Site icon Vistara News

DC vs MI: ಮೊದಲ ಗೆಲುವಿನ ನಿರೀಕ್ಷೆಯಲ್ಲಿ ಮುಂಬೈ; ಡೆಲ್ಲಿ ಎದುರಾಳಿ

IPL 2024

ಮುಂಬಯಿ: ಹ್ಯಾಟ್ರಿಕ್​ ಸೋಲಿನಿಂದ ಕಂಗೆಟ್ಟಿರುವ ಹಾರ್ದಿಕ್​ ಪಾಂಡ್ಯ(hardik pandya) ನೇತೃತ್ವದ ಮುಂಬೈ ಇಂಡಿಯನ್ಸ್(DC vs MI) ಭಾನುವಾರದ ಐಪಿಎಲ್​(IPL 2024) ಡಬಲ್​ ಹೆಡರ್​ನ ಹಗಲು ಪಂದ್ಯದಲ್ಲಿ ಗೆಲುವಿನ ಆತ್ಮವಿಶ್ವಾಸದಲ್ಲಿ ಕಣಕ್ಕಿಳಿಯಲಿದೆ. ಡೆಲ್ಲಿ ಕ್ಯಾಪಿಟಲ್ಸ್​ ವಿರುದ್ಧ ತವರಿನ ವಾಂಖೆಡೆ ಸ್ಟೇಡಿಯಂನಲ್ಲಿ ಸೆಣಸಾಟ ನಡೆಸಲಿದೆ.

ಸೂರ್ಯಕುಮಾರ್​ ಆಗಮನ


ಹಾರ್ಡ್​ ಹಿಟ್ಟರ್​ ಸೂರ್ಯಕುಮಾರ್(suryakumar yadav)​ ಅವರ ಆಗಮನ ಪಾಂಡ್ಯ ಪಡೆಗೆ ಆನೆ ಬಲ ಬಂದಂತಾಗಿದೆ. ಮಧ್ಯಮ ಕ್ರಮಾಂಕದಲ್ಲಿ ವೈಫಲ್ಯ ಕಾಣುತ್ತಿದ ತಂಡಕ್ಕೆ ಇದೀಗ ಸೂರ್ಯಕುಮಾರ್​ ಬಲ ನೀಡಲಿದ್ದಾರೆ. ಕಳೆದ ವರ್ಷ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಗಾಯಗೊಂಡಿದ್ದ ಸೂರ್ಯ ಆ ಬಳಿಕ ಸರಿ ಸುಮಾರು 5 ತಿಂಗಳಿನಿಂದ ಕ್ರಿಕೆಟ್​ ಆಡಿಲ್ಲ. ಹೀಗಾಗಿ ಅವರನ್ನೇ ತಂಡ ಹೆಚ್ಚು ನಂಬಿ ಕುಳಿತುಕೊಳ್ಳಬಾರದು. ಏಕೆಂದರೆ ಅವರ ಫಾರ್ಮ್​ ಹೇಗಿದೆ ಎನ್ನುವುದು ತಿಳಿದಿಲ್ಲ.

ನಾಯಕತ್ವ ಬದಲಾವಣೆಯನ್ನು ಎಲ್ಲ ಆಟಗಾರರು ಕೂಡ ಒಪ್ಪಿಕೊಂಡು ಒಗ್ಗಟ್ಟಿನಿಂದ ಆಡ ಬೇಕಿದೆ. ಎಲ್ಲದಕ್ಕೂ ಪಾಂಡ್ಯ ಅವರನ್ನೇ ಟಾರ್ಗೆಟ್ ಮಾಡುವುದು ಸರಿಯಲ್ಲ. ಜತೆಗೆ ಪಾಂಡ್ಯ ಕೂಡ ಕೋಚಿಂಗ್​ ಸ್ಟಾಫ್​ ಹೇಳುವ ಯೋಜನೆಗೆ ಬದ್ಧರಾಗಿ ನಿರ್ಧಾರ ಕೈಗೊಳ್ಳಬೇಕು. ಜತೆಗೆ ತಂಡದಲ್ಲಿರುವ ಅನುಭವಿ ಆಟಗಾರರ ಸಲಹೆಯನ್ನು ಕೂಡ ಗಂಭೀರವಾಗಿ ತೆಗೆದುಕೊಳ್ಳಬೇಕು. ದ್ವೇಷ ಸಾಧನೆ ಮಾಡುತ್ತಲೇ ಹೋದರೆ ಪಂದ್ಯವನ್ನು ಗೆಲ್ಲುವುದು ಕಷ್ಟ. ಕೇವಲ ‘ಒನ್​ ಫ್ಯಾಮಿಲಿ'( ಒಂದು ಕುಟುಂಬ) ಎಂದು ಸ್ಲೋಗನ್‌ ಹಾಕಿಕೊಂಡರೆ ಸಾಲದು ಇದಕ್ಕೆ ಬದ್ಧರಾಗಿರಬೇಕು.

ಡೆಲ್ಲಿಗೆ ಹಲವು ಚಿಂತೆ


ಎದುರಾಳಿ ಡೆಲ್ಲಿ ತಂಡ ಬೆರಳೆಣಿಕೆಯ ಅನುಭವಿ ಆಟಗಾರರನ್ನು ಹೊಂದಿದೆ. ತಂಡದಲ್ಲಿ ಬಹುಪಾಲು ಅನಾನುಭವಿಗಳಿದ್ದಾರೆ. ಲಭ್ಯವಿರುವ ಅನುಭವಿಗಳು ಕೂಡ ಕಳಪೆ ಫಾರ್ಮ್​ನಿಂದ ಬಳಲುತ್ತಿದ್ದಾರೆ. ಹೀಗಾಗಿ ಯಾರನ್ನು ಆಡಿಸುವುದು, ಯಾರನ್ನು ಕೈ ಬಿಡುವುದು ಎನ್ನುವುದೇ ದೊಡ್ಡ ಚಿಂತೆಯಾಗಿದೆ. ನಾಯಕ ಪಂತ್​ ಮಾತ್ರ ಏಕಾಂಗಿ ಹೋರಾಟ ನಡೆಸುತ್ತಿದ್ದಾರೆ. ಕಳೆದ ಏಕದಿನ ವಿಶ್ವಕಪ್​ ಟೂರ್ನಿಯಲ್ಲಿ ಪ್ರಚಂಡ ಬ್ಯಾಟಿಂಗ್​ ಫಾರ್ಮ್​ನಲ್ಲಿದ್ದ ಆಸ್ಟ್ರೇಲೀಯಾದ ಮಿಚೆಲ್​ ಮಾರ್ಚ್​ ಪ್ರತಿ ಪಂದ್ಯದಲ್ಲಿಯೂ ಶೂನ್ಯ ಸುತ್ತುತ್ತಿದ್ದಾರೆ. ವಾರ್ನರ್​ ಆರಂಭದ 2 ಓವರ್​ಗಳ ಆಟದಲ್ಲಿ ಅಬ್ಬರಿಸಿ ಬಳಿಕ ವಿಕೆಟ್​ ಕೈಚೆಲ್ಲುತ್ತಿದ್ದಾರೆ. ಬೌಲಿಂಗ್​ ಕೂಡ ಸಾಧಾರಣ ಮಟ್ಟದಲ್ಲಿದೆ ಖಲೀಲ್​ ಅಹ್ಮದ್​, ಜೋರ್ಜೆ ಮತ್ತು ಇಶಾಂತ್​ 10ರ ಸರಾಸರಿಯಲ್ಲಿ ರನ್​ ಬಿಟ್ಟುಕೊಡುತ್ತಿದ್ದಾರೆ.

ಇದನ್ನೂ ಓದಿ IPL 2024: ಆರ್​ಸಿಬಿ ಪಂದ್ಯಕ್ಕೆ ಭೂಕಂಪದ ಭೀತಿ; ತಡರಾತ್ರಿ ರಾಜಸ್ಥಾನದಲ್ಲಿ ಕಂಪಿಸಿದ ಭೂಮಿ

ವಾಂಖೆಡೆ ಸ್ಟೇಡಿಯಂ ಐಪಿಎಲ್​ ರೆಕಾರ್ಡ್


ಮುಂಬಯಿಯ ವಾಂಖೆಡೆ ಕ್ರಿಕೆಟ್​ ಸ್ಟೇಡಿಯಂನಲ್ಲಿ ಇದುವರೆಗೆ 110 ಐಪಿಎಲ್​ ಪಂದ್ಯಗಳು ನಡೆದಿವೆ. ಈ ಪೈಕಿ 50 ಪಂದ್ಯಗಳನ್ನು ಮೊದಲು ಬ್ಯಾಟಿಂಗ್​ ಮಾಡಿದ ಮತ್ತು 60 ಪಂದ್ಯಗಳನ್ನು ಚೇಸಿಂಗ್​ ಮಾಡಿದ ತಂಡಗಳು ಜಯಿಸಿದೆ. ಇಲ್ಲಿನ ಎವರೇಜ್​ ಮೊದಲ ಇನಿಂಗ್ಸ್​ ಮೊತ್ತ 168.60. ಇಲ್ಲಿ ದಾಖಲಾದ ಗರಿಷ್ಠ ಮೊತ್ತ ಒಂದು ವಿಕೆಟ್​ಗೆ 235 ರನ್​. ಇದು 2015ರಲ್ಲಿ ಮುಂಬೈ ಮತ್ತು ಆರ್​ಸಿಬಿ ನಡುವಣ ಪಂದ್ಯದಲ್ಲಿ ದಾಖಲಾಗಿತ್ತು. ಕಳೆದ 10 ಪಂದ್ಯಗಳ ರೆಕಾರ್ಡ್ ನೋಡುವುದಾದರೆ ಇಲ್ಲಿ 9 ಬಾರಿ ಚೇಸಿಂಗ್​ ನಡೆಸಿದ ತಂಡವೇ ಗೆದ್ದು ಬೀಗಿದೆ. ಹೀಗಾಗಿ ಟಾಸ್​ ಗೆದ್ದ ತಂಡ ಮೊದಲು ಫೀಲ್ಡಿಂಗ್​ಗೆ ಆದ್ಯತೆ ನೀಡಬಹುದು.

ಸಂಭಾವ್ಯ ತಂಡಗಳು


ಮುಂಬೈ ಇಂಡಿಯನ್ಸ್​:
ಇಶಾನ್ ಕಿಶನ್ (ವಿಕೆಟ್​ ಕೀಪರ್​), ರೋಹಿತ್ ಶರ್ಮಾ, ಸೂರ್ಯಕುಮಾರ್​ ಯಾದವ್​, ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ (ನಾಯಕ), ಟಿಮ್ ಡೇವಿಡ್, ಜೆರಾಲ್ಡ್ ಕೋಟ್ಜಿ, ಪಿಯೂಷ್ ಚಾವ್ಲಾ, ಆಕಾಶ್ ಮಧ್ವಲ್, ಜಸ್​ಪ್ರೀತ್​ ಬುಮ್ರಾ, ಕ್ವೇನಾ ಮಫಕಾ.

ಡೆಲ್ಲಿ ಕ್ಯಾಪಿಟಲ್ಸ್​: ಪೃಥ್ವಿ ಶಾ, ಡೇವಿಡ್ ವಾರ್ನರ್, ಮಿಚೆಲ್ ಮಾರ್ಷ್, ರಿಷಭ್ ಪಂತ್ (ನಾಯಕ), ಟ್ರಿಸ್ಟಾನ್ ಸ್ಟಬ್ಸ್, ಅಕ್ಷರ್ ಪಟೇಲ್, ಸುಮಿತ್ ಕುಮಾರ್, ರಸಿಖ್ ದಾರ್ ಸಲಾಂ, ಅನ್ರಿಚ್ ನಾರ್ಜೆ, ಇಶಾಂತ್ ಶರ್ಮಾ, ಖಲೀಲ್ ಅಹ್ಮದ್.

Exit mobile version