ದೋಹಾ : ಭಾನುವಾರ ರಾತ್ರಿ (ಡಿಸೆಂಬರ್ 18) ನಡೆಯಲಿರುವ ಫಿಫಾ ವಿಶ್ವ 2022ರ (FIFA World Cup)ಫೈನಲ್ ಪಂದ್ಯದಲ್ಲಿ ಗೆಲ್ಲುವ ತಂಡಕ್ಕೆ ಮೂಲ ಟ್ರೋಫಿಯನ್ನು ನೀಡದಿರಲು ನಿರ್ಧರಿಸಲಾಗಿದೆ. ಬದಲಾಗಿ ಅದನ್ನೇ ಹೋಲುವ ಚಿನ್ನದ ಟ್ರೋಫಿಯನ್ನು ವಿತರಿಸಲಾಗುತ್ತದೆ ಎಂದು ಸುದ್ದಿಯಾಗಿಯಾಗಿದೆ. ಹೀಗಾಗಿ ಫೈನಲ್ನಲ್ಲಿ ಫ್ರಾನ್ಸ್ ಅಥವಾ ಅರ್ಜೆಂಟೀನಾ ತಂಡ ಗೆಲುವು ಸಾಧಿಸಿದರೆ ಅವರಿಗೆ ಚಿನ್ನದಿಂದ ತಯಾರಿಸಿದ ಬೇರೆ ಕಪ್ ನೀಡಲಾಗುತ್ತದೆ. ಆಟಗಾರರು ಅದನ್ನು ಹಿಡಿದುಕೊಂಡು ಸಂಭ್ರಮಾಚರಣೆ ಮಾಡಬೇಕಾಗಿದೆ.
ಫಿಫಾ ವಿಶ್ವ ಕಪ್ನ ಟ್ರೋಫಿಯನ್ನು ಇದುವರೆಗೆ ಪ್ರದರ್ಶನಕ್ಕೆ ಇಡಲಾಗಿತ್ತು ಹಾಗೂ ಫುಟ್ಬಾಲ್ ಅಭಿಮಾನಿಗಳು ಅದನ್ನು ನೋಡಿ ಸಂತಸಪಟ್ಟಿದ್ದಾರೆ. ಅದರೆ, ಭಾನುವಾರ ರಾತ್ರಿ ಅದನ್ನು ಗೆದ್ದ ತಂಡಕ್ಕೆ ನೀಡಲಾಗುವುದಿಲ್ಲ. ವಾಪಸ್ ಸ್ವಿಜರ್ಲೆಂಡ್ನ ಜ್ಯೂರಿಚ್ನಲ್ಲಿರುವ ಫಿಫಾ ಕಚೇರಿಗೆ ಸಾಗಿಸಲಾಗುತ್ತದೆ. ಅಷ್ಟೇ ಗಾತ್ರದ ಟ್ರೋಫಿಯನ್ನು ಗೆದ್ದ ತಂಡಕ್ಕೆ ನೀಡಲಾಗುತ್ತದೆ.
ಹಿಂದೆಲ್ಲ ಗೆದ್ದ ತಂಡಗಳಿಗೆ ಮೂಲ ಟ್ರೋಫಿಯನ್ನು ನೀಡಲಾಗುತ್ತಿತ್ತು ಹಾಗೂ ಮುಂದಿನ ಆವೃತ್ತಿಯ ವಿಶ್ವ ಕಪ್ಗೆ ಮೊದಲು ಅದನ್ನು ಫಿಫಾ ಕಚೇರಿಗೆ ಮರಳಿಸಲಾಗುತ್ತಿತ್ತು. ಬಳಿಕ ಕಪ್ ಗೆದ್ದಿರುವ ದೇಶಗಳು ಅದನ್ನು ಕಾಪಾಡಿಕೊಳ್ಳುವ ಕುರಿತು ಆಕ್ಷೇಪಗಳು ಕೇಳಿ ಬಂದ ಹಾಗೂ ಸಮಯಕ್ಕೆ ಸರಿಯಾಗಿ ವಾಪಸ್ ನೀಡದಿರುವ ಘಟನೆಗಳು ಸಂಭವಿಸಿದ ಹಿನ್ನೆಲೆಯಲ್ಲಿ ಪ್ರತಿಕೃತಿ ನೀಡುವ ಕ್ರಮ ಚಾಲ್ತಿಗೆ ಬಂತು. ಅಂತೆಯೇ ಈ ಬಾರಿಯೂ ಫ್ರಾನ್ಸ್ ಅಥವಾ ಅರ್ಜೆಂಟೀನಾ ತಂಡಕ್ಕೆ ಮೂಲಕ ಟ್ರೋಫಿ ದೊರೆಯುವುದಿಲ್ಲ.
ಫಿಫಾ ವಿಶ್ವ ಕಪ್ ಮೂಲ ಟ್ರೋಫಿ 18 ಕ್ಯಾರೆಟ್ ಚಿನ್ನದ್ದು. ಅದು 36.8 ಸೆಂಟಿ ಮೀಟರ್ ಎತ್ತರವಿದ್ದು 6 ಕೆ.ಜಿ 142 ಗ್ರಾಮ್ ತೂಗುತ್ತದೆ. ಇಂಥದ್ದೇ ಟ್ರೋಫಿ ಗೆದ್ದ ತಂಡಕ್ಕೆ ಲಭಿಸಲಿದೆ. ಇಟಲಿಯ ಕರಕುಶಲ ಕರ್ಮಿಗಳು ಈ ಟ್ರೋಫಿಯನ್ನು ತಯಾರಿಸಿದ್ದಾರೆ.
ಇದನ್ನೂ ಓದಿ | Fifa World Cup | ಫಿಫಾ ವಿಶ್ವ ಕಪ್ ಫೈನಲ್ ಪಂದ್ಯದಲ್ಲಿ ಟೀಮ್ ಇಂಡಿಯಾದ ನೆಚ್ಚಿನ ತಂಡ ಯಾವುದು; ರಾಹುಲ್ ಹೇಳಿದ ಉತ್ತರವೇನು?