Site icon Vistara News

Devdutt Padikkal: ಆರೋಗ್ಯ ಸಮಸ್ಯೆಗೆ ಸಡ್ಡು ಹೊಡೆದು ಎದ್ದುಬಂದ ಪಡಿಕ್ಕಲ್​ ಭಾರತ ಟೆಸ್ಟ್​ ಕ್ಯಾಪ್​ ಧರಿಸುವುದು ಖಚಿತ

Devdutt Padikkal

ಧರ್ಮಶಾಲಾ: ಇಂಗ್ಲೆಂಡ್ ನಡುವಣ 5ನೇ ಟೆಸ್ಟ್(India vs England 5th Test) ಪಂದ್ಯದಲ್ಲಿ ಟೀಮ್ ಇಂಡಿಯಾ ಪರ ಕರ್ನಾಟಕ ತಂಡದ ಯುವ ಎಡಗೈ ಬ್ಯಾಟರ್​ ದೇವದತ್ತ್​ ಪಡಿಕ್ಕಲ್ (Devdutt Padikkal) ಕಣಕ್ಕಿಳಿಯುವ ಮೂಲಕ ಭಾರತ ಟೆಸ್ಟ್​ಗೆ ಪದಾರ್ಪಣೆ ಮಾಡುವುದು ಬಹುತೇಕ ಖಚಿತವಾಗಿದೆ. ಕಳಪೆ ಬ್ಯಾಟಿಂಗ್​ ಪ್ರದರ್ಶನ ತೋರಿದ ರಜತ್ ಪಾಟೀದರ್​ ಸ್ಥಾನದಲ್ಲಿ ಪಡಿಕ್ಕಲ್​ ಆಡುವುದು ನಿಶ್ಚಿತ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.

ಕೇರಳ ಮೂಲದ ಆಟಗಾರ


ಬಹುತೇಕರು ದೇವದತ್ತ್​ ಪಡಿಕ್ಕಲ್​ ಅವರನ್ನು ಕನ್ನಡಿಗ ಎಂದು ಕರೆಯುತ್ತಾರೆ. ಆದರೆ, ಪಡಿಕ್ಕಲ್ ಕೇರಳ ಮೂಲದವರು. ಹೌದು, ಪಡಿಕ್ಕಲ್​ ಜನಿಸಿದ್ದು ಕೇರಳ ರಾಜ್ಯದ ಎಡಪ್ಪಲ್ ಎಂಬ ಪಟ್ಟಣದಲ್ಲಿ. ಕೇರಳದಲ್ಲಿ ಹುಟ್ಟಿದ್ದರೂ ಕೂಡ ಪಡಿಕ್ಕಲ್ ತನ್ನ ಬಾಲ್ಯ ಕಳೆದಿದ್ದು ಹೈದರಾಬಾದ್​ನಲ್ಲಿ. 11 ವರ್ಷವಿದ್ದಾಗ ಬೆಂಗಳೂರಿಗೆ ಬಂದ ಪಡಿಕ್ಕಲ್​ ಇಲ್ಲಿನ ಸೈಂಟ್ ಜೋಸೆಫ್ ಹೈಸ್ಕೂಲ್ ಸೇರಿ ಇಲ್ಲಿಯೇ ಕ್ರಿಕೆಟ್ ಅಭ್ಯಾಸ ಆರಂಭಿಸಿದರು. ಬಳಿಕ ಕರ್ನಾಟಕ ತಂಡದ ಪರ ತಮ್ಮ ಕ್ರಿಕೆಟ್​ ಜರ್ನಿ ಆರಂಭಿಸಿದರು. ಅವರ ಐಪಿಎಲ್​ ಜರ್ನಿ ಕೂಡ ಆರಂಭವಾದದ್ದು ಕನ್ನಡಿಗರ ನೆಚ್ಚಿನ ತಂಡವಾದ ರಾಯಲ್​ ಚಾಲೆಂಜರ್ಸ್ ಬೆಂಗಳೂರು ತಂಡದ ಪರ. ಸದ್ಯ ಪಡಿಕ್ಕಲ್​ ಅಪ್ಟಟ ಕನ್ನಡಿಗ ಕೆ.ಎಲ್​ ಸಾರಥ್ಯದ ಲಕ್ನೋ ಸೂಪರ್​ ಜೈಂಟ್ಸ್​ ತಂಡದ ಸದಸ್ಯನಾಗಿದ್ದಾರೆ.

ಸವಾಲುಗಳನ್ನು ಮೆಟ್ಟಿನಿಂತ ಪಡಿಕ್ಕಲ್​


ಪಡಿಕ್ಕಲ್​ ಅವರ ಕ್ರಿಕೆಟ್​ ಜರ್ನಿಯ ಆರಂಭಿಕ ದಿನಗಳು ತುಂಬಾ ಯಶಸ್ಸಿನಿಂದ ಕೂಡಿತ್ತು. ಆದರೆ, ಬಳಿಕ ಅವರು ಅನಾರೋಗ್ಯದ ಸಮಸ್ಯೆಗಳನ್ನು ಎದುರಿಸಿದರು. ಸರಿ ಸುಮಾರು ನಾಲ್ಕು ವರ್ಷಗಳಿಂದ ಆರೋಗ್ಯ ಸಮಸ್ಯೆಯಿಂದ ಬಳಲಿದ ಅವರು ಒಂದು ವರ್ಷ ಸಂಪೂರ್ಣವಾಗಿ ಕ್ರಿಕೆಟ್​ನಿಂದ ದೂರ ಉಳಿದಿದ್ದರು. ಏನೇ ಆದರೂ ಕೂಡ ಛಲ ಬಿಡಿದ 23 ವರ್ಷದ ಈ ಕ್ರಿಕೆಟಿಗ ಎಲ್ಲ ಸವಾಲನ್ನು ಮೆಟ್ಟಿ ನಿಂತು ಇದೀಗ ಭಾರತ ಪರ ಟೆಸ್ಟ್​ನಲ್ಲಿ ಪದಾರ್ಪಣೆ ಮಾಡುವ ತವಕದಲ್ಲಿದ್ದಾರೆ. ಅನಾರೋಗ್ಯ ಕಾಡದಿದ್ದಿದ್ದರೆ ಅವರು ಮೂರು ವರ್ಷಗಳ ಹಿಂದೆಯೇ ಭಾರತ ಪರ ಟೆಸ್ಟ್​ ಆಡುವ ಸಾಧ್ಯತೆ ಇತ್ತು.

2017ರ ಕೆಪಿಎಲ್ ಸೀಸನ್ ನಲ್ಲಿ ಬೆಂಗಳೂರು ಬ್ಲಾಸ್ಟರ್ಸ್ ವಿರುದ್ಧದ ಪಂದ್ಯದಲ್ಲಿ 72 ರನ್ ಬಾರಿಸಿ ಮಿಂಚು ಹರಿಸಿದ್ದರು. ತಂಡದ ಪರ ಆರಂಭಿಕರಾಗಿ ಕಣಕ್ಕಿಳಿದಿದ್ದ ದೇವದತ್ತ್ ಆ ಋತುವಿನ ಎಮರ್ಜಿಂಗ್ ಆಟಗಾರ ಗೌರವ ಪಡೆದಿದ್ದರು 2018ರಲ್ಲಿ ಕೂಚ್ ಬೆಹರ್ ಕೂಟದಲ್ಲಿ ರಾಜ್ಯ ತಂಡದ ಪರ ಮಿಂಚಿನ ಆಟವಾಡಿದ್ದ ಪಡಿಕ್ಕಲ್, ಕೂಟದಲ್ಲಿ 829 ರನ್ ಬಾರಿಸಿದ್ದರು. ಈ ಕಾರಣದಿಂದ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ನೀಡುವ ‘ಅತ್ಯುತ್ತಮ ಬ್ಯಾಟ್ಸಮನ್’ ಪ್ರಶಸ್ತಿಗೂ ಪಡಿಕ್ಕಲ್ ಪಾತ್ರರಾಗಿದ್ದರು. 2019-20ರಲ್ಲಿ ಕರ್ನಾಟಕ ರಾಜ್ಯ ಮುಖ್ಯ ತಂಡಕ್ಕೆ ಆಯ್ಕೆಯಾದ ಪಡಿಕ್ಕಲ್ ತಮ್ಮ ಪ್ರದರ್ಶನದಿಂದ ಎಲ್ಲರ ಗಮನ ಸೆಳೆದರು. ಆರಡಿ ಉದ್ದದ ಪಡಿಕ್ಕಲ್ ಆ ಋತುವಿನಲ್ಲಿ 1838 ರನ್ ಗಳಿಸಿ ಕರ್ನಾಟಕ ಪರ ಅತೀ ಹೆಚ್ಚು ರನ್ ಗಳಿಸಿದ ಸಾಧನೆ ಮಾಡಿದ್ದರು.

ಇದನ್ನೂ ಓದಿ James Anderson: ಟೆಸ್ಟ್​ನಲ್ಲಿ 700 ವಿಕೆಟ್ ಹೊಸ್ತಿಲಲ್ಲಿರುವ ಆ್ಯಂಡರ್ಸನ್​ ಯಶಸ್ಸಿಗೆ ಜಹೀರ್‌ ಖಾನ್​ ಕೂಡ ಕಾರಣವಂತೆ!

ದೇಶೀಯ ಕ್ರಿಕೆಟ್​ನಲ್ಲಿ ಉತ್ತಮ ಬ್ಯಾಟಿಂಗ್​ ಪ್ರದರ್ಶನ ತೋರಿದ ಅವರನ್ನು 2019ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಖರೀದಿಸಿದ್ದು. ಆದರೆ ಇಡೀ ಆವೃತ್ತಿಯಲ್ಲಿ ಒಂದೇ ಒಂದು ಪಂದ್ಯವಾಡುವ ಅವಕಾಶ ನೀಡದೆ ಬೆಂಚ್ ಕಾಯ್ದಿಸಿತ್ತು. 2020ರಲ್ಲಿ ಯುಎಇನಲ್ಲಿ ನಡೆದ 13ನೇ ಆವೃತ್ತಿಯಲ್ಲಿ ಅವಕಾಶ ಪಡೆದ ಪಡಿಕ್ಕಲ್ ಮೊದಲ ಪಂದ್ಯದಲ್ಲೇ ಅರ್ಧಶತಕ ಸಿಡಿಸಿದ್ದರು. ಆ ಟೂರ್ನಿಯಲ್ಲಿ 473 ರನ್‌ಗಳನ್ನು ಕಲೆಹಾಕಿ ಉದಯೋನ್ಮುಖ ಆಟಗಾರ ಪ್ರಶಸ್ತಿ ಗಳಿಸಿದ್ದರು.

ಕಾಡಿದ ಆರೋಗ್ಯ ಸಮಸ್ಯೆ


2021ರ ಐಪಿಎಲ್‌ನಲ್ಲಿಯೂ ಅವರು 400ಕ್ಕೂ ಹೆಚ್ಚು ರನ್ ಗಳಿಸಿದ್ದರು. ಅದೇ ವರ್ಷ ಶ್ರೀಲಂಕಾ ಎದುರಿನ ಟಿ20 ಸರಣಿಯಲ್ಲಿ ಆಡಲು ಭಾರತ ತಂಡದಲ್ಲಿ ಸ್ಥಾನ ಗಳಿಸಿದ್ದರು. ಅದೇ ವರ್ಷ ಪಡಿಕಲ್ ಆರೋಗ್ಯ ಕೈಕೊಟ್ಟಿತು. ಪಚನಕ್ರಿಯೆಗೆ ಸಂಬಂಧಿಸಿದ ಸಮಸ್ಯೆ ಕಾಡಿ ದೇಹದ ತೂಕ ಇಳಿದುಹೋಯಿತು. ಚೇತರಿಸಿಕೊಳ್ಳಲು ದೀರ್ಘ ಕಾಲ ಹಿಡಿಯಿತು. ಸುಮಾರು ಒಂದೂವರೆ ವರ್ಷ ಅವರು ಕ್ರಿಕೆಟ್‌ ಮರಳಲು ಶ್ರಮಪಡಬೇಕಾಯಿತು. ಹೀಗಾಗಿ ಅವರನ್ನು ಆರ್​ಸಿಬಿ ತಂಡದಿಂದ ಕೈಬಿಟ್ಟಿತು. ರಾಜಸ್ಥಾನ್​ ತಂಡ ಸೇರಿದ ಅವರು ಇಲ್ಲಿಯೂ ನಿರೀಕ್ಷಿತ ಮಟ್ಟದ ಪ್ರದರ್ಶನ ತೋರುವಲ್ಲಿ ಎಡವಿದ್ದರು. ಬಳಿಕ ದೇಶೀಯ ಕ್ರಿಕೆಟ್​ನಲ್ಲಿ ತಮ್ಮ ಬ್ಯಾಟಿಂಗ್​ ಲಯ ಕಂಡುಕೊಂಡು ಈ ಬಾರಿಯ ರಣಜಿ ಟೂರ್ನಿಯಲ್ಲಿ ರಾಜ್ಯ ಪರ ಉತ್ತಮ ರನ್​ ಗಳಿಸಿದ್ದರು. ಗಾಯಗೊಂಡು ಮೂರನೇ ಟೆಸ್ಟ್​ನಿಂದ ರಾಹುಲ್​ ಹೊರ ಬಿದ್ದ ಕಾರಣ ಭಾರತ ತಂಡದಲ್ಲಿ ಸ್ಥಾನ ಪಡೆದ ಪಡಿಕ್ಕಲ್​ ಅಂತಿಮ ಟೆಸ್ಟ್​ನಲ್ಲಿ ಆಡುವ ಬಳಗದಲ್ಲಿ ಕಾಣಿಸಿಕೊಳ್ಳುವುದು ಶೇ.90ರಷ್ಟು ಖಚಿತ ಎನ್ನಬಹುದು.

Exit mobile version