಲುವು ; ಪ್ಲೇ ಆಫ್​ ರೇಸ್ ಜೀವಂತ

DC vs GT

ನವದೆಹಲಿ: ಅಂತಿಮ ಎಸೆತದವರೆಗೂ ಅತ್ಯಂತ ರೋಚಕವಾಗಿ ಸಾಗಿದ ಬುಧವಾರದ ಐಪಿಎಲ್(IPL 2024)​ ಪಂದ್ಯದಲ್ಲಿ ಗುಜರಾತ್​ ಟೈಟಾನ್ಸ್​ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್​ ರೋಚಕ 4 ರನ್​ಗಳ ಗೆಲುವು ಸಾಧಿಸಿ ತನ್ನ ಪ್ಲೇ ಆಫ್​ ರೇಸ್​ ಜೀವಂತವಿರಿಸಿದೆ. ಡೆಲ್ಲಿಗೆ ತವರಿನಲ್ಲಿ ಒಲಿದ ಮೊದಲ ಗೆಲುವು ಇದಾಗಿದೆ. ಕಳೆದ ಪಂದ್ಯದಲ್ಲಿ ಹೈದರಾಬಾದ್​ ವಿರುದ್ಧ ಹೀನಾಯ ಸೋಲು ಕಂಡಿತ್ತು.

ಇಲ್ಲಿನ ಅರುಣ್​ ಜೇಟ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್​ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್​ ಸೋತು ಬ್ಯಾಟಿಂಗ್​ಗೆ ಇಳಿಸಲ್ಪಟ್ಟ ಡೆಲ್ಲಿ ಕ್ಯಾಪಿಟಲ್ಸ್​ ರಿಷಭ್​ ಪಂತ್​(88*) ಮತ್ತು ಅಕ್ಷರ್​ ಪಟೇಲ್​(66) ಅವರ ಸಮಯೋಚಿತ ಬ್ಯಾಟಿಂಗ್​ ನೆರವಿನಿಂದ ನಿಗದಿತ 20 ಓವರ್​ಗಳಲ್ಲಿ 4 ವಿಕೆಟ್​ಗೆ 224 ರನ್​ ಪೇರಿಸಿತು. ಜವಾಬಿತ್ತ ಗುಜರಾತ್ ದಿಟ್ಟ ಹೋರಾಟ ನಡೆಸಿದರೂ 8 ವಿಕೆಟ್​ಗೆ 220 ರನ್​ ಬಾರಿಸಿ ಸಣ್ಣ ಅಂತರದಿಂದ ​ಸೋಲೊಪ್ಪಿಕೊಂಡಿತು.

ವಿಫಲಗೊಂಡ ಗಿಲ್​


ಚೇಸಿಂಗ್​ ವೇಳೆ 100ನೇ ಐಪಿಎಲ್​ ಪಂದ್ಯವನ್ನಾಡಿದ ಶುಭಮನ್​ ಗಿಲ್​ 6 ರನ್​ ಗಳಿಸಿ ವಿಕೆಟ್​ ಕಳೆದುಕೊಂಡರು. ಆರಂಭಿಕ ಆಘಾತ ಕಂಡ ತಂಡಕ್ಕೆ, ವೃದ್ಧಿಮಾನ್​ ಸಾಹಾ ಮತ್ತು ಸಾಯಿ ಸುದರ್ಶನ್​ ನೆರವಾದರು. ಉಭಯ ಆಟಗಾರರು ಸೇರಿಕೊಂಡು ದ್ವಿತೀಯ ವಿಕೆಟ್​ಗೆ 82 ರನ್​ಗಳ ಅತ್ಯಮೂಲ್ಯ ಜತೆಯಾಟ ನಡೆಸಿದರು. ಸಾಹಾ 39 ರನ್​ ಗಳಿಸಿದರೆ, ಸಾಯಿ ಸುದರ್ಶನ್ 65 ರನ್​ ಬಾರಿಸಿದರು. ಉಭಯ ಆಟಗಾರರ ವಿಕೆಟ್​ ಪತನದ ಬಳಿಕ ಗುಜರಾತ್​ ಮತ್ತೆ ಕುಸಿತ ಕಂಡಿತು. ಬಳಿಕ ಬಂದ ಅಜ್ಮತುಲ್ಲಾ ಒಮರ್ಜಾಯ್(1), ಶಾರೂಖ್​ ಖಾನ್​(8) ಒಂದಂಕಕ್ಕೆ ಸೀಮಿತರಾಗಿ ನಿರಾಶೆ ಮೂಡಿಸಿದರು.

ಇದನ್ನೂ ಓದಿ IPL 2024: ಬ್ಲಾಕ್​ ಟಿಕೆಟ್ ಮಾರಾಟ ಜಾಲ ಭೇದಿಸಿದ ಚೆನ್ನೈ ಪೊಲೀಸರು; 12 ಮಂದಿ ಸೆರೆ

ಕೆಲ ಕ್ರಮಾಂಕದಲ್ಲಿ ಶಕ್ತಿ ಮೀರಿ ಬ್ಯಾಟಿಂಗ್​ ನಡೆಸಿದ ಡೇವಿಡ್​ ಮಿಲ್ಲರ್​ ಅರ್ಧಶತಕ ಬಾರಿಸುವ ಮೂಲಕ ಒಂದು ಹಂತದಲ್ಲಿ ಗುಜರಾತ್​ ಪಾಳಯದಲ್ಲಿ ಗೆಲುವಿನ ಆಸೆ ಚಿಗುರೊಡೆಯುವಂತೆ ಮಾಡಿದರು. ಆದರೆ ಉಳಿದ ಆಟಗಾರರಿಂದ ಉತ್ತಮ ಸಾಥ್​ ಸಿಗದ ಕಾರಣ ದೊಡ್ಡ ಹೊಡೆತಗಳಿಗೆ ಕೈ ಹಾಕಿ ರಾಸಿಖ್ ಸಲಾಂ ಅವರಿಗೆ ಕ್ಯಾಚ್​ ನೀಡಿ ವಿಕೆಟ್​ ಕೈಚೆಲ್ಲಿದರು. ಈ ವಿಕೆಟ್​ ಪತನದ ಬಳಿಕ ರಶೀದ್​ ಖಾನ್​ ಮತ್ತು ಸಾಯಿ ಕಿಶೋರ್​ ಸಿಡಿದು ನಿಂತರು. ಅಂತಿಮ ಓವರ್​ನಲ್ಲಿ ಗೆಲುವಿಗೆ 19 ರನ್​ ತೆಗೆಯುವ ಸವಾಲಿನಲ್ಲಿ ರಶೀದ್​ ಅವರು ಮುಕೇಶ್​ ಕುಮಾರ್​ಗೆ ಸತತ 2 ಬೌಂಡರಿ ಮತ್ತು ಒಂದು ಸಿಕ್ಸರ್​ ಬಾರಿಸಿ ಪಂದ್ಯವನ್ನು ರೋಚಕ ಹಂತಕ್ಕೆ ತಂದು ನಿಲ್ಲಿಸಿದರು. ಅಂತಿಮ ಎಸೆತದಲ್ಲಿ ಗೆಲುವಿಗೆ 5 ರನ್​ ಬೇಕಿದ್ದಾಗ ಇದನ್ನು ಬಾರಿಸುವಲ್ಲಿ ರಶೀದ್​ ಎಡವಿದರು. ಡೆಲ್ಲಿ ರೋಚಕ 4 ರನ್​ಗಳ ಗೆಲುವು ಸಾಧಿಸಿತು.

ಸಿಡಿದ ಪಂತ್​-ಅಕ್ಷರ್​


ಮೊದಲು ಇನಿಂಗ್ಸ್ ಆರಂಭಿಸಿದ ಡೆಲ್ಲಿಗೆ ಪೃಥ್ವಿ ಶಾ ಮತ್ತು ಜೇಕ್ ಫ್ರೇಸರ್-ಮ್ಯಾಕ್‌ಗುರ್ಕ್ ಆಕ್ರಮಣಕಾರಿ ಬ್ಯಾಟಿಂಗ್​ ಮೂಲಕ ಉತ್ತಮ ಆರಂಭ ಒದಗಿಸಿದರು. ಆದರೆ ಈ ಬ್ಯಾಟಿಂಗ್​ ಆರ್ಭಟ ಹೆಚ್ಚು ಹೊತ್ತು ಸಾಗಲಿಲ್ಲ. ಸಂದೀಪ್​ ವಾರಿಯರ್​ ಒಂದೇ ಓವರ್​ನಲ್ಲಿ ಉಭಯ ಆಟಗಾರರ ವಿಕೆಟ್​ ಕಿತ್ತು ಡೆಲ್ಲಿಗೆ ಅವಳಿ ಆಘಾತವಿಕ್ಕಿದರು. 5 ರನ್​ಗಳಿಸಿದ್ದ ವೇಳೆ ಜೀವದಾನ ಪಡೆದಿದ್ದ ಮ್ಯಾಕ್‌ಗುರ್ಕ್ 23 ರನ್​ಗಳಿಸಿ ಔಟಾದರು. ಇದರ ಬೆನ್ನಲ್ಲೇ ಪೃಥ್ವಿ ಶಾ(11) ವಿಕೆಟ್​ ಕೂಡ ಪತನಗೊಂಡಿತು. ನೂರ್ ಅಹ್ಮದ್ ಹಿಡಿದ ಅದ್ಭುತ ಕ್ಯಾಚ್​ಗೆ ಉಭಯ ಆಟಗಾರರು ಬಲಿಯಾದರು. ಈ ವಿಕೆಟ್​ ಪತನದ ಬಳಿಕ ಆಡಲಿಳಿದ ಶಾಯ್​ ಹೋಪ್​ ಕೂಡ ಡೆಲ್ಲಿಗೆ ಹೋಪ್​ ನೀಡುವಲ್ಲಿ ವಿಫಲರಾದರು. ಕೇವಲ 5 ರನ್​ಗೆ ಆಟ ಮುಗಿಸಿದರು.

44 ರನ್​ಗೆ ಮೂರು ವಿಕೆಟ್​ ಕಳೆದುಕೊಂಡ ವೇಳೆ ಕ್ರೀಸ್​ಗಿಳಿದ ಎಡಗೈ ಬ್ಯಾಟರ್​ಗಳಾದ ರಿಷಭ್​ ಪಂತ್​ ಮತ್ತು ಅಕ್ಷರ್​ ಪಟೇಲ್​ ಆರಂಭದಲ್ಲಿ ತಾಳ್ಮೆಯುತ ಬ್ಯಾಟಿಂಗ್​ ನಡೆಸಿ ತಂಡವನ್ನು ಆರಂಭಿಕ ಆಘಾತದಿಂದ ಪಾರು ಮಾಡಿದರು. ಅರ್ಧಶತಕ ಪೂರ್ತಿಗೊಂಡ ತಕ್ಷಣ ಜಿದ್ದಿಗೆ ಬಿದ್ದವರಂತೆ ಬ್ಯಾಟ್​ ಬೀಸಿ ಗುಜರಾತ್​ ಬೌಲರ್​ಗಳ ಮೇಲೆ ಸವಾರಿ ಮಾಡಿದರು. 17ನೇ ಓವರ್​ ತನಕ ಕ್ರೀಸ್​ನಲ್ಲಿದ್ದ ಅಕ್ಷರ್​ ಪಟೇಲ್ 5 ಬೌಂಡರಿ ಮತ್ತು 4 ಸಿಕ್ಸರ್​ ನೆರವಿನಿಂದ 66 ರನ್​ ಚಚ್ಚಿದರು. ಈ ಜೋಡಿ 4ನೇ ವಿಕೆಟ್​ಗೆ 113 ರನ್​ ಒಟ್ಟುಗೂಡಿಸಿತು.

18 ಎಸೆತಗಳಲ್ಲಿ 67 ರನ್ ದಾಖಲು​


ಅಕ್ಷರ್​ ಪಟೇಲ್​ ವಿಕೆಟ್​ ಪತನದ ಬಳಿಕ ಆಡಲಿಳಿದ ಟ್ರಿಸ್ಟಾನ್ ಸ್ಟಬ್ಸ್ ಬಿರುಸಿನ ಬ್ಯಾಟಿಂಗ್​ ಮೂಲಕ ಕೇವಲ 7 ಎಸೆತಗಳಿಂದ ಅಜೇಯ 26 (2 ಸಿಕ್ಸರ್​, 3 ಬೌಂಡರಿ) ರನ್​ ಬಾರಿಸಿದರು. ಮೋಹಿತ್​ ಶರ್ಮ ಎಸೆತ ಅಂತಿಮ ಓವರ್​ನಲ್ಲಿ ಪಂತ್​ 4 ಸಿಕ್ಸರ್​ ಮತ್ತು ಒಂದು ಬೌಂಡರಿ ಸಿಡಿಸಿ 31 ರನ್ ದೋಚಿದರು. ಹೀಗಾಗಿ ಅಂತಿಮ 18 ಎಸೆತಗಳಲ್ಲಿ ಡೆಲ್ಲಿಗೆ ಬರೋಬ್ಬರಿ 67 ರನ್​ ಹರಿದು ಬಂತು. ಮೋಹಿತ್​ ಶರ್ಮ 4 ಓವರ್​ಗೆ 73 ರನ್​ ಬಿಟ್ಟುಕೊಟ್ಟು ಐಪಿಎಲ್​ನಲ್ಲಿಯೇ ಅತ್ಯಧಿಕ ರನ್​ ಹೊಡೆಸಿಕೊಂಡ ಆಟಗಾರ ಎನ್ನುವ ಕೆಟ್ಟ ದಾಖಲೆಯನ್ನು ತಮ್ಮ ಹೆಸರಿಗೆ ಸೇರಿಸಿಕೊಂಡರು. ಪಂತ್​ ಬರೋಬ್ಬರಿ 8 ಸಿಕ್ಸರ್​ ಮತ್ತು 5 ಬೌಂಡರಿ ಸಿಡಿಸಿ ಅಜೇಯ 88 ರನ್​ ಬಾರಿಸಿದರು. ಎದುರಿಸಿದ್ದು ಕೇವಲ 43 ಎಸೆತ. ಸಂದೀಪ್​ ವಾರಿಯರ್​ 15 ರನ್​ಗೆ 3 ವಿಕೆಟ್​ ಕಿತ್ತು ಗುಜರಾತ್​ ಪರ ಉತ್ತಮ ಬೌಲಿಂಗ್​ ನಡೆಸಿದರು. ಉಳಿದೆಲ್ಲರು ದುಬಾರಿಯಾಗಿ ಕಂಡುಬಂದರು. ​

Exit mobile version