Site icon Vistara News

Deepti Sharma | ದೀಪ್ತಿ ಶರ್ಮ ರನ್‌ಔಟ್‌ ಮಾಡಿದ ರೀತಿ ಸರಿಯಾ, ತಪ್ಪಾ? ಮತ್ತೊಮ್ಮೆ ಮಂಕಡ್‌ ಚರ್ಚೆ

deepti sharma

ಲಂಡನ್‌: ಶನಿವಾರ ನಡೆದ ಭಾರತ ಹಾಗೂ ಇಂಗ್ಲೆಂಡ್‌ ಮಹಿಳೆಯರ ತಂಡಗಳ ನಡುವಿನ ಏಕ ದಿನ ಸರಣಿಯ ಕೊನೇ ಪಂದ್ಯದಲ್ಲಿ ಭಾರತದ ಸ್ಪಿನ್‌ ಬೌಲರ್‌ ದೀಪ್ತಿ ಶರ್ಮ (Deepti Sharma) ಚಾರ್ಲಿ ಡೀನ್‌ ಅವರನ್ನು ರನ್‌ ಔಟ್‌ ಮಾಡಿದ ರೀತಿ ಚರ್ಚೆಗೆ ಆಸ್ಪದ ನೀಡಿದೆ. ಐಸಿಸಿ ನಿಯಮದ ಪ್ರಕಾರ ರನ್ಔಟ್‌ ಸರಿಯಾಗಿದ್ದರೂ, ದೀಪ್ತಿ ಮಾಡಿದ್ದು ಸರಿ ಮತ್ತು ತಪ್ಪು ಎಂಬ ಸಾಮಾಜಿಕ ಜಾಲತಾಣಗಳ ಚರ್ಚೆ ಜೋರಾಗಿ ನಡೆಯಿತು.

ಭಾರತ ತಂಡ ನೀಡಿದ ೧೭೦ ರನ್‌ಗಳಿಗೆ ಪ್ರತಿಯಾಗಿ ಬ್ಯಾಟ್‌ ಮಾಡಿದ ಇಂಗ್ಲೆಂಡ್‌ ತಂಡ ಒಂದು ಹಂತದಲ್ಲಿ ೧೧೮ ರನ್‌ಗಳಿಗೆ ೯ ವಿಕೆಟ್‌ ಕಳೆದುಕೊಂಡು ಸೋಲಿನ ಸುಳಿಗೆ ಸಿಲುಕಿತ್ತು. ಈ ವೇಳೆ ಕ್ರಿಸ್‌ಗಂಟಿ ಆಡಿದ ಇಂಗ್ಲೆಂಡ್‌ ಬ್ಯಾಟರ್‌ ಚಾರ್ಲಿ ಡೀನ್‌ ೪೭ ರನ್‌ ಬಾರಿಸಿದ್ದರು. ಕೊನೇ ಬ್ಯಾಟರ್‌ ಫ್ರೇ ಡೇವಿಡ್‌ ೧೦ ರನ್‌ ಬಾರಿಸಿ ಭಾರತದ ಗೆಲುವು ಕಸಿಯುವ ಯೋಜನೆ ರೂಪಿಸಿದ್ದರು. ಅಂತೆಯೇ ಇನಿಂಗ್ಸ್‌ನ ೪೩ನೇ ಓವರ್‌ ಎಸೆಯುತ್ತಿದ್ದ ದೀಪ್ತಿ ಶರ್ಮ ಮೂರನೇ ಎಸೆತ ಎಸೆಯಲು ಮುಂದಾದಾಗ ನಾನ್‌ಸ್ಟ್ರೈಕ್‌ ಎಂಡ್‌ನಲ್ಲಿದ್ದ ಚಾರ್ಲಿ ಡೀನ್‌ ಕ್ರೀಸ್‌ನಿಂದ ಮುಂದಕ್ಕೆ ಹೋದರು. ಅದನ್ನು ಗಮನಿಸಿದ ದೀಪ್ತಿ ಬೇಲ್ಸ್‌ ಎಗರಿಸಿದರು.

ಈ ಹಿಂದೆ ಈ ರೀತಿ ಬೇಲ್ಸ್‌ ಎಗರಿಸುವುದನ್ನು ಮಂಕಡಿಂಗ್‌ ಎನ್ನಲಾಗುತ್ತಿತ್ತು. ಆದರೆ, ಐಸಿಸಿ ಕೆಲವು ದಿನಗಳ ಹಿಂದೆಯಷ್ಟೇ ಅದನ್ನು ರನ್‌ಔಟ್‌ ಎಂದು ನಿಯಮ ರೂಪಿಸಿತ್ತು. ಹೀಗಾಗಿ ದೀಪ್ತಿ ಮನವಿಯನ್ನು ಅಂಪೈರ್ ಪುರಸ್ಕರಿಸಿದರು. ಹೀಗಾಗಿ ನಿಯಮ ಪ್ರಕಾರ ದೀಪ್ತಿ ಮಾಡಿದ್ದು ಸರಿಯಾಗಿದೆ. ಆದರೆ, ಕೆಲವು ಕ್ರಿಕೆಟ್‌ ಪ್ರೇಮಿಗಳು ಅದು ಸರಿಯಲ್ಲ ಎಂದು ಈಗಲೂ ವಾದ ಮಾಡುತ್ತಿದ್ದಾರೆ.

ತಮ್ಮನ್ನು ಔಟ್‌ ಮಾಡಿದ ರೀತಿ ಚಾರ್ಲಿ ಕೂಡ ಬೇಸರ ವ್ಯಕ್ತಪಡಿಸಿದರು. ಅಲ್ಲದೆ, ದುಖಿತರಾಗಿ ಮೈದಾನದಲ್ಲೇ ಕಣ್ಣಿರು ಹಾಕಿದರು.

ನಾಯಕಿಯ ಬೆಂಬಲ

ಪಂದ್ಯದ ಬಳಿಕ ಮಾತನಾಡಿದ ಭಾರತ ತಂಡದ ನಾಯಕಿ ಹರ್ಮನ್‌ಪ್ರೀತ್‌ ಸಿಂಗ್‌ ಕೂಡ ದೀಪ್ತಿ ಶರ್ಮ ಅವರ ರನ್‌ಔಟ್‌ ಅನ್ನು ಬೆಂಬಲಿಸಿದ್ದಾರೆ. ಅದಕ್ಕೆ ಐಸಿಸಿ ನಿಯಮದ ಬೆಂಬಲವಿದೆ. ಅಲ್ಲದೆ, ನನ್ನ ತಂಡದ ಆಟಗಾರರು ಮಾಡಿದ್ದನ್ನು ನಾನು ಸಮರ್ಥಿಸಿಕೊಳ್ಳುತ್ತೇನೆ ಎಂದು ಹೇಳಿದ್ದಾರೆ.

ಅಷ್ಟಕ್ಕೂ ದೀಪ್ತಿ ಶರ್ಮ ಅವರು ಕೊನೇ ಪಂದ್ಯದ ಗೆಲುವಿನ ರೂವಾರಿ. ಬ್ಯಾಟಿಂಗ್‌ನಲ್ಲೂ ಅವರು ಅಜೇಯ ೬೮ ರನ್‌ ಬಾರಿಸಿದ್ದರು.

ಇದನ್ನೂ ಓದಿ |Team India | ಜೂಲನ್‌ಗೆ ಸರಣಿ ಕ್ಲೀನ್‌ ಸ್ವೀಪ್‌ ಜಯದ ವಿದಾಯ, ಭಾರತಕ್ಕೆ 16 ರನ್‌ ಭರ್ಜರಿ ಗೆಲುವು

Exit mobile version