Site icon Vistara News

IPL 2023 : ಬಲಿಷ್ಠ ಗುಜರಾತ್​ ತಂಡವನ್ನು5 ರನ್​​ಗಳಿಂದ ಮಣಿಸಿದ ಡೆಲ್ಲಿ ಕ್ಯಾಪಿಟಲ್ಸ್​

#image_title

ಅಹಮದಾಬಾದ್​: ಅಮನ್​ ಹಕಿಮ್​ ಖಾನ್​ (51) ಬಾರಿಸಿದ ಸಮಯೋಚಿತ ಅರ್ಧ ಶತಕ ಹಾಗೂ ಬೌಲರ್​ಗಳ ಸಾಹಸದಿಂದ ಮಿಂಚಿದ ಡೆಲ್ಲಿ ಕ್ಯಾಪಿಟಲ್ಸ್​ ತಂಡ ಐಪಿಎಲ್​ 16ನೇ ಆವೃತ್ತಿಯ 44ನೇ ಪಂದ್ಯದಲ್ಲಿ ಗುಜರಾತ್ ಟೈಟನ್ಸ್​ ತಂಡದ ವಿರುದ್ಧ 5 ರನ್​ಗಳ ರೋಚಕ ವಿಜಯ ದಾಖಲಿಸಿತು. ಇದು ಕೂಡ ಹಾಲಿ ಆವೃತ್ತಿಯ ಐಪಿಎಲ್​ನ ಲಾಸ್ಟ್​ ಬಾಲ್​ ಥ್ರಿಲ್​ ಮ್ಯಾಚ್​. ಕೊನೇ ಓವರ್​ನ ಕೊನೇ ಎಸೆತದ ತನಕವೂ ಈ ಪಂದ್ಯ ಕುತೂಹಲ ಉಳಿಸಿಕೊಂಡಿತ್ತು. ಅಂತಿಮವಾಗಿ ಡೆಲ್ಲಿ ಬೌಲರ್​​ ಇಶಾಂತ್ ಶರ್ಮಾ ಎದುರಾಳಿಗೆ ಬೇಕಾದ 12 ರನ್​ಗಳಲ್ಲಿ ಕೇವಲ ಆರು ರನ್​ ನೀಡಿ ಗೆಲುವು ತಂದುಕೊಟ್ಟರು.

ಇಲ್ಲಿನ ನರೇಂದ್ರ ಮೋದಿ ಸ್ಟೇಡಿಯಮ್​​ನಲ್ಲಿ ನಡೆದ ಹಣಾಹಣಿಯಲ್ಲಿ ಟಾಸ್ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್​ ತಂಡ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಆದರೆ, ತಂಡದ ಬ್ಯಾಟರ್​​ಗಳು ನಿರ್ಧಾರಕ್ಕೆ ತಕ್ಕ ಹಾಗೆ ಬ್ಯಾಟಿಂಗ್​ ಮಾಡಲಿಲ್ಲ. ಹೀಗಾಗಿ 20 ಓವರ್​ಗಳಲ್ಲಿ 8 ವಿಕೆಟ್​ ನಷ್ಟಕ್ಕೆ 130 ರನ್​ ಬಾರಿಸಿತು. ಪ್ರತಿಯಾಗಿ ಬ್ಯಾಟ್​​ ಮಾಡಿದ ಗುಜರಾತ್ ತಂಡ ತನ್ನ ಪಾಲಿನ ಓವರ್​ಗಳು ಮುಕ್ತಾಯಗೊಂಡಾಗ 6 ವಿಕೆಟ್​ ನಷ್ಟಕ್ಕೆ 125 ರನ್ ಬಾರಿಸಿ ಸೋಲೊಪ್ಪಿಕೊಂಡಿತು. ಇದು ಕೂಡ ಹಾಲಿ ಆವೃತ್ತಿಯ ಐಪಿಎಲ್​ನ ಕಡಿಮೆ ರನ್​ಗಳ ಪಂದ್ಯವಾಗಿದೆ. ಡೆಲ್ಲಿ ತಂಡದ ಪರವಾಗಿ ಖಲೀಲ್​ ಅಹಮದ್​ 24 ರನ್​ಗಳಿಗೆ 2 ವಿಕೆಟ್​ ಉರುಳಿಸಿದರೆ, ಇಶಾಂತ್ ಶರ್ಮಾ 23 ರನ್​ಗಳಿಗೆ 2 ವಿಕೆಟ್​ ತೆಗೆದರು.

ದೊಡ್ಡ ಮೊತ್ತದ ರನ್​ ಕೂಡಿಕೆ ಮಾಡುವ ಉದ್ದೇಶದೊಂದಿಗೆ ಬ್ಯಾಟ್​ ಮಾಡಿದ ಡೆಲ್ಲಿ ತಂಡ ಹೀನಾಯ ಪ್ರದರ್ಶನ ನೀಡಿತು. ಆರಂಭಿಕ ಬ್ಯಾಟರ್​​ಗಳಾದ ಫಿಲ್ ಸಾಲ್ಟ್​ ಶೂನ್ಯಕ್ಕೆ ಔಟಾದರೆ ಡೇವಿಡ್​ ವಾರ್ನರ್ ಅನಗತ್ಯ ರನ್​ಔಟ್​ಗೆ ಬಲಿಯಾದರು. ಪ್ರಿಯಮ್ ಗರ್ಗ್​ ಕೊಡುಗೆ 10 ರನ್​. ಮಾರ್ಶ್​ ಬದಲಿಗೆ ಆಡುವ ಅವಕಾಶ ಪಡೆದ ರಿಲೀ ರೊಸ್ಸೊ ಬಂದ ಹಾಗೆ ಎರಡು ಫೋರ್​ ಬಾರಿಸಿ ವಿಶ್ವಾಸ ಮೂಡಿಸಿದರೂ ಹೆಚ್ಚು ಹೊತ್ತು ಕ್ರಿಸ್​ನಲ್ಲಿ ನಿಲ್ಲಲಿಲ್ಲ. ಮನೀಶ್ ಪಾಂಡೆಯ ಇನಿಂಗ್ಸ್​ 1 ರನ್​​ಗೆ ಕೊನೆಯಾಯಿತು. 23 ರನ್​ಗಳಿಗೆ 5 ವಿಕೆಟ್​ ಕಳೆದುಕೊಂಡ ಡೆಲ್ಲಿ 100 ರನ್ ಮಾಡುವುದೂ ಕಷ್ಟ ಎನಿಸಿತ್ತು.

ಅಕ್ಷರ್ ಪಟೇಲ್​ ಎಂದಿನಂತೆ ಆಡಿ 27 ರನ್ ಬಾರಿಸಿ ಔಟಾದರು. ಈ ವೇಳೆ ಜತೆಯಾದ ಅಮನ್​ ಖಾನ್​ ಹಾಗೂ ರಿಪಾಲ್​ ಪಟೇಲ್​ (23) ತಂಡದ ಮೊತ್ತವನ್ನು 100ರ ಗಡಿ ದಾಟಿಸಿದರು. ಹೀಗಾಗಿ ಸ್ಪರ್ಧಾತ್ಮಕ ಮೊತ್ತ ಪೇರಿಸಲು ತಂಡಕ್ಕೆ ನೆರವಾಯಿತು.

ನೆರವಾದ ಅಮನ್​

ಆರಂಭಿಕ ಹಿನ್ನಡೆಯೊಂದಿಗೆ ಕುಸಿದಿದ್ದ ಡೆಲ್ಲಿ ತಂಡಕ್ಕೆ ಅಮನ್​ ಖಾನ್​ ಅನಿರೀಕ್ಷಿತವಾಗಿ ನೆರವಾದರು. ಅರಂಭದಲ್ಲ ನಿಧಾನವಾಗಿ ಆಡಿದ ಅವರು 3 ಸಿಕ್ಸರ್ ಹಾಗೂ 3 ಫೊರ್​​ಗಳೊಂದಿಗೆ ಅರ್ಧ ಶತಕ ಬಾರಿಸಿದರು. ಅವರು ರಿಪಾಲ್ ಪಟೇಲ್ ಜತೆ ಸೇರಿ 56 ರನ್​ಗಳ ಜತೆಯಾಟ ನೀಡಿದರು.

ಗುಜರಾ್ ತಂಡದ ಪರವಾಗಿ ಮೊಹಮ್ಮದ್​ ಶಮಿ 11 ರನ್​ಗಳಿಗೆ 4 ವಿಕೆಟ್ ಪಡೆದು ಮಿಂಚಿದರೆ, ಮೋಹಿತ್​ ಶರ್ಮಾ 33 ರನ್​​ಗಳಿಗೆ 2 ವಿಕೆಟ್​ ತಮ್ಮದಾಗಿಸಿಕೊಂಡರು.

ರನ್​ ಗಳಿಸಲು ಗುಜರಾತ್​ ಪರದಾಟ

ಸಣ್ಣ ಮೊತ್ತವನ್ನು ಬೆನ್ನಟ್ಟಲು ಆರಂಭಿಸಿದ ಗುಜರಾತ್ ತಂಡವೂ ಹಿನ್ನಡೆಗೆ ಒಳಗಾಯಿತು. ವೃದ್ದಿಮಾನ್ ಸಾಹಾ ಶೂನ್ಕ್ಕೆ ಔಟಾದರೆ, ಶುಭ್​ಮನ್​ ಗಿಲ್​ 6 ರನ್​ಗೆ ಪೆವಿಲಿಯನ್​ ಸೇರಿದರು. ಮೂರನೇ ಕ್ರಮಾಂಕದಲ್ಲಿ ಬಂದ ಹಾರ್ದಿಕ್ ಪಾಂಡ್ಯ 59 ರನ್​ ಬಾರಿ ಏಕಾಂಗಿ ಹೋರಾಟ ನಡೆಸಿದರೂ ಗೆಲುವು ತಂದುಕೊಡಲು ನಾಯಕನಿಗೆ ಸಾಧ್ಯವಾಗಲಿಲ್ಲ. ವಿಜಯ್ ಶಂಕರ್​ 6 ರನ್​ಗಳಿಗೆ ಔಟಾದರೆ, ಆಪತ್ಭಾಂದವ ಡೇವಿಡ್​ ಮಿಲ್ಲರ್ ಶೂನ್ಯಕ್ಕೆ ಔಟಾದರು. ಅಭಿನವ್​ ಮನೋಹರ್​ 26 ರನ್ ಕೊಡುಗೆ ಕೊಟ್ಟರು. ಕೊನೇ ಹಂತದಲ್ಲಿ ಮೂರು ಸಿಕ್ಸರ್ ಸಿಡಿಸಿ 20 ರನ್ ಬಾರಿಸಿದ ರಾಹುಲ್ ತೆವಟಿಯಾ ಡೆಲ್ಲಿ ತಂಡಕ್ಕೆ ಭಯ ಹುಟ್ಟಿಸಿದರೂ ಕೊನೇ ಓವರ್​ನಲ್ಲಿ ಔಟಾದರು, ರಶೀದ್​ ಖಾನ್​ 3 ರನ್ ಕೊಡುಗೆ ಕೊಟ್ಟರು.

Exit mobile version