ನವದೆಹಲಿ: ಲೈಂಗಿಕ ಕಿರುಕುಳದ ಆರೋಪ ಹೊತ್ತಿರುವ ಭಾರತೀಯ ಕುಸ್ತಿ ಫೆಡರೇಶನ್‌ನ ನಿರ್ಗಮಿತ ಅಧ್ಯಕ್ಷ ಬ್ರಿಜ್‌ಭೂಷಣ್ ಶರಣ್ ಸಿಂಗ್(Brij Bhushan Sharan Singh) ವಿರುದ್ಧ ದೆಹಲಿ ಪೊಲೀಸರು(Delhi Police) ಗುರುವಾರ ನ್ಯಾಯಾಲಯಕ್ಕೆ ಚಾರ್ಜ್‌ಶೀಟ್(Chargesheet) ಸಲ್ಲಿಸುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ. ಇಂದು ಮಧ್ಯಾಹ್ನ 12ರ ಸುಮಾರಿಗೆ ದೆಹಲಿ ಮ್ಯಾಜಿಸ್ಪ್ರೇಟ್ ಕೋರ್ಚ್‌ಗೆ ಪೊಲೀಸರು ಆರೋಪ ಪಟ್ಟಿ ಸಲ್ಲಿಸಲಿದ್ದಾರೆ ಎಂದು ತಿಳಿದುಬಂದಿದೆ.
ಮೂಲಗಳ ಪ್ರಕಾರ ಈಗಾಗಲೇ ಪೊಲೀಸರು ಸುಮಾರು 180ಕ್ಕೂ ಹೆಚ್ಚು ಮಂದಿಯನ್ನು ವಿಚಾರಣೆ ನಡೆಸಿದ್ದು, 120ಕ್ಕೂ ಹೆಚ್ಚು ಸಾಕ್ಷಿಗಳು ಲಭ್ಯವಾಗಿವೆ ಎಂದು ತಿಳಿದುಬಂದಿದೆ. ಜೂನ್ 7ರಂದು ಕುಸ್ತಿಪಟುಗಳ ಜತೆ ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್(Anurag Thakur) ಅವರು ಸುದೀರ್ಘ ಚರ್ಚೆ ನಡೆಸಿದ ಬಳಿಕ ಕುಸ್ತಿಪಟುಗಳು ಜೂನ್ 15ರ ತನಕ ತಮ್ಮ ಪ್ರತಿಭಟನೆಯನ್ನು(Wrestlers Protest) ಸ್ಥಗಿತಗೊಳಿಸಿದ್ದರು. ಸಭೆಯ ಬಳಿಕ ಮಾತನಾಡಿದ್ದ ಅನುರಾಗ್, ಜೂನ್ 15ರೊಳಗೆ ಬ್ರಿಜ್‌ಭೂಷಣ್ ವಿರುದ್ಧ ಆರೋಪ ಪಟ್ಟಿ ಸಲ್ಲಿಕೆಯಾಗಲಿದೆ ಎಂದಿದ್ದರು. ಇದರಂತೆ ಗುರುವಾರ ಬ್ರಿಜ್‌ಭೂಷಣ್ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಸಲಾಗುವುದು ಎಂದು ವರದಿಯಾಗಿದೆ.
ಒಂದೊಮ್ಮೆ ಇಂದು ಬ್ರಿಜ್ ಭೂಷಣ್ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದಿದ್ದರೆ ಕುಸ್ತಿಪಟುಗಳು ಯಾವ ನಿರ್ಧಾರ ಕೈಗೊಳ್ಳಲಿದ್ದಾರೆ ಎನ್ನುವುದು ತಿಳಿದುಬಂದಿಲ್ಲ. ಇಂದು ಜೂನ್ 15 ಕುಸ್ತಿಪಟುಗಳು ನೀಡಿದ ಗಡುವು ಕೂಡ ಇದಾಗಿದೆ. ಹೀಗಾಗಿ ಕುಸ್ತಿಪಟುಗಳ ಮುಂದಿನ ನಡೆ ಏನು ಎಂದು ಕಾದು ನೋಡಬೇಕಿದೆ.
ಇದನ್ನೂ ಓದಿ Wrestlers Protest : ಕುಸ್ತಿಪಟುಗಳು ಹೋರಾಟದ ನಡುವೆ ಡಬ್ಲ್ಯುಎಫ್ಐಗೆ ಜುಲೈ 6ರಂದು ಚುನಾವಣೆ
ಕಳೆದ ವಾರವಷ್ಟೇ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧದ ಲೈಂಗಿಕ ಕಿರುಕುಳದ ಆರೋಪ ಪ್ರಕರಣಕ್ಕೆ ಮಹತ್ವದ ತಿರುವೊಂದು ಲಭಿಸಿತ್ತು. ದೂರು ನೀಡಿದ ಅಪ್ರಾಪ್ತ ಕುಸ್ತಿಪಟುವಿನ ತಂದೆ ಯೂ-ಟರ್ನ್ ಹೊಡೆದಿದ್ದರು. ಬ್ರಿಜ್ ಭೂಷಣ್ ವಿರುದ್ಧ ಸುಳ್ಳು ಲೈಂಗಿಕ ಕಿರುಕುಳದ ದೂರು ನೀಡಿರುವುದಾಗಿ ಹೇಳಿಕೆ ನೀಡಿದ್ದರು. ಹೀಗಾಗಿ ಬ್ರಿಜ್ ಭೂಷಣ್ ವಿರುದ್ಧ ಚಾರ್ಜ್‌ಶೀಟ್ ದಾಖಲಾದರೂ ಅವರಿಗೆ ಶಿಕ್ಷೆಯಾಗಲಿದೆಯಾ ಎಂಬುದು ಕುತೂಹಲ.