Site icon Vistara News

DC vs GT: ಡೆಲ್ಲಿ ದಾಳಿಗೆ ಚೆಲ್ಲಾಪಿಲ್ಲಿಯಾದ ಗುಜರಾತ್​; 6 ವಿಕೆಟ್​ ಹೀನಾಯ ಸೋಲು

DC vs GT

ಅಹಮದಾಬಾದ್: ಮುಕೇಶ್​ ಕುಮಾರ್(3)​ ಮತ್ತು ಇಶಾಂತ್​ ಶರ್ಮ(2) ಅವರ ಉತ್ಕೃಷ್ಟ ಮಟ್ಟದ ಬೌಲಿಂಗ್​ ದಾಳಿಗೆ ನಲುಗಿದ ಗುಜರಾತ್​ ಟೈಟಾನ್ಸ್(Gujarat Titans)​ ತಂಡ ಡೆಲ್ಲಿ ಕ್ಯಾಪಿಟಲ್ಸ್​(DC vs GT) ವಿರುದ್ಧದ ಬುಧವಾರದ ಐಪಿಎಲ್(IPL 2024)​ ಪಂದ್ಯದಲ್ಲಿ 6 ವಿಕೆಟ್​ಗಳ ಹೀನಾಯ ಸೋಲು ಕಂಡಿದೆ. ​

ಇಲ್ಲಿನ ನರೇಂದ್ರ ಮೋದಿ ಕ್ರಿಕೆಟ್​ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್​ ಗೆದ್ದು ಫೀಲ್ಡಿಂಗ್​ ಆಯ್ದುಕೊಂಡ ಡೆಲ್ಲಿ(Delhi Capitals) ತಂಡದ ನಾಯಕ ಪಂತ್​ ಅವರ ಆಯ್ಕೆಯನ್ನು ಬೌಲರ್​ಗಳು ತಮ್ಮ ಘಾತಕ ದಾಳಿಯ ಮೂಲಕ ಸಮರ್ಥಿಸಿಕೊಂಡರು. ಎದುರಾಳಿ ಗುಜರಾತ್​ ತಂಡವನ್ನು 89 ರನ್​ಗಳಿಗೆ ಆಲೌಟ್​ ಮಾಡಿದರು. ಇದು ಈ ಬಾರಿಯ ಟೂರ್ನಿಯಲ್ಲಿ ತಂಡವೊಂದು ಗಳಿಸಿದ ಮೊದಲ ಕನಿಷ್ಠ ಮೊತ್ತವಾಗಿದೆ. ಸಾಧಾರಣ ಮೊತ್ತವನ್ನು ಬೆನ್ನತ್ತಿದ ಡೆಲ್ಲಿ 8.5 ಓವರ್​ಗಳಲ್ಲಿ 4 ವಿಕೆಟ್​ ನಷ್ಟಕ್ಕೆ 92 ರನ್​ ಬಾರಿಸಿ ಗೆಲುವು ತನ್ನದಾಗಿಸಿಕೊಂಡಿತು.

ಚೇಸಿಂಗ್​ ವೇಳೆ ಜೇಕ್ ಫ್ರೇಸರ್-ಮ್ಯಾಕ್‌ಗುರ್ಕ್ ಬಿರುಸಿನ ಬ್ಯಾಟಿಂಗ್​ ಮೂಲಕ ತಂಡಕ್ಕೆ ಉತ್ತಮ ಆರಂಭ ಒದಗಿಸಿದರು. ಇವರ ಈ ಆಕ್ರಮಣಕಾರಿ ಬ್ಯಾಟಿಂಗ್​ನಿಂದಾಗಿ 2 ಓವರ್​ ಮುಕ್ತಾಯಗೊಳ್ಳುವ ಮುನ್ನವೇ ತಂಡಕ್ಕೆ 25 ರನ್​ ಹರಿದುಬಂತು. ಆದರೆ ಇವರ ಈ ಆಟ ಹೆಚ್ಚು ಹೊತ್ತು ಸಾಗಲಿಲ್ಲ. ಸ್ಪೆನ್ಸರ್ ಜಾನ್ಸನ್ ಎಸೆದ ವೈಡ್​ ಲೆಂತ್​ ಬಾಲ್​ನ ಮರ್ಮವನರಿಯದೆ ಕ್ಯಾಚ್​ ನೀಡಿ ವಿಕೆಟ್​ ಕಳೆದುಕೊಂಡರು. ಅವರ ಗಳಿಕ 10 ಎಸೆತಗಳಿಂದ 20 ರನ್. ಈ ವಿಕೆಟ್​ ಪತನದ ಬಳಿಕ ಆಡಲಿಳಿದ ಅಭಿಷೇಕ್​ ಪೋರೆಲ್(15)​ ಮತ್ತು ಶಾಯ್ ಹೋಪ್(19)​ ಬೇಗನೆ​ ವಿಕೆಟ್​ ಕಳೆದುಕೊಂಡು ತಂಡಕ್ಕೆ ಆತಂಕ ತಂದೊಡ್ಡಿದರು. ಈ ವೇಳೆ ತಾಳ್ಮೆಯುತ ಬ್ಯಾಟಿಂಗ್​ ನಡೆಸಿದ ನಾಯಕ ಪಂತ್​(16) ಮತ್ತು ಸುಮೀತ್​ ಕುಮಾರ್​(9) ಅಜೇಯರಾಗಿ ಉಳಿದು ತಂಡವನ್ನು ಗೆಲುವಿನ ದಡ ಸೇರಿಸಿದರು. ಗುಜರಾತ್​ ಪರ ಸಂದೀಪ್​ ವಾರಿಯರ್​ 2 ವಿಕೆಟ್​ ಕಿತ್ತರು.

ರಶೀದ್​ ಖಾನ್​ ಏಕಾಂಗಿ ಹೋರಾಟ


ಇನಿಂಗ್ಸ್​ ಆರಂಭಿಸಿದ ಗುಜರಾತ್​ ತಂಡದ ಬ್ಯಾಟರ್​ಗಳು ಡೆಲ್ಲಿ ಬೌಲರ್​ಗಳಾದ ಇಶಾಂತ್​ ಶರ್ಮ, ಮುಕೇಶ್​ ಕುಮಾರ್​ ಮತ್ತು ಟ್ರಿಸ್ಟಾನ್ ಸ್ಟಬ್ಸ್ ಅವರ ಕರಾರುವಾಕ್ ಬೌಲಿಂಗ್ ಎದುರು ಅಬ್ಬರಿಸಲು ವಿಫಲರಾದರು. ನಾಯಕ ಶುಭಮನ್​​ ಗಿಲ್​(8), ವೃದ್ಧಿಮಾನ್​ ಸಾಹಾ(2), ಡೇವಿಡ್​ ಮಿಲ್ಲರ್​(2), ಅಭಿನವ್​ ಮನೋಹರ್​(8) ಮತ್ತು ಈ ಆವೃತ್ತಿಯಲ್ಲಿ ಮೊದಲ ಪಂದ್ಯವಾನ್ನಾಡಿದ ಶಾರುಖ್ ಖಾನ್(0) ಸಿಂಗಲ್​ ಡಿಜಿಟ್​ಗೆ ಸೀಮಿತರಾಗಿ ಪೆವಿಲಿಯನ್​ ಪರೇಡ್​ ನಡೆಸಿದರು.

ಇದನ್ನೂ ಓದಿ IPL 2024: ಕೆಕೆಆರ್ ಸೋಲು ಕಂಡು ಕಣ್ಣೀರು ಸುರಿಸಿದ ನಟ ಶಾರೂಖ್ ಖಾನ್‌; ಫೋಟೊ ವೈರಲ್​

ಇನ್ನೇನು ತಂಡ 50ರನ್​ ಒಳಗಡೆ ಗಂಟು-ಮೂಟೆ ಕಟ್ಟುತ್ತದೆ ಎನ್ನುವ ಹಂತದಲ್ಲಿ 8ನೇ ಕ್ರಮಾಂಕದಲ್ಲಿ ಆಡಲಿಳಿದ ರಶೀದ್​ ಖಾನ್​ ಏಕಾಂಗಿ ಹೋರಾಟ ನಡೆಸಿ 24 ಎಸೆತಗಳಿಂದ 31 ರನ್​ ಚಚ್ಚಿ ತಂಡದ ಮೊತ್ತವನ್ನು 80ರ ಗಡಿ ದಾಟಿಸಿ ಮಾನ ಉಳಿಸಿದರು. ಒಟ್ಟಾರೆಯಾಗಿ ತಂಡದ ಪರ ಮೂರು ಮಂದಿ ಮಾತ್ರ ಎರಡಂಕಿ ಮೊತ್ತ ಕಲೆಹಾಕುವಲ್ಲಿ ಯಶಸ್ಸು ಕಂಡರು. ಸಾಯಿ ಸುದರ್ಶನ್​(12) ಮತ್ತು ರಾಹುಲ್​ ತೆವಾಟಿಯ(10) ರನ್​ ಬಾರಿಸಿದರು.

ಡೆಲ್ಲಿ ಬೌಲರ್​ಗಳ ಸಂಘಟಿತ ಹೋರಾಟ


ಈ ಹಿಂದಿನ ಪಂದ್ಯಗಳಲ್ಲಿ ಕಳಪೆ ಬೌಲಿಂಗ್​ ಮೂಲಕ ಭಾರೀ ಟೀಕೆ ಎದುರಿಸಿದ್ದ ಡೆಲ್ಲಿ ಬೌಲರ್​ಗಳು ಈ ಪಂದ್ಯದಲ್ಲಿ ಉತ್ಕೃಷ್ಟ ಮಟ್ಟದ ಬೌಲಿಂಗ್​ ದಾಳಿ ಸಂಘಟಿಸಿದರು. ಮುಕೇಶ್​ ಕುಮಾರ್​ 14 ರನ್​ಗೆ 3 ವಿಕೆಟ್​ ಕಿತ್ತರೆ, ಟ್ರಿಸ್ಟಾನ್ ಸ್ಟಬ್ಸ್ ಒಂದೇ ಒವರ್​ನಲ್ಲಿ 2 ಪ್ರಮುಖ ವಿಕೆಟ್​ ಬೇಟೆಯಾಡಿದರು. ಅನುಭವಿ ಇಶಾಂತ್​ ಶರ್ಮ ಕೇವಲ 8 ರನ್​ ವೆಚ್ಚದಲ್ಲಿ 2 ವಿಕೆಟ್​ ಉರುಳಿಸಿದರು. ಖಲೀಲ್​ ಅಹ್ಮದ್​ ಒಂದು ಮೇಡನ್​ ಸಹಿತ 18 ನೀಡಿ 1 ವಿಕೆಟ್​ ಪಡೆದರು. ಅಕ್ಷರ್​ ಕೂಡ ಒಂದು ವಿಕೆಟ್​ ಕಲೆಹಾಕಿದರು. ಆದರೆ ಕುಲ್​ದೀಪ್​ 4 ಓವರ್​ ಎಸೆದರೂ ವಿಕೆಟ್​ ಕೀಳುವಲ್ಲಿ ವಿಫಲರಾದರು.

Exit mobile version