ನವದೆಹಲಿ: ಭಾರತ ಕ್ರಿಕೆಟ್ ತಂಡದ (Team India) ಮಾಜಿ ನಾಯಕರಾದ ಮಹೇಂದ್ರ ಸಿಂಗ್ ಧೋನಿ ಹಾಗೂ ವಿರಾಟ್ ಕೊಹ್ಲಿಯೆಂದರೆ ಜಾಹೀರಾತುದಾರರಿಗೆ ಅಚ್ಚುಮೆಚ್ಚು. ಅವರು ಬ್ರಾಂಡ್ ಅಂಬಾಸಿಡರ್ಗಳಾದರೆ ಉತ್ಪನ್ನಗಳು ಬಿಸಿಬಿಸಿ ಕಜ್ಜಾಯದಂತೆ ಮಾರಾಟವಾಗುವುದೇ ಅದರ ಹಿನ್ನೆಲೆ. ಹೀಗಾಗಿ ಎಲ್ಲ ಕಂಪನಿಗಳು ಅವರಿಂದ ಜಾಹೀರಾತು ಮಾಡಿಸಲು ಮುಗಿಬೀಳುತ್ತವೆ. ಇಷ್ಟೆಲ್ಲ ಅವಕಾಶಗಳು ಸಿಗುತ್ತಿರುವ ನಡುವೆಯೇ ಈ ಸ್ಟಾರ್ ಆಟಗಾರರು ನಿಯಮಗಳನ್ನು ಉಲ್ಲಂಘಿಸುತ್ತಿರುವುದು ಬೆಳಕಿಗೆ ಬಂದಿದೆ. ಅಡ್ವರ್ಟೈಸಿಂಗ್ ಸ್ಟ್ಯಾಂಡರ್ಡ್ಸ್ ಕೌನ್ಸಿಲ್ ಆಫ್ ಇಂಡಿಯಾ (ಎಎಸ್ಸಿಐ) ವರದಿಯೊಂದನ್ನು ಪ್ರಕಟಿಸಿದ್ದು ಅದರ ಪ್ರಕಾರ ಈ ಇಬ್ಬರು ಆಟಗಾರರ ವಿರುದ್ಧ ಹಲವಾರು ದೂರುಗಳು ದಾಖಲಾಗಿವೆ.
ಭಾರತದಲ್ಲಿ ಜಾಹೀರಾತುಗಳ ನ್ಯಾಯೋಚಿತ ಬಳಕೆಯನ್ನು ಮೇಲ್ವಿಚಾರಣೆ ಮಾಡುವ ಮತ್ತು ಖಚಿತಪಡಿಸುವ ಸಂಸ್ಥೆ ಎಎಸ್ಸಿಐ ಬುಧವಾರ (ಮೇ 17ರಂದು) 2023r ಅರ್ಧವಾರ್ಷಿಕ ದೂರುಗಳ ವರದಿಯನ್ನು ಬಿಡುಗಡೆ ಮಾಡಿದೆ. ಅದರಲ್ಲಿ ಸ್ಟಾರ್ ಆಟಗಾರರು ನಿಯಮ ಉಲ್ಲಂಘನೆ ಮಾಡುತ್ತಿರುವುದು ಬೆಳಕಿಗೆ ಬಂದಿದೆ. ಈ ಪಟ್ಟಿಯಲ್ಲಿ ಧೋನಿಗೆ ಅಗ್ರಸ್ಥಾನವಿದೆ. ಕೊಹ್ಲಿಗೆ ಎಡನೇ ಸ್ಥಾನವಿದೆ. ಇವರಿಬ್ಬರು ಅಲ್ಲದೆ ಇನ್ನೂ ಐವರು ಆಟಗಾರರು ಇದ್ದಾರೆ ಎಂದು ಹೇಳಲಾಗಿದೆ.
ಅಧಿಕೃತ ವರದಿಯ ಪ್ರಕಾರ, ಗೇಮಿಂಗ್ ವಿಭಾಗದಲ್ಲಿ ಜಾಹೀರಾತುದಾರ ಟಿಕ್ಟಾಕ್ ಸ್ಕಿಲ್ ಗೇಮ್ಸ್ ಪ್ರೈವೇಟ್ ಲಿಮಿಟೆಡ್ ಪಾಲಿಸದ ಸೆಲೆಬ್ರಿಟಿಗಳ ಪಟ್ಟಿಯಲ್ಲಿ ಧೋನಿ ಅಗ್ರಸ್ಥಾನದಲ್ಲಿದ್ದಾರೆ. ಅವರು 10 ಸಂದರ್ಭಗಳಲ್ಲಿ ನಿಯಮವನ್ನು ಉಲ್ಲಂಘಿಸಿದ್ದಾರೆ ಎಂದು ಹೇಳಲಾಗಿದೆ. ಮತ್ತೊಂದೆಡೆ, ಜಾಹೀರಾತುದಾರ ಗ್ಯಾಲಕ್ಟಸ್ ಫನ್ವೇರ್ ಟೆಕ್ನಾಲಜಿ ಪ್ರೈವೇಟ್ ಲಿಮಿಟೆಡ್ ಅಡಿಯಲ್ಲಿ ಐದು ಬಾರಿ ಕೆಲಸ ಮಾಡುವ ಮೂಲಕ ಕೊಹ್ಲಿ ನಿಯಮವನ್ನು ಉಲ್ಲಂಘಿಸಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿದೆ.
ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳುವಾಗ ಸೆಲೆಬ್ರಿಟಿಗಳು ತಮ್ಮ ಸೂಕ್ತ ಬದ್ಧತೆಯನ್ನು ಪ್ರದರ್ಶಿಸಬೇಕು ಎಂದು ಗ್ರಾಹಕ ಸಂರಕ್ಷಣಾ ಕಾಯ್ದೆ ಹೇಳುತ್ತದೆ. ಆದರೆ, ಎಎಸ್ಸಿಐ ಪ್ರಕ್ರಿಯೆಗೆ ಒಳಪಡಿಸಿದ ಶೇಕಡಾ 97ರಷ್ಟು ಪ್ರಕರಣಗಳಲ್ಲಿ ಸೆಲೆಬ್ರಿಟಿಗಳು ಯಾವುದೇ ಬದ್ಧತೆಯನ್ನು ಪ್ರದರ್ಶಿಸಿಲ್ಲ ಎನ್ನಲಾಗಿದೆ.
2022-23ರಲ್ಲಿ ಸೆಲೆಬ್ರಿಟಿಗಳ ವಿರುದ್ಧದ ದೂರುಗಳ ಸಂಖ್ಯೆಯಲ್ಲೂ ಗಣನೀಯ ಹೆಚ್ಚಳವಾಗಿದೆ ಎಂದು ಸಂಸ್ಥೆ ವರದಿ ಮಾಡಿದೆ. ಹಿಂದಿನ ವರ್ಷದ 55 ಜಾಹೀರಾತುಗಳ ಬಗ್ಗೆ ದೂರು ದಾಖಲಾಗಿದ್ದರೆ, ಈ ವರ್ಷ 503 ಜಾಹೀರಾತುಗಳ ಬಗ್ಗೆ ದೂರುಗಳು ದಾಖಲಾಗಿವೆ.
ಇದನ್ನೂ ಓದಿ : IPL 2023: ಧೋನಿ ನನ್ನ ಮೊದಲ ನಾಯಕ; ಕೆ.ಎಲ್ ರಾಹುಲ್ ಹೀಗೆ ಹೇಳಲು ಕಾರಣವೇನು?
ಎಂಎಸ್ ಧೋನಿ ಮತ್ತು ವಿರಾಟ್ ಕೊಹ್ಲಿ ಪ್ರಸ್ತುತ ಐಪಿಎಲ್ 2023 ಋತುವಿನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಪ್ರಸ್ತುತ ಐಪಿಎಲ್ನಲ್ಲಿ ಧೋನಿ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್ಕೆ) ತಂಡವನ್ನು ಮುನ್ನಡೆಸುತ್ತಿದ್ದರೆ, ಕೊಹ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ಪರ ಆಡುತ್ತಿದ್ದಾರೆ. ಸಿಎಸ್ಕೆ 13 ಪಂದ್ಯಗಳಿಂದ 15 ಅಂಕಗಳೊಂದಿಗೆ ಐಪಿಎಲ್ 2023 ರ ಪ್ಲೇಆಫ್ ಹಂತಕ್ಕೆ ಬಹುತೇಕ ತೇರ್ಗಡೆಗೊಂಡಿದೆ. ಆದರೆ ಆರ್ಸಿಬಿ ಕೊನೆಯ ಎರಡು ಪಂದ್ಯಗಳನ್ನು ಗೆಲ್ಲಬೇಕಾಗಿದೆ.