Site icon Vistara News

DC vs GT: ಕೊಹ್ಲಿಯಂತೆ ಅದ್ಭುತ ಫೀಲ್ಡಿಂಗ್​ ನಡೆಸಿ ಡೆಲ್ಲಿಗೆ ಗೆಲುವು ತಂದ ಟ್ರಿಸ್ಟಾನ್ ಸ್ಟಬ್ಸ್

DC vs GT

Tristan Stubbs's Superman fielding effort saves the day for Delhi in thriller

ನವದೆಹಲಿ: ವಿರಾಟ್​ ಕೊಹ್ಲಿ(Virat Kohli) ಅವರು ಇದೇ ವರ್ಷಾರಂಭದಲ್ಲಿ ಅಫಘಾನಿಸ್ತಾನ ವಿರುದ್ಧದ ಟಿ20 ಪಂದ್ಯದಲ್ಲಿ ಸೂಪರ್​ ಮ್ಯಾನ್​ ರೀತಿಯಲ್ಲಿ ಹಾರಿ ಸಿಕ್ಸರ್​ ತಡೆದು ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಇದೇ ರೀತಿಯಲ್ಲಿ ನಿನ್ನೆ (ಬುಧವಾರ) ನಡೆದ ಗುಜರಾತ್​ ಟೈಟಾನ್ಸ್​(DC vs GT) ವಿರುದ್ಧದ ಐಪಿಎಲ್(IPL 2024)​ ಪಂದ್ಯದಲ್ಲಿಯೂ ಡೆಲ್ಲಿ ತಂಡದ ಆಟಗಾರ ಟ್ರಿಸ್ಟಾನ್ ಸ್ಟಬ್ಸ್(Tristan Stubbs) ಕೂಡ ಸಿಕ್ಸರ್​ ತಡೆದು ಡೆಲ್ಲಿ ತಂಡಕ್ಕೆ ಗೆಲುವು ತಂದುಕೊಟ್ಟಿದ್ದಾರೆ. ಟ್ರಿಸ್ಟಾನ್ ಸ್ಟಬ್ಸ್ ಫೀಲ್ಡಿಂಗ್​ನ ಈ ಫೋಟೊ ಎಲ್ಲಡೆ ವೈರಲ್​ ಆಗಿದ್ದು ಮಾಜಿ ಕ್ರಿಕೆಟಿಗರು ಕೊಹ್ಲಿ 2.0 ವರ್ಷನ್​ ಎಂದು ಹೇಳಿದ್ದಾರೆ.

ಗುಜರಾತ್ ಇನ್ನಿಂಗ್ಸ್‌ನ 19 ನೇ ಓವರ್‌ನಲ್ಲಿ ಈ ಘಟನೆ ಸಂಭವಿಸಿತು. ರೋಮಾಂಚನಕಾರಿ ಕ್ಲೈಮ್ಯಾಕ್ಸ್​ನಲ್ಲಿ ರಶೀದ್ ಖಾನ್ ಸ್ಟ್ರೈಕ್‌ನಲ್ಲಿದ್ದರು. ರಸಿಖ್ ಸಲಾಮ್‌ ಎಸೆದ ನಿಧಾನಗತಿಯ ಎಸೆತವನ್ನು ರಶೀದ್​ ಖಾನ್​ ಸಿಕ್ಸರ್​ಗೆ ಬಡಿದಟ್ಟಿದರು. ಈ ವೇಳೆ ಬೌಂಡರಿ ಲೈನ್​ನಲ್ಲಿ ನಿಂತಿದ್ದ ಟ್ರಿಸ್ಟಾನ್ ಸ್ಟಬ್ಸ್ ಎತ್ತರಕ್ಕೆ ಜಿಗಿದು ಸಿಕ್ಸರ್​ ತಡೆದರು. ಅವರು ಈ ಸಿಕ್ಸರ್​ ತಡೆದಯೇ ಹೋಗಿದ್ದರೆ ಡೆಲ್ಲಿ ಸೋಲು ಕಾಣುತ್ತಿತ್ತು. ಡೆಲ್ಲಿ ಗೆದ್ದದ್ದು ಕೇವಲ 4 ರನ್​ ಅಂತರದಿಂದ.

ಗುಜರಾತ್​ ವಿರುದ್ಧದ ಪಂದ್ಯದಲ್ಲಿ ವಿಸ್ಫೋಟಕ ಬ್ಯಾಟಿಂಗ್​ ನಡೆಸಿದ ಟ್ರಿಸ್ಟಾನ್ ಸ್ಟಬ್ಸ್ ಕೇವಲ 7 ಎಸೆತಗಳಿಂದ 26 ರನ್​ ಬಾರಿಸಿದರು. ಈ ಇನಿಂಗ್ಸ್​ನಲ್ಲಿ 2 ಸಿಕ್ಸರ್​ ಮತ್ತು 3 ಬೌಂಡರಿ ಸಿಡಿಯಿತು.

ಇಲ್ಲಿನ ಅರುಣ್​ ಜೇಟ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್​ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್​ ಸೋತು ಬ್ಯಾಟಿಂಗ್​ಗೆ ಇಳಿಸಲ್ಪಟ್ಟ ಡೆಲ್ಲಿ ಕ್ಯಾಪಿಟಲ್ಸ್​ ರಿಷಭ್​ ಪಂತ್​(88*) ಮತ್ತು ಅಕ್ಷರ್​ ಪಟೇಲ್​(66) ಅವರ ಸಮಯೋಚಿತ ಬ್ಯಾಟಿಂಗ್​ ನೆರವಿನಿಂದ ನಿಗದಿತ 20 ಓವರ್​ಗಳಲ್ಲಿ 4 ವಿಕೆಟ್​ಗೆ 224 ರನ್​ ಪೇರಿಸಿತು. ಜವಾಬಿತ್ತ ಗುಜರಾತ್ ದಿಟ್ಟ ಹೋರಾಟ ನಡೆಸಿದರೂ 8 ವಿಕೆಟ್​ಗೆ 220 ರನ್​ ಬಾರಿಸಿ ಸಣ್ಣ ಅಂತರದಿಂದ ​ಸೋಲೊಪ್ಪಿಕೊಂಡಿತು.

ಇದನ್ನೂ ಓದಿ IPL 2024: ಸಿಕ್ಸರ್​ನಿಂದ ಗಾಯಗೊಂಡ ಕ್ಯಾಮೆರಮನ್​ಗೆ ವಿಡಿಯೊ ಮೂಲಕ ಕ್ಷಮೆ ಕೇಳಿದ ರಿಷಭ್​ ಪಂತ್​​

ಚೇಸಿಂಗ್​ ವೇಳೆ ಕೆಲ ಕ್ರಮಾಂಕದಲ್ಲಿ ಶಕ್ತಿ ಮೀರಿ ಬ್ಯಾಟಿಂಗ್​ ನಡೆಸಿದ ಡೇವಿಡ್​ ಮಿಲ್ಲರ್​ ಅರ್ಧಶತಕ ಬಾರಿಸುವ ಮೂಲಕ ಒಂದು ಹಂತದಲ್ಲಿ ಗುಜರಾತ್​ ಪಾಳಯದಲ್ಲಿ ಗೆಲುವಿನ ಆಸೆ ಚಿಗುರೊಡೆಯುವಂತೆ ಮಾಡಿದರು. ಆದರೆ ಉಳಿದ ಆಟಗಾರರಿಂದ ಉತ್ತಮ ಸಾಥ್​ ಸಿಗದ ಕಾರಣ ದೊಡ್ಡ ಹೊಡೆತಗಳಿಗೆ ಕೈ ಹಾಕಿ ರಾಸಿಖ್ ಸಲಾಂ ಅವರಿಗೆ ಕ್ಯಾಚ್​ ನೀಡಿ ವಿಕೆಟ್​ ಕೈಚೆಲ್ಲಿದರು. ಈ ವಿಕೆಟ್​ ಪತನದ ಬಳಿಕ ರಶೀದ್​ ಖಾನ್​ ಮತ್ತು ಸಾಯಿ ಕಿಶೋರ್​ ಸಿಡಿದು ನಿಂತರು. ಅಂತಿಮ ಓವರ್​ನಲ್ಲಿ ಗೆಲುವಿಗೆ 19 ರನ್​ ತೆಗೆಯುವ ಸವಾಲಿನಲ್ಲಿ ರಶೀದ್​ ಅವರು ಮುಕೇಶ್​ ಕುಮಾರ್​ಗೆ ಸತತ 2 ಬೌಂಡರಿ ಮತ್ತು ಒಂದು ಸಿಕ್ಸರ್​ ಬಾರಿಸಿ ಪಂದ್ಯವನ್ನು ರೋಚಕ ಹಂತಕ್ಕೆ ತಂದು ನಿಲ್ಲಿಸಿದರು. ಅಂತಿಮ ಎಸೆತದಲ್ಲಿ ಗೆಲುವಿಗೆ 5 ರನ್​ ಬೇಕಿದ್ದಾಗ ಇದನ್ನು ಬಾರಿಸುವಲ್ಲಿ ರಶೀದ್​ ಎಡವಿದರು. ಡೆಲ್ಲಿ ರೋಚಕ 4 ರನ್​ಗಳ ಗೆಲುವು ಸಾಧಿಸಿತು.

Exit mobile version