ಕತಾರ್ : ಡಿಸೆಂಬರ್ 18ರಂದು ರಾತ್ರಿ ಕತಾರ್ನಲ್ಲಿ ನಡೆದ ಫಿಫಾ ವಿಶ್ವ ಕಪ್ ಫೈನಲ್ ಪಂದ್ಯಕ್ಕೆ ಮೊದಲು ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಟ್ರೋಫಿಯನ್ನು ಅನಾವರಣ ಮಾಡಿದ್ದಾರೆ. ಅವರ ಜತೆ ಸ್ಪೇನ್ನ ಫುಟ್ಬಾಲ್ ಆಟಗಾರ ಇಕೆರ್ ಕಾಸಿಲಾ ಅವರೂ ಇದ್ದರು. ವಿಶ್ವದ ಶ್ರೀಮಂತ ಹಾಗೂ ಜನಪ್ರಿಯ ಕ್ರೀಡೆಯ ವಿಶ್ವ ಕಪ್ನಲ್ಲಿ ಟ್ರೋಫಿ ಅನಾವರಣ ಮಾಡಲು ಅವಕಾಶ ಪಡೆದ ದೀಪಿಕಾ ಪಡುಕೋಣೆ ಆ ಬಗ್ಗೆ ಸಂಭ್ರಮ ವ್ಯಕ್ತಪಡಿಸಿದ್ದಾರೆ. ಕಾರ್ಯಕ್ರಮ ಮುಗಿದ ಬಳಿಕ ರೋಚಕವಾಗಿ ನಡೆದ ಅರ್ಜೆಂಟೀನಾ ಹಾಗೂ ಫ್ರಾನ್ಸ್ ನಡುವಿನ ಫೈನಲ್ ಪಂದ್ಯವನ್ನೂ ವೀಕ್ಷಿಸಿದರು. ಅವರೊಂದಿಗೆ ಪತಿ ರಣವೀರ್ ಸಿಂಗ್ ಕೂಡ ಇದ್ದರು. ಪಂದ್ಯ ಕೌತುಕವನ್ನು ಅನುಭವಿಸಿದ ಜೋಡಿ ಹಕ್ಕಿಗಳಂತೆ ಕುಣಿದು ಕುಪ್ಪಳಿಸಿದ್ದಾರೆ.
ದೀಪಿಕಾ ಹಾಗೂ ರಣವೀರ್ ಸಿಂಗ್ ಮ್ಯಾಚ್ ನೋಡಿ ಸಂಭ್ರಮಿಸುತ್ತಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ದೀಪಿಕಾ ಕಪ್ಪು ಬಣ್ಣದ ಗೌನ್ ಮಾದರಿಯ ವಸ್ತ್ರ ಧರಿಸಿದ್ದರೆ, ರಣವೀರ್ ಸಿಂಗ್ ಕೆಂಪು ಬಣ್ಣದ ವಸ್ತ್ರದೊಂದಿಗೆ ಮಿಂಚಿದ್ದರು. ರಣವೀರ್ ಅವರು ಹಸಿರು ಬಣ್ಣದ ಟೋಪಿಯನ್ನೂ ಧರಿಸಿದ್ದರು. ಪಂದ್ಯ ಕುತೂಹಲದ ಘಟ್ಟಕ್ಕೆ ತೆರಳುತ್ತಿದ್ದಂತೆ ಅವರಿಬ್ಬರೂ ಬಿಗಿದಪ್ಪಿ ಹಿಡಿದುಕೊಂಡು ಸಂಭ್ರಮಿಸಿದ್ದರು.
ನಟ ರಣವೀರ್ ಅವರು ತಾವಿಬ್ಬರೂ ಪಂದ್ಯ ವೀಕ್ಷಣೆ ಮಾಡುತ್ತಿರುವ ವಿಡಿಯೊವನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸಿದ್ದಾರೆ. ಅಲ್ಲದೆ, ವಿಶ್ವ ಕಪ್ನ ಜತೆ ನನ್ನ ಟ್ರೋಫಿಯೂ ಇದೆ ಎಂದು ಹೇಳಿದ್ದಾರೆ. ಇದೊಂದು ಅಪರೂಪದ ಕ್ಷಣಗಳು. ಐತಿಹಾಸಿಕ ಕ್ಷಣಗಳಿವು, ಎಂದ ಬರೆದುಕೊಂಡಿದ್ದಾರೆ.
ಇದನ್ನೂ ಓದಿ | Shahrukh Khan | ದೀಪಿಕಾ ಪಡುಕೋಣೆ ವೇಷಭೂಷಣ ಆಕ್ಷೇಪಾರ್ಹ: ಮಧ್ಯಪ್ರದೇಶ ಗೃಹ ಸಚಿವ ನರೋತ್ತಮ್ ಮಿಶ್ರಾ