ದೋಹಾ : ಪಂದ್ಯದ ಮುಕ್ತಾಯ ಹಂತದಲ್ಲಿ ಕೇಶೆರ್ ಫುಲ್ಲರ್ (೮೧ನೇ ನಿಮಿಷ) ಬಾರಿಸಿದ ಏಕೈಕ ಗೋಲ್‌ನ ನೆರವು ಪಡೆದ ಕೋಸ್ಟರಿಕಾ ತಂಡವು ಫಿಫಾ ವಿಶ್ವ ಕಪ್‌ನಲ್ಲಿ (FIFA World Cup) ಭಾನುವಾರ ನಡೆದ ಪಂದ್ಯದಲ್ಲಿ ಎದುರಾಳಿ ಜಪಾನ್ ವಿರುದ್ಧ ೧-೦ ಗೋಲ್‌ಗಳ ವಿಜಯ ಸಾಧಿಸಿತು. ಕೋಸ್ಟರಿಕಾ ತಂಡಕ್ಕೆ ಇದು ಹಾಲಿ ಆವೃತ್ತಿಯಲ್ಲಿ ಮೊದಲ ಜಯವಾಗಿದ್ದರೆ, ಮೊದಲ ಪಂದ್ಯದಲ್ಲಿ ಜಯಗಳಿಸಿ ಹುಮ್ಮಸ್ಸಿನಲ್ಲಿದ್ದ ಜಪಾನ್ ತಂಡಕ್ಕೆ ನಿರಾಸೆ ಎದುರಾಯಿತು.
ಪಂದ್ಯದ ಆರಂಭದಿಂದಲೂ ಜಪಾನ್ ತಂಡ ಚೆಂಡಿನ ಮೇಲೆ ಹಿಡಿತ ಸಾಧಿಸಿಕೊಂಡಿತ್ತು. ಅಲ್ಲದೆ ಐದು ಬಾರಿ ಕಾರ್ನರ್ ಅವಕಾಶವನ್ನೂ ಪಡೆದುಕೊಂಡಿತ್ತು. ಆದರೆ, ಈ ಸಂದರ್ಭವನ್ನು ಗೋಲಾಗಿ ಪರಿವರ್ತಿಸಲು ವಿಫಲಗೊಂಡು ಸೋಲೊಪ್ಪಿಕೊಂಡಿತು. ೨೨ ಬಾರಿ ತಪ್ಪುಗಳನ್ನು ಮಾಡಿದ ಜಪಾನ್‌ಗೆ ಅದುವೇ ಶಾಪವಾಗಿ ಪರಿಣಮಿಸಿತು.
ದಿನದ ಮತ್ತೊಂದು ಪಂದ್ಯದಲ್ಲಿ ಫಿಫಾ ಶ್ರೇಯಾಂಕ ಪಟ್ಟಿಯಲ್ಲಿ ೨ನೇ ಸ್ಥಾನದಲ್ಲಿರುವ ಬೆಲ್ಜಿಯಮ್ ತಂಡಕ್ಕೆ ೨೨ನೇ rank ಹೊಂದಿರುವ ಮೊರಾಕ್ಕೊ ತಂಡ ಭರ್ಜರಿ ಆಘಾತ ನೀಡಿತು. ಅಲ್ ತುಮಾಮಾ ಸ್ಟೇಡಿಯಮ್‌ನಲ್ಲಿ ನಡೆದ ಪಂದ್ಯದಲ್ಲಿ ಮೊರಾಕ್ಕೊ ತಂಡ ೨-೦ ಗೋಲ್‌ಗಳಿಂದ ಜಯ ಸಾಧಿಸಿತು. ಮೊರಾಕ್ಕೊ ಪರ ರೊಮೈನ್ ಸಾಯಿಸ್ (೭೩ನೇ ನಿಮಿಷ) ಹಾಗೂ ಜಕಾರಿಯಾ ಅಬೊಖಲಾಲ್ (೯೦+೨ ನೇ ನಿಮಿಷ) ತಲಾ ಒಂದು ಗೋಲ್ ಬಾರಿಸಿದರು.
ಈ ಸೋಲಿನೊಂದಿಗೆ ಬೆಲ್ಜಿಯಮ್ ತಂಡ ಎಫ್ ಗುಂಪಿನ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೆ ಇಳಿಯಿತು ಹಾಗೂ ನಾಕೌಟ್ ಪ್ರವೇಶದ ಹಾದಿಯನ್ನು ಕಠಿಣಗೊಳಿಸಿತು.
ಇದನ್ನೂ ಓದಿ | Fifa World Cup | ಅರ್ಜೆಂಟೀನಾ ತಂಡದ ಪಂದ್ಯ ನೋಡಲು ರಜೆ ಅರ್ಜಿ ಬರೆದ ಕೇರಳದ ವಿದ್ಯಾರ್ಥಿಗಳು!