ಬೆಂಗಳೂರು: ಅಂತಾರಾಷ್ಟ್ರೀಯ ಕ್ರಿಕೆಟ್ ಇರಲಿ, ಐಪಿಎಲ್ ಇರಲಿ ಮಹೇಂದ್ರ ಸಿಂಗ್ ಧೋನಿ ಬೆಸ್ಟ್ ಫಿನಿಶರ್ ಎಂಬ ಖ್ಯಾತಿ ಪಡೆದವರು. ಎತ್ತಲೋ ಸಾಗುತ್ತಿರು ಪಂದ್ಯವನ್ನು ಗೆಲುವಿನತ್ತ ತಿರುಗಿಸುವಲ್ಲಿ ಧೋನಿ ನಿಸ್ಸೀಮರು. ಅದಕ್ಕಾರಿ ಬೌಂಡರಿ, ಸಿಕ್ಸರ್ಗಳ ಮಳೆ ಸುರಿಸುತ್ತಾರೆ. ತಮ್ಮ ಐಕಾನಿಕ್ ಹೆಲಿಕಾಪ್ಟರ್ ಶಾಟ್ ಕೂಡ ಬಳಸುತ್ತಾರೆ. ಇಷ್ಟಾದರೂ ಅವರು ಉತ್ತಮ ಫಿನಿಶರ್ ಅಲ್ಲ ಎಂದು ಹೇಳುತ್ತಿದ್ದಾರೆ ಐಪಿಎಲ್ನಲ್ಲಿ ಅವರ ಟೀಮ್ಮೇಟ್ ಹಾಗೂ ದಕ್ಷಿಣ ಆಫ್ರಿಕಾದ ಸ್ಪಿನ್ನರ್ ಇಮ್ರಾನ್ ತಾಹಿರ್. ಅವರ ಪ್ರಕಾರ ವಿಶ್ವದ ಬೆಸ್ಟ್ ಫಿನಿಶರ್ ಆರ್‌ಸಿಬಿ ತಂಡದಲ್ಲಿದ್ದರು.
ಇಮ್ರಾನ್ ತಾಹಿರ್ ಅವರ ಪ್ರಕಾರ ಆರ್ಸಿಬಿಯಲ್ಲಿದ್ದ ಹೊಡೆಬಡಿಯ ದಾಂಡಿಗ ಎಬಿಡಿ ವಿಲಿಯರ್ಸ್ ವಿಶ್ವದ ಬೆಸ್ಟ್ ಫಿನಿಶರ್. ಇಮ್ರಾನ್ ತಾಹಿರ್ ಹಾಗೂ ವಿಲಿಯರ್ಸ್ ದಕ್ಷಿಣ ಆಫ್ರಿಕಾ ತಂಡದಲ್ಲಿ ಜತೆಯಾಗಿ ಆಡಿದವರು. ಹೀಗಾಗಿ ತಮ್ಮ ತಂಡದ ಪರವಾಗಿಯೂ ಹಲವಾರು ಪಂದ್ಯಗಳನ್ನು ಗೆಲ್ಲಿಸುವ ಅನುಭವ ಆಗಿರಬಹುದು. ಅಂದ ಹಾಗೆ 39 ವರ್ಷದ ದಕ್ಷಿಣ ಆಫ್ರಿಕಾ ಮಾಜಿ ನಾಯಕ ಎಬಿ ಡಿ ವಿಲಿಯರ್ಸ್ 2011 ರಿಂದ 2021ವರೆಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪ್ರಮುಖ ಬ್ಯಾಟಿಂಗ್ ಅಸ್ತ್ರವಾಗಿದ್ದರು. ತಮ್ಮ ಸ್ಫೋಟಕ ಬ್ಯಾಟಿಂಗ್ ಮೂಲಕ ಹಲವು ಪಂದ್ಯಗಳನ್ನು ಏಕಾಂಗಿಯಾಗಿ ಗೆಲ್ಲಿಸಿಕೊಟ್ಟಿದ್ದರು. 2011 ಹಾಗೂ 2016ರ ಟೂರ್ನಿಯಲ್ಲಿ ಆರ್‌ಸಿಬಿ ತಂಡವನ್ನು ಫೈನಲ್ ಹಂತಕ್ಕೆ ತಲುಪಿಸುವಲ್ಲಿ ಮಹತ್ತರ ಪಾತ್ರವಹಿಸಿದ್ದರು. ಈ ಹಿನ್ನೆಲೆಯಲ್ಲಿ ಎಬಿಡಿಯನ್ನು ಬೆಸ್ಟ್ ಫಿನಿಶರ್ ಎಂದಿದ್ದಾರೆ ತಾಹಿರ್.
ಆರಂಭಿಕನಾಗಿ ಬ್ಯಾಟಿಂಗ್ ಬರುತ್ತಿದ್ದ ವಿಲಿಯರ್ಸ್ ದೊಡ್ಡ ಮೊತ್ತ ಪೇರಿಸಲು ನೆರವಾಗುತ್ತಿದ್ದರು. ಮಧ್ಯಮ ಕ್ರಮಾಂಕದಲ್ಲೂ ತಮ್ಮ ಸ್ಫೋಟಕ ಬ್ಯಾಟಿಂಗ್ ಮೂಲಕ ರನ್ ಹೊಳೆ ಹರಿಸಿ ತಂಡದ ಗೆಲುವಿನಲ್ಲಿ ಮಹತ್ತರ ಪಾತ್ರ ವಹಿಸುತ್ತಿದ್ದರು. ನನ್ನ ಕ್ರಿಕೆಟ್ ಜೀವನದಲ್ಲಿ ನಾನು ಕಂಡ ವಿಶೇಷ ಫಿನಿಶರ್ ವಿಲಿಯರ್ಸ್ ಎಂದು ಇಮ್ರಾನ್ ತಾಹಿರ್ ಶ್ಲಾಘಿಸಿದ್ದಾರೆ.
ಇದನ್ನೂ ಓದಿ :ರಾಜ ಮಾರ್ಗ ಅಂಕಣ: ಯಲ್ಲೋ ಆರ್ಮಿ ಮತ್ತು ಧೋನಿ ಎಂಬ ಲೆಜೆಂಡ್, ಐಪಿಎಲ್ ಶಿಖರದಲ್ಲಿ ಸಿಎಸ್‌ಕೆ
ಐಪಿಎಲ್ ಟೂರ್ನಿಯಲ್ಲಿ ಅತಿ ಹೆಚ್ಚು ರನ್ ಗಳಿಸಿರುವ ಆಟಗಾರರ ಪೈಕಿ ಕ್ರಮವಾಗಿ 6 ಮತ್ತು 7ನೇ ಸ್ಥಾನಗಳನ್ನು ಕ್ರಮವಾಗಿ ಎಬಿ ಡಿ ವಿಲಿಯರ್ಸ್ (5162 ರನ್, 3 ಶತಕ, 40 ಅರ್ಧ ಶತಕ) ಹಾಗೂ ಮಹೇಂದ್ರ ಸಿಂಗ್ ಧೋನಿ (5039 ರನ್, 22 ಅರ್ಧ ಶತಕ ) ಹೊಂದಿದ್ದಾರೆ. ಧೋನಿ ಮಧ್ಯಮ ಕ್ರಮಾಂಕದಲ್ಲಿಯೇ ಆಡಿದ್ದರೆ, ವಿಲಿಯರ್ಸ್ ಆರಂಭಿಕರಾಗಿ ಮತ್ತು ಮಧ್ಯಮ ಕ್ರಮಾಂಕದಲ್ಲಿಯೂ ಆಡಿದ್ದರು.
ಧೋನಿಯೂ ಕಡಿಮೆಯಿಲ್ಲ
41 ವರ್ಷದ ಧೋನಿ 2023ರ ಸಾಲಿನ ಐಪಿಎಲ್ ಟೂರ್ನಿಯಲ್ಲೂ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಮುನ್ನಡೆಸುತ್ತಿದ್ದಾರೆ. ಅವರು ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ 4 ಬಾರಿ ಪ್ರಶಸ್ತಿ ಗೆದ್ದುಕೊಟ್ಟಿದ್ದಾರೆ. ಇದರ ನಡುವೆ ಅಂತಾರಾಷ್ಟ್ರೀಯ ಕ್ರಿಕೆಟ್ ಹಾಗೂ ಐಪಿಎಲ್ ಟೂರ್ನಿಯ ಹಲವು ಪಂದ್ಯಗಳಲ್ಲಿ ಮ್ಯಾಚ್ ಫಿನಿಷಿಂಗ್ ಪ್ರದರ್ಶನ ತೋರಿದ್ದಾರೆ. 2007 ಹಾಗೂ 2011ರಲ್ಲಿ ಕ್ರಮವಾಗಿ ತಮ್ಮ ನಾಯಕತ್ವದಲ್ಲಿ ಭಾರತಕ್ಕೆ ಟಿ20 ಹಾಗೂ ಏಕದಿನ ವಿಶ್ವಕಪ್ ಪ್ರಶಸ್ತಿಗಳನ್ನು ಗೆದ್ದುಕೊಟ್ಟಿದ್ದಾರೆ.