ನವದೆಹಲಿ: ಎಂಎಸ್ ಧೋನಿ ಐಪಿಎಲ್ 2024 ರ ನಂತರ ನಿವೃತ್ತಿ ಹೊಂದಲು ನಿರ್ಧರಿಸಿದರೆ ಐಪಿಎಲ್ 2025 ರ ಮೆಗಾ ಹರಾಜಿನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್ಕೆ) ರಿಷಭ್ ಪಂತ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳುವದು ಖಚಿತ ಎಂದು ಭಾರತದ ಮಾಜಿ ವಿಕೆಟ್ ಕೀಪರ್ ದೀಪ್ ದಾಸ್ ಗುಪ್ತಾ ಹೇಳಿದ್ದಾರೆ.
ದೀಪ್ದಾಸ್ಗುಪ್ತಾ ಹೇಳಿಕೆ ವಿಡಿಯೊ ಇಲ್ಲಿದೆ
Will Rishabh Pant move to CSK? Here’s what I feel. #deeppoint #cricket #indiancricketer #ipl #trending #viral #csk #dc pic.twitter.com/tgZQ9D3KRp
— Deep Dasgupta (@DeepDasgupta7) December 2, 2023
ರಿಷಭ್ ಪಂತ್ 2016 ರಲ್ಲಿ ಐಪಿಎಲ್ಗೆ ಪಾದಾರ್ಪಣೆ ಮಾಡಿದಾಗಿನಿಂದ ಡೆಲ್ಲಿ ಕ್ಯಾಪಿಟಲ್ಸ್ (ಡಿಸಿ) ಪರ 98 ಪಂದ್ಯಗಳನ್ನು ಆಡಿದ್ದಾರೆ. ಒಂದು ಶತಕ ಮತ್ತು 15 ಅರ್ಧಶತಕಗಳೊಂದಿಗೆ 34.61 ಸರಾಸರಿ ಮತ್ತು 147.97 ಸ್ಟ್ರೈಕ್ ರೇಟ್ನಲ್ಲಿ 2838 ರನ್ ಗಳಿಸಿದ್ದಾರೆ. ಐಪಿಎಲ್ 2021 ಮತ್ತು 2022ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಮುನ್ನಡೆಸಿದ್ದರು.
ಪಂತ್ ಅವರು ಡಿಸೆಂಬರ್ 2022ರಲ್ಲಿ ಸಂಭವಿಸಿದ ಭೀಕರ ಕಾರು ಅಪಘಾತದ ವೇಳೆ ಉಂಟಾದ ಗಾಯದಿಂದ ಸ್ಥಿರವಾಗಿ ಚೇತರಿಸಿಕೊಳ್ಳುತ್ತಿದ್ದಾರೆ. ಅದೇ ಕಾರಣಕ್ಕೆ ಐಪಿಎಲ್ 2023 ಅನ್ನು ತಪ್ಪಿಸಿಕೊಂಡಿದ್ದರು. ಪಂತ್ ಉತ್ತಮ ಸ್ಥಿತಿಯಲ್ಲಿದ್ದಾರೆ ಮತ್ತು ಐಪಿಎಲ್ 2024 ರಲ್ಲಿ ತಂಡವನ್ನು ಮುನ್ನಡೆಸಲಿದ್ದಾರೆ ಎಂದು ಡಿಸಿ ಕ್ರಿಕೆಟ್ ನಿರ್ದೇಶಕ ಸೌರವ್ ಗಂಗೂಲಿ ಹೇಳಿದ್ದಾರೆ. ಹೀಗಾಗಿ ಅವರು ಈ ಬಾರಿ ಆಡುವುದು ಖಚಿತ ಎನ್ನಲಾಗಿದೆ.
ಈ ಬಾರಿಯೂ ಆಡಲಿದ್ದಾರೆ ಧೋನಿ
ಸಿಎಸ್ಕೆ ತಂಡ ಐಪಿಎಲ್ 2023ರ ಆವೃತ್ತಿಯಲ್ಲಿ ಚಾಂಪಿಯನ್ ಆದ ಬಳಿಕ ನಾಯಕ ಎಂಎಸ್ ಧೋನಿ ಮೊಣಕಾಲು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಅಂದಿನಿಂದ ಅವರು ಚೇತರಿಸಿಕೊಳ್ಳುತ್ತಿದ್ದಾರೆ. ಐಪಿಎಲ್ 2024 ರ ಹರಾಜಿಗೆ ಮುಂಚಿತವಾಗಿ ಸಿಎಸ್ಕೆ ಧೋನಿಯನ್ನು ಉಳಿಸಿಕೊಂಡಿರುವುದರಿಂದ, ಅವರು ಮುಂದಿನ ವರ್ಷ ಐಪಿಎಲ್ನಲ್ಲಿ ಆಡುವುದು ಖಚಿತವಾಗಿದೆ.
ಐಪಿಎಲ್ 2025 ರ ಹೊತ್ತಿಗೆ ಎಂಎಸ್ ಧೋನಿಗೆ ಸುಮಾರು 44 ವರ್ಷ ವಯಸ್ಸಾಗಲಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಸಿಎಸ್ಕೆ ತಮ್ಮ ಬಲಿಷ್ಠ ನಾಯಕನ ಬದಲಿಯಾಗಿ ಪಂತ್ ಅವರನ್ನು ತಂಡಕ್ಕೆ ಕರೆತರಬಹುದು ಭಾರತದ ಮಾಜಿ ಕೀಪರ್ ದೀಪ್ ದಾಸ್ಗುಪ್ತಾ ಹೇಳಿಕೆ ನೀಡಿದ್ದಾರೆ.
ಇದನ್ನೂ ಓದಿ : Virat kohli : ಪಂಚೆ ಉಟ್ಟು ಹೋದರೆ ಕೊಹ್ಲಿಯ ರೆಸ್ಟೋರೆಂಟ್ಗೆ ಪ್ರವೇಶವಿಲ್ಲ!
ಐಪಿಎಲ್ 2025ರ ವೇಳೆಗೆ ರಿಷಭ್ ಪಂತ್ ಚೆನ್ನೈ ಸೇರಿದರೆ ಆಶ್ಚರ್ಯ ಪಡಬೇಡಿ. ಎಂಎಸ್ ಧೋನಿ ಮತ್ತು ರಿಷಭ್ ಪಂತ್ಗೆ ತುಂಬಾ ಸಾಮ್ಯತೆಗಳಿವೆ. ನಿಸ್ಸಂಶಯವಾಗಿ ರಿಷಭ್ ಅವರು ಎಂಎಸ್ ಧೋನಿಯನ್ನು ಆರಾಧಿಸುತ್ತಾರೆ. ಎಂಎಸ್ ಕೂಡ ಅವರನ್ನು ತುಂಬಾ ಇಷ್ಟಪಡುತ್ತಾರೆ. ಅವರು ಒಟ್ಟಿಗೆ ಸಾಕಷ್ಟು ಸಮಯ ಕಳೆಯುತ್ತಾರೆ. ಅವರ ಸಂಪರ್ಕ ಮತ್ತು ರಿಷಭ್ ಅವರ ಆಲೋಚನೆ ತುಂಬಾ ಹೋಲುತ್ತದೆ, ಅವರು ತುಂಬಾ ಆಕ್ರಮಣಕಾರಿ ಮತ್ತು ಸಕಾರಾತ್ಮಕವಾಗಿದ್ದಾರೆ. ಅವರು ಯಾವಾಗಲೂ ಗೆಲ್ಲುವ ಬಗ್ಗೆ ಮಾತನಾಡುತ್ತಾರೆ” ಎಂದು ದಾಸ್ಗುಪ್ತಾ ಹೇಳಿದ್ದಾರೆ.
ದುಬೈನಲ್ಲಿ ಮಿನಿ ಹರಾಜು
ಇಂಡಿಯನ್ ಪ್ರೀಮಿಯರ್ ಲೀಗ್ 2024 (IPL 2024) ರ ಮಿನಿ ಹರಾಜು ಡಿಸೆಂಬರ್ 19 ರಂದು ದುಬೈನಲ್ಲಿ ನಡೆಯಲಿದೆ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಭಾನುವಾರ ದೃಢಪಡಿಸಿದೆ. ಅಂದ ಹಾಗೆ ವಿದೇಶದಲ್ಲಿ ಐಪಿಎಲ್ ಹರಾಜು ನಡೆಯುತ್ತಿರುವುದು ಇದೇ ಮೊದಲು. ಆದರೆ, ಮೂರು ಬಾರಿ ವಿದೇಶಿ ನೆಲದಲ್ಲಿ ಟೂರ್ನಿ ನಡೆದಿದೆ.
ಮಿನಿ ಹರಾಜಿಗೆ 1166 ಆಟಗಾರರು ತಮ್ಮ ಹೆಸರನ್ನು ನೋಂದಾಯಿಕೊಂಡಿದ್ದಾರೆ ಎಂದು ವರದಿಗಳು ಸೂಚಿಸಿವೆ. ಈ ಪಟ್ಟಿಯಲ್ಲಿ 212 ಅಂತಾರಾಷ್ಟ್ರೀಯ ಪಂದ್ಯವಾಡಿದವರು , 909 ಅಂತಾರಾಷ್ಟ್ರೀಯ ಕ್ರಿಕೆಟ್ ಆಡದವರು ಮತ್ತು 45 ಅಸೋಸಿಯೇಟ್ ಆಟಗಾರರು ಇದ್ದಾರೆ. ಈ ಪೈಕಿ ವಿದೇಶಿ ಆಟಗಾರರ ಸಂಖ್ಯೆ 336.